ಗೋಕಾಕ: ಬೆಳವಣಿಗೆ ಎಂಬುದು ಬಣಜಿಗರಲ್ಲಿ ಕಂಡುಬರುವ ಅತಿದೊಡ್ಡ ಲಕ್ಷಣ. ಬಣಜಿಗರು ಇತರ ಸಮಾಜ ಬಂಧವರಿಗೆ ಮಾದರಿ ಆಗಿದ್ದಾರೆ ಎಂದು ಬೈಲಹೊಂಗಲದ ಸಾಹಿತಿ ಹಾಗೂ ಪ್ರಾಧ್ಯಾಪಕ ಡಾ| ಸಂಗಮನಾಥ ಲೋಕಾಪೂರ ಅರ್ಥೈಸಿದರು.
ಅವರು ರವಿವಾರ ನಗರದ ತಾ.ಪಂ. ಸಭಾಭವನದಲ್ಲಿ ಕರ್ನಾಟಕ ರಾಜ್ಯ ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ಗೋಕಾಕ ತಾಲೂಕು ಘಟಕದ 15ನೇ ವಾರ್ಷಿಕೋತ್ಸವ ಆಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯು 2ನೇ ವರ್ಷದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಸದಾ ಬಿದ್ದವರನ್ನು ಮೇಲೆತ್ತುವವರ ಪಂಕ್ತಿಯಲ್ಲಿ ಬಣಜಿಗರು ಮುಂಚೂಣಿಯಲ್ಲಿ ಇರುತ್ತಾರೆ ಎಂದು ನುಡಿದರು.
ಇದಕ್ಕೂ ಮೊದಲು ವರ್ತಕ ಮಲ್ಲಿಕಾರ್ಜುನ ಚುನಮರಿ ಅವರು ಜ್ಯೋತಿ ಬೆಳಗಿಸುವ ಮೂಲಕ ಸಮಾರಂಭ ಉದ್ಘಾಟಿಸಿ ಮಾತನಾಡಿ, ಬಣಜಿಗ ಬಾಂಧವರು ಆಚಾರ-ವಿಚಾರಗಳ ಅನುಷ್ಠಾನಕ್ಕೆ ಒತ್ತು ನೀಡಿ ಮುಂದಿನ ಪೀಳಿಗೆ ನಮ್ಮತನವನ್ನು ಕೊಂಡೊಯ್ಯಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಅಥಣಿಯ ಮಲ್ಲಿಕಾರ್ಜುನ ಕನಶೆಟ್ಟಿ ಮಾತನಾಡಿ, ಜೈನರಂತೆಯೇ ಬಣಜಿಗರಿಗೂ ಪ್ರತ್ಯೇಕ ಮೀಸಲಾತಿ ವ್ಯವಸ್ಥೆ ಜಾರಿಗೊಳಿಸಬೇಕಾದ ಅಗತ್ಯವನ್ನು ಪ್ರತಿಪಾದಿಸಿದರು. ಬೆಳಗಾವಿ ಜಿಲ್ಲೆಯ ಪ್ರತಿ ತಾಲೂಕಿಗೊಂದು ಬಣಜಿಗ ಭವನ ನಿರ್ಮಾಣ ಮಾಡುವ ಅವಶ್ಯಕತೆ ಇದೆ ಎಂದ ಅವರು, ರಾಜ್ಯದ ಈ ಮೊದಲಿನ ರಾಜಕಾರಣಿಗಳ ಇತಿಹಾಸವನ್ನು ಗಮಿಸಿದರೆ ಮುತ್ಸದ್ದಿ ರಾಜಕಾರಣಿ ಎಂದೇ ಪ್ರಚಲಿತರಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್ .ನಿಜಿಲಿಂಗಪ್ಪನವರನ್ನು ಹಿಡಿದು ಜಗದೀಶ ಶೆಟ್ಟರ ಅವರ ತನಕ ರಾಜ್ಯವನ್ನು ಹಲವಾರು ನಿಪುಣ ರಾಜಕಾರಣಿಗಳು ಆಳಲಿಲ್ಲವೇ? ಎಂದು ಪ್ರಶ್ನಿಸಿದರು.
ಕಳೆದ ಏಪ್ರೀಲ್-ಮೇ ತಿಂಗಳಲ್ಲಿ ನಡೆದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕೂ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪೊÅàತ್ಸಾಹ ಧನ ಮತ್ತು ಪ್ರಶಂಸಾ ಪ್ರಮಾಣ ಪತ್ರ ನೀಡಿ ಗೌರವಿಸಿ, ಪ್ರೋತ್ಸಾಹಿಸಲಾಯಿತು. ಇದರೊಂದಿಗೆ ಎಂ.ಎಸ್.ಸಿ. ನರ್ಸಿಂಗ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ್‍ಯಾಂಕ್ ಸಂಪಾದಿಸಿದ ದಾನೇಶ್ವರಿ ಕೌಜಲಗಿ ಮತ್ತು ಹಲವಾರು ವಚನಗಳನ್ನು ನಿರರ್ಗಳವಾಗಿ ಪಠಣ ಮಾಡಿ ಲಿಮ್ಕಾ ಬುಕ್ ಆಫ್ ಇಂಡಿಯಾದಲ್ಲಿ ದಾಖಲೆ ಬರೆದ ಮೂರು ವರ್ಷದ ಪುಟಾಣಿ ಕುಮಾರಿ ಶ್ರೀಗೌರಿ ಪಟ್ಟದಕಲ್ ಅವರನ್ನೂ ಗೌರವಿಸಲಾಯಿತು.
ಶೂನ್ಯ ಸಂಪಾದನಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಮಹಿಳಾ ಘಟಕ ಅಧ್ಯಕ್ಷೆ ಶೋಭಾ ಕುರಬೇಟ, ಯುವ ಘಟಕ ಅಧ್ಯಕ್ಷ ಸಂತೋಷ ಮಂತ್ರಣ್ಣವರ, ಗಿರೀಶ ಉದೋಶಿ ಇದ್ದರು.
ಕೆಎಲ್‌ಇ ನಿರ್ದೇಶಕ ಜಯಾನಂದ ಮುನವಳ್ಳಿ, ಗೋಕಾಕ ಅರ್ಬನ್ ಬ್ಯಾಂಕ್ ಚೇರಮನ್ ಬಸವರಾಜ ಕಲ್ಯಾಣಶೆಟ್ಟಿ, ವರ್ತಕರಾದ ಚಂದ್ರಶೇಖರ ಕೊಣ್ಣೂರ, ಅಪ್ಪು ವಾಲಿ, ವೀರಣ್ಣ ಬಿದರಿ, ಕಾರ್ಯಕಾರಿಣಿ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಹಿತ್ತಲಮನಿ, ಡಾ| ವೀರಭದ್ರಪ್ಪ ಉಪ್ಪಿನ, ಅಶೋಕ ದಯಣ್ಣವರ, ವೀರೇಶ ಪರುಶೆಟ್ಟಿ, ಮಲ್ಲಿಕಾರ್ಜುನ ಯಕ್ಸಂಬಿ, ಬಸವರಾಜ ಉಣ್ಣಿ, ವಿವೇಕ ಜತ್ತಿ, ಆನಂದ ಗೋಟಡಕಿ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು.
ಸಂಘಟನೆಯ ತಾಲೂಕು ಅಧ್ಯಕ್ಷ ಬಸನಗೌಡ ಪಾಟೀಲ ಸ್ವಾಗತಿಸಿದರು. ವಿಶ್ರಾಂತ ಪ್ರಾಧ್ಯಾಪಕ ಗಂಗಾಧರ ಮಳಗಿ ನಿರೂಪಿಸಿದರು. ರೇಖಾ ವಾಲಿ ವಂದಿಸಿದರು.