ವರದಿ : ರಾಘವೇಂದ್ರ ಬೆಟ್ಟಕೊಪ್ಪ
ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚಳಕ್ಕೆ ನಿರಂತರವಾಗಿ ನಡೆದ ವಿವಾಹಗಳೇ ಕಾರಣ ಎಂದು ಸಮೀಕ್ಷೆಗಳು ದೃಢಪಡಿಸಿವೆ.
ವಿವಾಹ ಸಮಾರಂಭಕ್ಕೆ ಹೋಗಿ ಬಂದವರಿಗೆ ಸೋಂಕು ತಗುಲಿ ಮೃತಪಟ್ಟ ಘಟನೆಗಳೂ ನಡೆದಿವೆ. ಒಂದು ಮದುವೆ ಸಾವಿರಾರು ಜನರಿಗೆ ಸೋಂಕು ತಲುಗಿಸುವಂತೆ ಮಾಡಿತ್ತು. ಕಾರಣ ಹೊಸತಾಗಿ ವಿವಾಹಗಳಿಗೆ ಅನುಮತಿ ಇಲ್ಲ, ಅನುಮತಿ ನೀಡಲಾದ ಮದುವೆಗೆ ಜನರ ಮಿತಿ 20ಕ್ಕೆ ಇಳಿಸಿ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು. ಆದರೆ, ನಿರ್ಬಂಧ ಹೇರುವ ಮೊದಲೇ ನೀಡಲಾದ 227 ವಿವಾಹಗಳಲ್ಲಿ ಬುಧವಾರದಿಂದ ಇನ್ನೂ 150 ವಿವಾಹಗಳು ನಡೆಯಬೇಕಾಗಿದೆ! ಸಮಸ್ಯೆ ಆಗಿದ್ದವು: ಜಿಲ್ಲೆಯಲ್ಲಿ ನಿತ್ಯ 1000 ದಿಂದ 1200 ಸೋಂಕಿತರು ಕಾಣಿಸಿಕೊಳ್ಳುತ್ತಿದ್ದಾರೆ.
ಸಾವಿನ ಪ್ರಮಾಣ ಕೂಡ ಸೋಂಕಿತರಲ್ಲಿ ಆತಂಕ ಮೂಡಿಸುವಷ್ಟು ಹೆಚ್ಚಲು ಆರಂಭವಾಗಿತ್ತು. ಜಿಲ್ಲೆಯ ಕಾರವಾರ, ದಾಂಡೇಲಿ ನಗರ ಸಹಿತ 19 ಗ್ರಾಪಂಗಳನ್ನೂ ಸೀಲ್‌ಡೌನ್ ಮಾಡಲಾಗಿದೆ. ಇದಕ್ಕೆಲ್ಲ ಬಹುತೇಕ ಕಾರಣ ಆಯಾ ಭಾಗದಲ್ಲಿ ನಡೆದ ಮದುವ ಶೇ.40 ಕ್ಕಿಂತ ಅಧಿಕ ಹೆಚ್ಚು ಸೋಂಕುಗಳನ್ನು ಹಂಚಲು ಕಾರಣವಾಗಿದ್ದವು. ಎರಡನೇ ಕೋವಿಡ್ ಅಲೆ ಆರಂಭವಾಗುತ್ತಿದ್ದಂತೆ 40 ಜನರಿಗೆ ವಿವಾಹಕ್ಕೆ ಅನುಮತಿ ನೀಡಲಾಗಿತ್ತು. ಆದರೆ, ಸೋಂಕು ನಿಯಂತ್ರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ್, ವಿವಾಹ ಸಮಾರಂಭಗಳಿಗೆ ಅನಿವಾರ್ಯವಾಗಿ ಅದರ ಮಿತಿಯನ್ನು 20ಕ್ಕೆ ಇಳಿಸಿ ಆದೇಶ ಮಾಡಿದ್ದರು. ಹೊಸತಾಗಿ ಅನುಮತಿ ಕೇಳಿದರೆ ನೀಡಲಾಗುವುದಿಲ್ಲ ಎಂಬ ಆದೇಶ ಕೂಡ ಮಾಡಿದ್ದರು. ಈಗಾಗಲೇ ತಹಶೀಲ್ದಾರ್ ಮೂಲಕ ಕೊಟ್ಟ ವಿವಾಹ ಸಮಾರಂಭಗಳೇ 227ಕ್ಕೂ ಅಧಿಕ ಇದ್ದವು. ಈ ಪೈಕಿ ಕೆಲವು ಗ್ರಾಮಗಳೇ ಸೀಲ್‌ಡೌನ್ ಆಗಿದ್ದರಿಂದ, ಕೆಲವು ಕುಟುಂಬಗಳು ಸಾಮಾಜಿಕ ಜವಾಬ್ದಾರಿಯಿಂದ ವಿವಾಹ ಮುಂದೂಡಿದ್ದರು. ಇನ್ನೂ ಆಗಬೇಕಿವೆ ಹಳೆವೇ: ಆದರೆ, ಮೇ 19ರಿಂದ ಜೂನ್ 2ರ ತನಕ ಜಿಲ್ಲೆಯಲ್ಲಿ ಇನ್ನೂ 140ಕ್ಕೂ ಅಧಿಕ ಮದುವೆಗಳಿಗೆ ಅನುಮತಿ ನೀಡಿದ್ದೇ ಇದೆ.
ಮೇ 16 ರಿಂದ ಜೂ.2 ರ ತನಕ ಅಂಕೋಲಾದಲ್ಲಿ 20, ಭಟ್ಕಳ 3, ದಾಂಡೇಲಿ 7, ಹಳಿಯಾಳ 3, ಹೊನ್ನಾವರ 28, ಕಾರವಾರ 19, ಕುಮಟಾ 65, ಮುಂಡಗೋಡ 19, ಶಿರಸಿ 32, ಜೋಯಿಡಾ 8, ಯಲ್ಲಾಪುರ 6, ಸಿದ್ದಾಪುರದಲ್ಲಿ 18 ವಿವಾಹಗಳಿಗೆ ಆಯಾ ತಾಲೂಕಿನ ತಹಶೀಲ್ದಾರರು ಅನುಮತಿ ನೀಡಿದ್ದರು. ಕಾರವಾರದಲ್ಲಿ 16, ದಾಂಡೇಲಿಯಲ್ಲಿ 4 ಪ್ರದೇಶದದಲ್ಲೂ ವಿವಾಹ ನಡೆಸಲು ಅನುಮತಿ ಪಡೆದದ್ದೇ ಇದೆ. ಶಿರಸಿ ತಾಲೂಕಿನ ಬನವಾಸಿ ಹೋಬಳಿಯಲ್ಲೇ ಅಧಿಕ ಸೋಂಕು ಇದ್ದು, ಅದೇ ಭಾಗದಲ್ಲಿ ಮದುವೆಗಳಿಗೆ ಈ ಮೊದಲೇ ಕೊಟ್ಟ ಅನುಮತಿಯೂ ಹೆಚ್ಚಿದೆ.
ಆತಂಕ ಇದೆ: 40 ಮಂದಿ ಮದುವೆಗೆ ಎಂದು ಅನುಮತಿ ಪಡೆದವರು ನೂರಾರು ಜನ ಸೇರಿದ್ದೇ ಸಮಸ್ಯೆಯ ಉಲ್ಬಣಕ್ಕೆ ಕಾರಣವಾಯಿತು. ಹೊರ ಜಿಲ್ಲೆಗಳಿಂದಲೂ ಸೋಂಕಿತರು ಬಂದು ಹಂಚಿ ಹೋಗಿದ್ದೂ ಆಯಿತು. ಇದರ ಪರಿಣಾಮ ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ವಿವಾಹ ಬ್ಲಾಕ್ ಲೀಸ್ಟ್‌ಗೆ ಹೋಗುವಂತೆ ಆಯಿತು. ಸೋಂದಾ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳೂ ಕೋವಿಡ್ ಸೋಂಕು ಕಡಿಮೆ ಆಗುವತನಕ ವಿವಾಹಗಳನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ಸೂಚಿಸಿದ್ದರು. ಇನ್ನು ವಿವಾಹಗಳನ್ನು ನಡೆಸುವ ಕುಟುಂಬಗಳಿಗೂ ಸಾಮಾಜಿಕ ಜವಾಬ್ದಾರಿ ಕೂಡ ಅಂಟಿಕೊಂಡಿದೆ. ಸೋಂಕು ಹರಡದಂತೆ, ಸರಕಾರ ಅನುಮತಿ ನೀಡಿದಷ್ಟೇ ಜನರು ಪಾಲ್ಗೊಂಡು ನಡೆಸಬೇಕು.
ವಿವಾಹದ ಸಂದರ್ಭದಲ್ಲೂ ಸಾಮಾಜಿಕ ಅಂತರ, ಸ್ಯಾನಿಟೈಜರ್, ಮಾಸ್ಕ್ ಬಳಸಬೇಕು ಎಂಬ ಸಾಮಾಜಿಕ ಸಂದೇಶಗಳೂ ಕೇಳಿ ಬಂದಿವೆ. ಈ ಮಧ್ಯೆ ಆಯಾ ತಾಲೂಕು ಆಡಳಿತ ಸಂಬಂಧಪಟ್ಟ ವಿವಾಹಗಳಿಗೆ ನೋಡಲ್ ಅಧಿಕಾರಿ ಹಾಗೂ ಆಯಾ ಪಂಚಾಯತ್ ಅಧಿಕಾರಿಗಳು ನಿರ್ವಹಣೆ ಮಾಡಲು ಆಯಾ ತಾಲೂಕಿನ ತಹಶೀಲ್ದಾರರು ಸೂಚಿಸಿದ್ದಾರೆ. ವಿವಾಹಗಳು ಮತ್ತೆ ಸೋಂಕು ಹೆಚ್ಚಳಕ್ಕೆ ನಾಂದಿ ಹಾಡಬಾರದು ಎಂಬ ಸಾಮಾಜಿಕ ಹಕ್ಕೊತ್ತಾಯ ಕೂಡ ಕೇಳಿ ಬಂದಿದೆ.