Advertisement

15ನೇ ಹಣಕಾಸು ಆಯೋಗ: ನಿಗದಿಯಾಗಿದ್ದ ಬಹುಪಾಲು ಅನುದಾನ ಬಿಡುಗಡೆ

01:05 AM Jan 30, 2023 | Team Udayavani |

ಉಡುಪಿ : ಉಭಯ ಜಿಲ್ಲೆಯ ಗ್ರಾಮ ಪಂಚಾಯತ್‌ಗಳಿಗೆ 2021-22ನೇ ಸಾಲಿನಲ್ಲಿ 15ನೇ ಹಣಕಾಸು ಆಯೋಗದಿಂದ ನಿಗದಿಪಡಿಸಲಾಗಿರುವ ಬಹುಪಾಲು ಅನುದಾನ ಬಿಡುಗಡೆಯಾಗಿದ್ದು, ನಿರ್ದಿಷ್ಟ ಉದ್ದೇಶಕ್ಕೆ ಬಳಕೆಯೂ ಆಗುತ್ತಿದೆ.

Advertisement

2022-23ನೇ ಸಾಲಿಗೆ ಈಗಾಗಲೇ ಕ್ರಿಯಾಯೋಜನೆ ಸಿದ್ಧಪಡಿಸಿ ಕಳುಹಿಸಲಾಗಿದ್ದು, ಆಯೋಗದಿಂದ ಅನುದಾನ ಹಂಚಿಕೆಯ ಆಧಾರದಲ್ಲಿ ನೇರವಾಗಿ ಗ್ರಾ.ಪಂ.ಗಳಿಗೆ ಹಣ ಬರಲಿದೆ. ಇದರಲ್ಲಿ ಜಿ.ಪಂ. ಹಾಗೂ ತಾ.ಪಂ. ಪಾಲನ್ನು ಸರಕಾರವೇ ಪ್ರತ್ಯೇಕಿಸಲಿದೆ.

ದ.ಕ.ದಲ್ಲಿ ಪೂರ್ಣ ಬಳಕೆ
ದ.ಕ. ಜಿಲ್ಲೆಯ 223 ಗ್ರಾ.ಪಂ.ಗಳಿಗೆ 15ನೇ ಹಣಕಾಸು ಆಯೋಗದಿಂದ 2021-22ನೇ ಸಾಲಿಗೆ 67.65 ಕೋ.ರೂ.ಗಳ ಅನುದಾನ ನಿಗದಿಪಡಿಸಿ, ಪೂರ್ಣ ಪ್ರಮಾಣದಲ್ಲಿ ಬಿಡುಗಡೆಯನ್ನು ಮಾಡಲಾಗಿದೆ. ಉಡುಪಿ ಜಿಲ್ಲೆಯ 155 ಗ್ರಾ.ಪಂ.ಗಳಿಗೆ ನಿಗದಿ ಪಡಿಸಿದ್ದ 50.17 ಕೋ.ರೂ.ಗಳಲ್ಲಿ 46.24 ಕೋ.ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ದ.ಕ. ಜಿಲ್ಲೆಯಲ್ಲಿ ಹಂಚಿಕೆಯಾಗಿರುವ ಅನು ದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಉಡುಪಿ ಜಿಲ್ಲೆಗೆ ಇನ್ನು ಅನುದಾನ ಬರಬೇಕಿದೆ. ಹಾಗೆಯೇ ರಾಜ್ಯ ಸರಕಾರ ಶಾಸನಬದ್ಧ ಅನುದಾನದಡಿ ಉಡುಪಿ ಜಿಲ್ಲೆಗೆ 23.45 ಕೋ.ರೂ.ಗೂ ಅಧಿಕ ಹಾಗೂ ದ. ಕ. ಜಿಲ್ಲೆಗೆ 33.77 ಕೋ.ರೂ. ಗೂ ಅಧಿಕ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಕ್ರಿಯಾಯೋಜನೆ
ಪ್ರತಿ ವರ್ಷವೂ ಗ್ರಾ. ಪಂ.ನಿಂದ ಹಣಕಾಸು ಆಯೋಗದ ಅನುದಾನಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಿ ಕಳುಹಿಸಬೇಕು. ಆರ್ಥಿಕ ವರ್ಷದ ಆರಂಭದಲ್ಲಿ ಕ್ರಿಯಾಯೋಜನೆಯ ಅನುಸಾರ ಆಯಾ ಗ್ರಾ.ಪಂ.ಗಳಿಗೆ ನೇರವಾಗಿ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಸರಕಾರದಿಂದ ಗ್ರಾ.ಪಂ., ತಾ.ಪಂ. ಹಾಗೂ ಜಿ.ಪಂಗಳಿಗೆ ಪ್ರತ್ಯೇಕವಾಗಿ ಅನುದಾನವನ್ನು ಮೀಸಲಿಟ್ಟು ಬಿಡುಗಡೆ ಮಾಡಲಾಗುತ್ತದೆ. ಕ್ರಿಯಾಯೋಜನೆಯಲ್ಲಿ ಸೂಚಿಸಿರುವಂತೆ ಅನುದಾನದ ಬಳಕೆಯನ್ನು ಮಾಡಬೇಕಾಗುತ್ತದೆ.

ಬಳಕೆ ಹೇಗೆ?
ಮೀಸಲಿಟ್ಟಿರುವ ಒಟ್ಟು ಅನುದಾನದ ಶೇ.40ರಷ್ಟು ಮೂಲ ಅನುದಾನದ ರೂಪದಲ್ಲಿ ಶೇ.60ರಷ್ಟು ನಿರ್ಬಂದಿತ ಅನುದಾನವಾಗಿ ಪರಿಗಣಿಸಲಾಗುತ್ತದೆ. ಮೂಲ ಅನುದಾನವನ್ನು ಕಚೇರಿ ವೆಚ್ಚ ಅಥವಾ ಸಂಬಳ ಪಾವತಿ ಇತ್ಯಾದಿಗಳಿಗೆ ಬಳಸಲು ಅವಕಾಶ ಇರುವುದಿಲ್ಲ. ಶೇ.60ರಷ್ಟು ಅನುದಾನವನ್ನು ನೈರ್ಮಲ್ಯತೆಗೆ ಆದ್ಯತೆ ನೀಡಿ, ಬಯಲು ಬಹಿರ್ದೆಸೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಕ್ರಮ ವಹಿಸಲು ಬಳಕೆ ಮಾಡಲಾಗುತ್ತದೆ. ಕುಡಿಯುವ ನೀರು ಸರಬರಾಜು, ಮಳೆ ನೀರ ಕೊಯ್ಲು ಮತ್ತು ಮಳೆ ನೀರ ಮರುಬಳಕೆ ಉದ್ದೇಶದಿಂದ ಈ ಅನುದಾನ ಬಳಸಲಾಗುತ್ತದೆ. ಶೇ.60ರಷ್ಟು ಅನುದಾನದಲ್ಲಿ ನಿರ್ದಿಷ್ಟ ಪ್ರಮಾಣವನ್ನು ಕಡ್ಡಾಯವಾಗಿ ಕುಡಿಯುವ ನೀರು ಪೂರೈಕೆಗೆ ಮೀಸಲಿಡಲೇಬೇಕು.

Advertisement

ನೇರ ಗ್ರಾ.ಪಂ.ಗೆ
15ನೇ ಹಣಕಾಸು ಆಯೋಗದಿಂದ ನಿಗದಿಪಡಿಸಿರುವ ಅನುದಾನದಲ್ಲಿ ಬಹುಪಾಲು ಬಂದಿದೆ. ಈ ಅನುದಾನವು ನೇರವಾಗಿ ಆಯಾ ಗ್ರಾ.ಪಂ.ಗಳಿಗೆ ತಲುಪಲಿದೆ. ನಿರ್ದಿಷ್ಟ ಮಾರ್ಗಸೂಚಿಯಂತೆ ಆಯಾ ಉದ್ದೇಶಕ್ಕೆ ಗ್ರಾ. ಪಂ.ಗಳಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.
– ಪ್ರಸನ್ನ ಎಚ್‌., ಸಿಇಒ, ಜಿ.ಪಂ. ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next