Advertisement

ಪಚ್ಚನಾಡಿಯಲ್ಲಿ 1,500 ಕಿಲೋ ಪ್ಲಾಸ್ಟಿಕ್‌ನಿಂದ ಸಿದ್ಧವಾದ ಮನೆ! ರಾಜ್ಯದಲ್ಲಿಯೇ ಮೊದಲ ಪ್ರಯೋಗ

01:11 PM Nov 11, 2020 | sudhir |

ಮಹಾನಗರ: ಮನೆ ಕಟ್ಟ ಬೇಕಾದರೆ ಕಲ್ಲು, ಮರಳು, ಸಿಮೆಂಟ್‌ ಅಗತ್ಯವಾಗಿ ಬೇಕು. ಆದರೆ ಕಸದ ತೊಟ್ಟಿಗೆ ಹಾಕಲಾಗುವ ತ್ಯಾಜ್ಯದಿಂದ ಆಯ್ದ ಮರು ಮೌಲ್ಯವಿಲ್ಲದ ಚಿಂದಿ ಪ್ಲಾಸ್ಟಿಕ್‌ಗಳನ್ನೇ ಉಪಯೋಗಿಸಿ ಮಂಗಳೂರಿನ ಪಚ್ಚನಾಡಿಯಲ್ಲಿ ಮನೆಯೊಂದನ್ನು ನಿರ್ಮಿಸಲಾಗಿದೆ!

Advertisement

ಕಾಂಕ್ರೀಟ್‌ ಅಡಿಪಾಯದೊಂದಿಗೆ ನಿರ್ಮಾಣವಾದ ಈ ಮನೆಯ ಗೋಡೆಗೆ 1,500 ಕಿಲೋ ಪ್ಲಾಸ್ಟಿಕ್‌ ಬಳಕೆಯಾಗಿದ್ದು, ರಾಜ್ಯದಲ್ಲಿಯೇ ಇದು ಮೊದಲ ಪ್ರಯೋಗ. 350 ಚ. ಅಡಿಯ ಮನೆಯನ್ನು ಪ್ಲಾಸ್ಟಿಕ್‌ ಫಾರ್‌ ಚೇಂಜ್‌ ಇಂಡಿಯಾ ಫೌಂಡೇಶನ್‌ ಸಂಸ್ಥೆಯು ಮನ ಪಾದ ನಿವೃತ್ತ ಪೌರ ಕಾರ್ಮಿಕೆ ಕಮಲಾ ಅವರಿಗೆ ಉಚಿತವಾಗಿ ನಿರ್ಮಿಸಿಕೊಟ್ಟಿದೆ.

ಫೌಂಡೇಶನ್‌ನ ಯೋಜನ ನಿರ್ದೇಶಕ ಚಂದನ್‌ ಹೇಳುವ ಪ್ರಕಾರ, ಪೈಲಟ್‌ ಯೋಜನೆ ಮೂಲಕ ಉಚಿತವಾಗಿ ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ ಸಹಿತ ವಿವಿಧ ಕಡೆಗಳಲ್ಲಿ ಚಿಂದಿ ಆಯುವವರಿಂದ ಸಂಗ್ರಹಿಸಿದ ಮರು ಮೌಲ್ಯವಿಲ್ಲದ ಪ್ಲಾಸ್ಟಿಕ್‌ ಉಪಯೋಗಿಸಿ ಈ ಮನೆ ರಚಿಸಲಾಗಿದೆ. ಜನವರಿಯಿಂದ ಆಗಸ್ಟ್‌ ವರೆಗೆ 20 ಮನೆಗಳನ್ನು ವಸತಿರಹಿತ ಚಿಂದಿ ಆಯುವವರಿಗೂ ಉಚಿತವಾಗಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಸರಕಾರ ಅವರಿಗೆ ಜಾಗ ಒದಗಿಸುವ ಕೆಲಸ ಮಾಡಬೇಕಿದೆ.

ಇದೀಗ ಒಂದೇ ಮನೆಯನ್ನು ನಿರ್ಮಿಸಿದ ಕಾರಣ ವೆಚ್ಚ ಸುಮಾರು 4.5 ಲಕ್ಷ ರೂ.ಗಳಾಗಿವೆ. ಏಕಕಾಲದಲ್ಲಿ ಹಲವಾರು ಮನೆಗಳನ್ನು ನಿರ್ಮಿಸುವುದಾದರೆ ವೆಚ್ಚ ಕಡಿಮೆಯಾಗಲಿದೆ. ಟೆಂಟ್‌, ಜೋಪಡಿ ಯಲ್ಲಿ ವಾಸಿಸುವರಿಗೆ ಇದು ಅತ್ಯುತ್ತಮ ಪರ್ಯಾಯ. ಇದರ ಬಾಳಿಕೆ, ಸ್ಥಿರತೆ, ಗುಣಮಟ್ಟಕ್ಕೆ ಸಂಬಂಧಿಸಿ ಎಲ್ಲ ರೀತಿಯ ಸಂಶೋಧನೆಗಳನ್ನೂ ನಡೆಸಲಾಗಿದೆ. ಈ ರೀತಿ ನಿರ್ಮಾಣವಾಗುವ ಮನೆಗಳಿಗೆ ಸೋಲಾರ್‌ ಬೆಳಕಿನ ಸೌಲಭ್ಯ ಕಲ್ಪಿಸುವ ಚಿಂತನೆಯೂ ಇದೆ ಎಂದರು.

ಫೌಂಡೇಶನ್‌ನ ಮುಖ್ಯ ಅಧಿಕಾರಿ ಶಿಪ್ರಾ ಜೇಕಬ್ಸ್, ಅನುಷ್ಠಾನ ಅಧಿಕಾರಿ ಸುರೇಖಾ, ಯೋಜನ ಸಂಯೋಜಕಿ ಜಯಂತಿ ಉಪಸ್ಥಿತರಿದ್ದರು.

Advertisement

ಗಾಳಿ, ಮಳೆ, ಅಗ್ನಿಯಿಂದ ಸುರಕ್ಷಿತ
ಮರುಮೌಲ್ಯವಿಲ್ಲದ ಪ್ಲಾಸ್ಟಿಕ್‌ಗಳನ್ನು ಸಂಗ್ರಹಿಸಿ ಅದನ್ನು ಹೈದರಾಬಾದ್‌ನ ಸಂಸ್ಥೆಯೊಂದರ ಜತೆಗೆ ಗುಜರಾತ್‌ಗೆ ಕಳುಹಿಸಿ ಅಲ್ಲಿ ಕಂಪ್ರಸ್‌ ಮಾಡಿಸಿ, ಅದರಲ್ಲಿನ ದುರ್ವಾಸನೆಯನ್ನು ಹೋಗಲಾಡಿಸಲು ರಾಸಾಯನಿಕ ಬಳಸಿ ಪ್ಯಾನೆಲ್‌ಗ‌ಳನ್ನು ತಯಾರಿಸಲಾಗುತ್ತದೆ. 8 ಎಂಎಂನಿಂದ 20 ಎಂಎಂವರೆಗಿನ ಪ್ಯಾನೆಲ್‌ಗ‌ಳನ್ನು ತಯಾರಿಸಿಕೊಂಡು ಅದಕ್ಕೆ ಕಬ್ಬಿಣದ ಫ್ಯಾಬ್ರಿಕೇಶನ್‌ ವರ್ಕ್‌ನೊಂದಿಗೆ ಮನೆ ನಿರ್ಮಾಣ ಮಾಡಲಾಗಿದೆ. ಗಾಳಿ, ಮಳೆ, ಅಗ್ನಿಯಿಂದ ಸುರಕ್ಷಿತವಾಗಿರುವುದು ಮಾತ್ರವಲ್ಲದೆ 30 ವರ್ಷ ಬಾಳಿಕೆಯನ್ನು ಹೊಂದಿದೆ.

ಮನೆಯಿಂದಾಗಿ ಸಂತೃಪ್ತಿ
ನಾನು ಕೆಲಸದಿಂದ ನಿವೃತ್ತಿಗೊಂಡು 6 ತಿಂಗಳುಗಳಾಗಿವೆ. 15 ವರ್ಷಗಳಿಂದ ಪಚ್ಚನಾಡಿಯಲ್ಲಿ ವಾಸಿಸುತ್ತಿದ್ದೇನೆ. ಕಳೆದ ಮಳೆಗಾಲದಲ್ಲಿ ನನ್ನ ಜೋಪಡಿ ಮುರಿದು ಬಿದ್ದಿತ್ತು. ಆ ಸಂದರ್ಭ ನನಗೆ ಮನೆ ಉಚಿತವಾಗಿ ನಿರ್ಮಿಸಿಕೊಡುವ ಭರವಸೆಯನ್ನು ಫೌಂಡೇಶನ್‌ನವರು ನೀಡಿದ್ದಾರೆ. ಅದರಂತೆ ಎರಡು ತಿಂಗಳಿನಿಂದೀಚೆಗೆ ಗಟ್ಟಿಮುಟ್ಟಾದ, ಗಾಳಿ ಬೆಳಕು ಹೊಂದಿರುವ ಒಳ್ಳೆಯ ಮನೆ ಕಟ್ಟಿ ಕೊಟ್ಟಿದ್ದಾರೆ.
-ಕಮಲಾ, ಮನೆಯೊಡತಿ

Advertisement

Udayavani is now on Telegram. Click here to join our channel and stay updated with the latest news.

Next