ಬೆಳಗಾವಿ: ವಕ್ಫ್ ಆಸ್ತಿಯನ್ನು ರಕ್ಷಿಸುತ್ತಿಲ್ಲ ಎಂದು ತಮ್ಮದೇ ಸರಕಾರದ ವಿರುದ್ಧ ಆರೋಪಿಸುತ್ತಿದ್ದ ಅಲ್ಪಸಂಖ್ಯಾಕರ ಆಯೋಗದ ಅಧ್ಯಕ್ಷರೂ ಆಗಿದ್ದ ಅನ್ವರ್ ಮಾಣಿಪ್ಪಾಡಿ ಅವರ ಬಾಯಿ ಮುಚ್ಚಿಸಲು ಬಿ.ವೈ. ವಿಜಯೇಂದ್ರ 150 ಕೋಟಿ ರೂ. ಆಮಿಷ ಒಡ್ಡಿದ್ದರು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ವಕ್ಫ್ ಮಂಡಳಿ ನೋಟಿಸ್ ವಿಚಾರವಾಗಿ ನಡೆಯುತ್ತಿದ್ದ ಚರ್ಚೆಯಲ್ಲಿ ಪಾಲ್ಗೊಂಡ ಅವರು, ಈ ವಿಚಾರದಲ್ಲಿ ಬಿಜೆಪಿಯವರ ದ್ವಂದ್ವ ನಿಲುವುಗಳನ್ನು ಪ್ರಶ್ನಿಸುವುದಕ್ಕೆ ನಿಂತಿದ್ದೇನೆ. ವಕ್ಫ್ ಮಂಡಳಿಯನ್ನು ಬಲಗೊಳಿಸುತ್ತೇವೆ, ವಕ್ಫ್ ಆಸ್ತಿ ರಕ್ಷಿಸುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ ಬಿಜೆಪಿ ಈಗ ವಕ್ಫ್ ಮಂಡಳಿ ವಿರುದ್ಧವೇ ಪ್ರತಿಭಟನೆ ನಡೆಸುತ್ತಿದೆ ಎಂದರು.
ದೇಶಾದ್ಯಂತ ವಕ್ಫ್ ಆಸ್ತಿ ಸಂರಕ್ಷಣೆ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಈ ಹಿಂದೆ ಕೇಳಿದ್ದ ಪ್ರಶ್ನೆಗೆ ಜಿಐಎಸ್ ಟ್ಯಾಗ್ ಮಾಡಿ ಡಿಜಿಟಲೀಕರಣ ಮಾಡುವುದಾಗಿ ಅಂದಿನ ಸಚಿವರು ಸಂಸತ್ತಿನಲ್ಲಿ ಹೇಳಿದ್ದರು. ಅಲ್ಲದೆ 28 ರಾಜ್ಯ ವಕ್ಫ್ ಮಂಡಳಿಗೆ ಕೋಟ್ಯಂತರ ರೂ. ಕೊಟ್ಟಿರುವುದಾಗಿಯೂ ಹೇಳಿರುವುದಿದೆ ಎಂದರು.
ಇನ್ನು ರಾಜ್ಯದಲ್ಲಿ 4 ಲಕ್ಷ ಕೋಟಿ ರೂ. ಮೌಲ್ಯದ ವಕ್ಫ್ ಆಸ್ತಿ ಅತಿಕ್ರಮಣ ಆಗಿದೆ. ಇದರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರೇ ಬಹುಪಾಲು ಇದ್ದಾರೆ ಎಂದು ಆರೋಪಿಸಿ ವರದಿ ಕೊಟ್ಟಿದ್ದ ಅಂದಿನ ಅಲ್ಪಸಂಖ್ಯಾಕರ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ, ತಮ್ಮ ವರದಿ ಅನುಷ್ಠಾನ ಮಾಡುತ್ತಿಲ್ಲ. ಸದನದಲ್ಲಿ ಮಂಡಿಸುತ್ತಿಲ್ಲ. ವಕ್ಫ್ ಆಸ್ತಿ ರಕ್ಷಿಸುತ್ತಿಲ್ಲ. ಪಟ್ಟಭದ್ರರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿಗೂ ಪತ್ರ ಬರೆದಿದ್ದರಲ್ಲದೆ ಗನ್ ಮ್ಯಾನ್ ಜತೆ ಬಂದಿದ್ದ ಬಿ.ವೈ. ವಿಜಯೇಂದ್ರ, ಈ ಬಗ್ಗೆ ಮಾತನಾಡದಿರಲು ತಮಗೆ 150 ಕೋಟಿ ರೂ. ಆಮಿಷ ಒಡ್ಡಿದ್ದರು ಎಂದೂ ಮಾಣಿಪ್ಪಾಡಿ ಆರೋಪಿಸಿದ್ದರು. ಯಾರ ಪರವಾಗಿ ಅಂದು ವಿಜಯೇಂದ್ರ ಹೋಗಿದ್ದರು? ಆರೋಪ ಸುಳ್ಳಾಗಿದ್ದರೆ ಅನ್ವರ್ ಮೇಲೇಕೆ ಕ್ರಮ ಜರಗಿಸಲಿಲ್ಲ ಎಂದು ಪ್ರಿಯಾಂಕ್ ಪ್ರಶ್ನಿಸಿದರು.
ವಕ್ಫ್ ಆಸ್ತಿ ಕಬಳಿಸಿರುವ ಖರ್ಗೆ: ಚನ್ನಬಸಪ್ಪ
ವಕ್ಫ್ ಆಸ್ತಿ ಕುರಿತ ಅನ್ವರ್ ಮಾಣಿಪ್ಪಾಡಿ ವರದಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಸೇರಿದಂತೆ 16 ನಾಯಕರ ಹೆಸರು ಉಲ್ಲೇಖವಾಗಿದೆ. ಇದನ್ನೂ ಒಪ್ಪುತ್ತೀರಾ ಎಂದು ಸಚಿವ ಪ್ರಿಯಾಂಕ್ ಖರ್ಗೆಗೆ ಬಿಜೆಪಿಯ ಚನ್ನಬಸಪ್ಪ ಮರುಪ್ರಶ್ನೆ ಹಾಕಿದರು. ಬಸವಣ್ಣ, ಅಲ್ಲಮಪ್ರಭುಗಳ ಅನುಭವ ಮಂಟಪವೂ ಅಜಂಪೀರ್‌ದರ್ಗಾ ಎಂದು ಪಹಣಿಯಲ್ಲಿ ಬರುತ್ತಿದೆ. ಅನುಭವ ಮಂಟಪವನ್ನು ನಮ್ಮ ಸಮುದಾಯಕ್ಕೆ ಬಿಟ್ಟುಕೊಡಿ ಎಂದು ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಮನವಿ ಮಾಡಿದರು.