ಬಾಗಲಕೋಟೆ: ಕೆರೂರ ಏತ ನೀರಾವರಿ ಯೋಜನೆ, ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿ ಸೇರಿದಂತೆ ಬಾದಾಮಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಸಕ್ತ ಬಜೆಟ್‌ನಲ್ಲಿ ಅಗತ್ಯ ಅನುದಾನ ನೀಡುವಂತೆ ಆಗ್ರಹಿಸಿ ಕ್ಷೇತ್ರದ ಶಾಸಕರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಒಂದೇ ದಿನದಲ್ಲಿ ಬರೋಬ್ಬರಿ 15 ಪತ್ರ ಬರೆದಿದ್ದಾರೆ.
ಬಾದಾಮಿ ತಾಲೂಕಿನ ನೀರಾವರಿ ವಂಚಿತ 16 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸಲು ಕೆರೂರ ಏತ ನೀರಾವರಿ ಯೋಜನೆಗೆ 525 ಕೋಟಿ ಅನುದಾನ ಘೋಷಿಸಲಾಗಿದೆ. ಈ ಯೋಜನೆಗೆ ಪ್ರಸಕ್ತ ಬಜೆಟ್‌ನಲ್ಲಿ 525 ಕೋಟಿ ಅನುದಾನ ಮೀಸಲಿಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಜತೆಗೆ, ಕೆರೂರಿಗೆ ಸಿಟಿ ಸರ್ವೇ ಕಚೇರಿ ಘೋಷಿಸಬೇಕು. ಗುಳೇದಗುಡ್ಡದಲ್ಲಿ ಜವಳಿ ಪಾರ್ಕ್, ಪವರಲೂಂ ಪಾರ್ಕ್ ಹಾಗೂ ಗಾರ್ಮೆಂಟ್ ಸ್ಥಾಪನೆಗೆ ಪ್ರಸಕ್ತ ಬಜೆಟ್‌ನಲ್ಲಿ 50 ಕೋಟಿ ಅನುದಾನ ನೀಡಬೇಕು. ಗುಳೇದಗುಡ್ಡದಲ್ಲಿ ಜಯ ದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋ ಧನಾ ಘಟಕ ಘೋಷಣೆ ಮಾಡಬೇಕು. ಬಾದಾಮಿ, ಪಟ್ಟದಕಲ್ಲು, ಬನಶಂಕರಿ, ಮಹಾ ಕೂಟ ಸೇರಿದಂತೆ ಐತಿಹಾಸಿಕ ಪ್ರವಾಸಿ ತಾಣಗಳ ಅಭಿವೃದ್ಧಿಗೆ 1 ಸಾವಿರ ಕೋಟಿ ಅನುದಾನ ಘೋಷಣೆ ಮಾಡ ಬೇಕು. ಚಾಲುಕ್ಯ ಅಭಿವೃದ್ಧಿ ಪ್ರಾಧಿಕಾರಕ್ಕೆ 25 ಕೋಟಿ ಅನುದಾನ ನೀಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಕ್ಷೇತ್ರದ ಹಲವು ಬೇಡಿಕೆಗಳ ಈಡೇರಿಕೆಗೆ ಒಟ್ಟು 15 ಪತ್ರಗಳನ್ನು ಮುಖ್ಯಮಂತ್ರಿಗೆ ಬರೆದು, ಸಂಬಂಧಿಸಿದ ಇಲಾಖೆಯ ಮೂಲಕ ಪ್ರಸಕ್ತ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡಲು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಸರ್ಕಾರ ಈ ಯೋಜನೆಗಳ ಘೋಷಣೆ ಮಾಡಿದರೆ ಬಾದಾಮಿ ಕ್ಷೇತ್ರದ ಹಲವು ವರ್ಷಗಳ ಬೇಡಿಕೆ ಈಡೇರಿದಂತಾಗುತ್ತದೆ.
-ಹೊಳೆಬಸು ಶೆಟ್ಟರ, ಸಿದ್ದರಾಮಯ್ಯ ಅವರ ಆಪ್ತ, ಕಾಂಗ್ರೆಸ್ ಮುಖಂಡ