Advertisement

ಮಂಗಳೂರು ಬೆಳಗಲು 15 ಲಕ್ಷ ಬಲ್ಬ್ !; ಸಂಜೆ 6ರಿಂದ ಜಗಮಗ!

02:27 PM Oct 08, 2024 | Team Udayavani |

ಮಹಾನಗರ: ಮಂಗಳೂರು ದಸರಾ ಹಿನ್ನೆಲೆಯಲ್ಲಿ ಎತ್ತ ನೋಡಿದರೂ ಬೆಳಕಿನ ಚಿತ್ತಾರ! ನಗರದ ಪ್ರಮುಖ ರಸ್ತೆಗಳು, ದೇಗುಲಗಳು, ಖಾಸಗಿ ಮತ್ತು ಸರಕಾರಿ ಕಟ್ಟಡಗಳು ವಿದ್ಯುತ್‌ ದೀಪಾಲಂಕಾರಗೊಂಡಿದ್ದು, ಇಡೀ ಕುಡ್ಲವೇ ಜಗಮಗ ಬೆಳಗುತ್ತಿದೆ. ಒಂದು ಅಂದಾಜಿನ ಪ್ರಕಾರ, ಮಂಗಳೂರನ್ನು ಬೆಳಗಿಸಲು ಬಳಸಲಾಗಿರುವ ಒಟ್ಟು ಬಲುºಗಳ ಸಂಖ್ಯೆ 15 ಲಕ್ಷಕ್ಕೂ ಅಧಿಕ!

Advertisement

ಮಂಗಳೂರು ದಸರಾ ಈಗ ರಾಜ್ಯಾದ್ಯಂತ ಜನಾಕರ್ಷಣೆ ಪಡೆದಿದೆ. ಸಾವಿರಾರು ಭಕ್ತರ ಜತೆಗೆ ಪ್ರವಾಸಿಗರೂ ರಾಜ್ಯದ ವಿವಿಧೆಡೆಯಿಂದ ಇಲ್ಲಿ ಸೇರುವುದರಿಂದ ಪ್ರವಾಸೋದ್ಯಮಕ್ಕೂ ಪೂರಕವಾಗಿದೆ. ಹಿಂದೆಲ್ಲ ಖಾಸಗಿಯವರು ಇಲ್ಲವೇ ದೇವಸ್ಥಾನಗಳ ಮೂಲಕ ದೀಪಾಲಂಕಾರ ಮಾಡುತ್ತಿದ್ದರೆ ಕೆಲವು ವರ್ಷಗಳಿಂದ ಮಹಾನಗರ ಪಾಲಿಕೆಯೇ ಪ್ರಮುಖ ಕಟ್ಟಡ ಮತ್ತು ರಸ್ತೆಗಳನ್ನು ಅಲಂಕರಿಸುತ್ತಿದೆ.

ನಗರದ ಬೆಳಕಿನ ಚಿತ್ತಾರ ಎಷ್ಟು ಆಕರ್ಷಕವಾಗಿದೆ ಎಂದರೆ ಹಲವಾರು ಬಂದಿ ವಿದ್ಯುದೀಪಾಲಂಕಾರ ಕಣ್ತುಂಬಿಕೊಳ್ಳಲೆಂದೇ ಸಿಟಿ ಸುತ್ತುವುದುಂಟು. ಅನೇಕರು ತಮ್ಮ ವಾಹನಗಳನ್ನು ನಿಲ್ಲಿಸಿ, ಸೆಲ್ಫೀ, ಅಲಂಕಾರಗೊಂಡ ರಸ್ತೆಗಳ ಫೋಟೋ ಕ್ಲಿಕ್ಕಿಸುತ್ತಿದ್ದಾರೆ. ಸಂಜೆ ಸುಮಾರು 6 ಗಂಟೆಯಿಂದ ರಾತ್ರಿ 12 ಗಂಟೆವರೆಗೆ ವಿದ್ಯುತ್‌ ದೀಪಗಳಿಂದ ಜಗಮಗಿಸುತ್ತಿದೆ.

ನಗರದ ಪ್ರಮುಖ ರಸ್ತೆಗಳಾದ ಕುದ್ರೋಳಿ ಕ್ಷೇತ್ರದಿಂದ ದುರ್ಗಾ ಮಹಲ್‌ ರಸ್ತೆ, ಬ್ರಹ್ಮಶ್ರೀ ನಾರಾಯಣ ಗುರು ರಸ್ತೆ, ಕೊಟ್ಟಾರಚೌಕಿ, ಉರ್ವ ಮಾರಿಗುಡಿ ರಸ್ತೆ, ಹೊಗೆಬೈಲ್‌, ಕೆಎಸ್ಸಾರ್ಟಿಸಿ ಜಂಕ್ಷನ್‌, ಲಾಲ್‌ಬಾಗ್‌, ಎಂ.ಜಿ. ರಸ್ತೆ, ಗೋವಿಂದ ಪೈ ವೃತ್ತ, ಹಂಪನಕಟ್ಟೆ, ಮೋಹಿನಿ ವಿಲಾಸ, ರಥಬೀದಿ, ನ್ಯೂಚಿತ್ರ, ಬಸವನಗುಡಿ, ಲೋವರ್‌ ಕಾರ್‌ಸ್ಟ್ರೀಟ್‌, ಬಾಲಾಜಿ ಸರ್ಕಲ್‌, ಮಂಗಳಾದೇವಿಯಿಂದ ಎ.ಬಿ. ಶೆಟ್ಟಿ ವೃತ್ತ, ಮಾರ್ನಮಿಕಟ್ಟೆ ಮುಖ್ಯ ರಸ್ತೆಗಳು, ಮಂಕಿಸ್ಟ್ಯಾಂಡ್‌, ಪ್ರಗತಿ ಸರ್ವಿಸ್‌ ಸ್ಟೇಶನ್‌ನಿಂದ ಕುದ್ರೋಳಿ ಕ್ಷೇತ್ರ, ಗೋವಿಂದ ಪೈ ವೃತ್ತದಿಂದ ಶಾರದಾ ವಿದ್ಯಾಲಯ-ಕಲಾಕುಂಜ ರಸ್ತೆಯಾಗಿ ಕುದ್ರೋಳಿ ಶ್ರೀ ಭಗವತಿ ಕ್ಷೇತ್ರ, ಬೆಸೆಂಟ್‌ ಕಾಲೇಜು ರಸ್ತೆ, ಸೂಟರ್‌ಪೇಟೆ ರಸ್ತೆ ಸಹಿತ ವಿವಿಧ ರಸ್ತೆಗಳನ್ನು ಅಲಂಕರಿಸಲಾಗಿದೆ.

ವಿದ್ಯುತ್‌ ದೀಪಗಳಿಂದ ಕಣ್ಣು ಕೋರೈಸುವ ಮಂಗಳೂರಿನ ಸೌಂದರ್ಯ.

Advertisement

ಪಾಲಿಕೆಯಿಂದಲೇ 11.50 ಲಕ್ಷ ಬಲ್ಬ್
ಈ ಬಾರಿ ನಗರದಲ್ಲಿ ಮಹಾನಗರ ಪಾಲಿಕೆಯಿಂದಲೇ ಒಟ್ಟು 11.50 ಲಕ್ಷ ಬಲ್ಬ್ಗಳನ್ನು ಅಳವಡಿಸಲಾಗಿದೆ. ಸಂಜೆ 6ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ವಿದ್ಯುತ್‌ ಸಂಪರ್ಕ ಇರುತ್ತದೆ. ಈ ಬಾರಿ ಕೆಲವೊಂದು ದೇವಸ್ಥಾನಗಳು, ನಗರದ ವೃತ್ತಗಳಿಗೂ ಪಾಲಿಕೆಯಿಂದಲೇ ವಿದ್ಯುತ್‌ ದೀಪಾಲಂಕಾರಗೊಳಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಆನಂದ್‌ ಸಿ.ಎಲ್‌. ಅವರು ತಿಳಿಸಿದ್ದಾರೆ.

ಸರಕಾರಿ-ಖಾಸಗಿ ಕಟ್ಟಡಗಳೂ ಸುಂದರ
ನಗರದ ಪ್ರಮುಖ ಬೀದಿಗಳನ್ನು ವಿದ್ಯುತ್‌ ದೀಪಾಲಂಕಾರದಿಂದ ಸಿಂಗರಿಸಲಾಗಿದ್ದರೆ, ನಗರದ ಹಲವು ಖಾಸಗಿ, ಸರಕಾರಿ ಕಟ್ಟಡಗಳಲ್ಲಿಯೂ ದೀಪಾಲಂಕಾರ ಮಾಡಲಾಗಿದೆ. ಮಂಗಳೂರು ಮಹಾನಗರ ಪಾಲಿಕೆ, ಸುರತ್ಕಲ್‌, ಕದ್ರಿಯ ಪಾಲಿಕೆ ವಲಯ ಕಚೇರಿ, ಕುದು¾ಲ್‌ ರಂಗರಾವ್‌ ಪುರಭವನದಲ್ಲಿ ವಿದ್ಯುತ್‌ ಬಲ್ಬ್ ಅಳವಡಿಸಲಾಗಿದೆ. ಅದೇ ರೀತಿ, ನಗರದ ಹೊಟೇಲ್‌ಗ‌ಳು, ಜವುಳಿ ಅಂಗಡಿ ಸಹಿತ ಖಾಸಗಿ ಕಟ್ಟಡಗಳು ಬೆಳಕಿನ ಅಲಂಕಾರದಿಂದ ಗಮನಸೆಳೆಯುತ್ತಿದೆ. ಅದೇ ರೀತಿ, ಖಾಸಗಿಯಾಗಿಯೂ ನಗರದ ಅನೇಕ ಕಡೆಗಳಲ್ಲಿ ದೇವರ ಆಕರ್ಷಕ ಪೋಸ್ಟರ್‌ಗಳನ್ನು ಅಳವಡಿಸಲಾಗಿದ್ದು, ಅದಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ.

ಕುದ್ರೋಳಿಯಲ್ಲಿ ಲಕ್ಷ ಬಲ್ಬ್ ಬಳಕೆ
ಸಂಜೆಯಾಗುತ್ತಿದ್ದಂತೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ವಿದ್ಯುದ್ಧೀಪಾಲಂಕಾರದಿಂದ ಗಮನ ಸೆಳೆಯುತ್ತದೆ. ಕ್ಷೇತ್ರದ ಸ್ವಾಗತ ಗೋಪುರದಿಂದ ಆರಂಭವಾಗಿ, ದೇವಾಲಯದ ಒಳ ಭಾಗ, ರಾಜಾಂಗಣದಲ್ಲಿ ಸುಮಾರು ಒಂದೂವರೆ ಲಕ್ಷ ಬಲ್ಬ್ಗಳನ್ನು ಬಳಕೆ ಮಾಡಲಾಗಿದೆ. ಅದರಲ್ಲೂ ವಾರ್ಮ್ ವೈಟ್‌ ಬಲ್ಬ್ ಆಕರ್ಷಣೆ ಪಡೆದಿದೆ. ಇಲ್ಲಿ ಎಲ್‌ಇಡಿ ಬಲ್ಬ್ ಮತ್ತು 15 ವಾಲ್ಟ್ ಬಲ್ಬ್ ಗಳನ್ನು ಬಳಕೆ ಮಾಡಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಆರಂಭವಾಗಿ ಮಧ್ಯರಾತ್ರಿ 12 ಗಂಟೆಯವರೆಗೆ ಕುದ್ರೋಳಿ ಕ್ಷೇತ್ರದಲ್ಲಿ ಬಲ್ಬ್ಗಳಿಂದ ಜಗಮಗಿಸುತ್ತದೆ. ಬಲ್ಬ್ ಅಳವಡಿಸುವ ಕೆಲಸ ಗಣೇಶ ಚೌತಿಯ ದಿನದಿಂದ ಆರಂಭ ಮಾಡಲಾಗಿದ್ದು, 14 ಮಂದಿ ಕೆಲಸಗಾರರು ಜೋಡಣೆ ಕೆಲಸದಲ್ಲಿ ನಿರತರಾಗಿದ್ದರು.

ಬೆಳಕಿನ ಚಿತ್ತಾರ
ಮಹಾನಗರ ಪಾಲಿಕೆಯ ವತಿಯಿಂದ 11.5 ಲಕ್ಷ, ಕುದ್ರೋಳಿ ದೇವಸ್ಥಾನ ದಿಂದ ಸುಮಾರು ಒಂದುವರೆ ಲಕ್ಷ ಬಲ್ಬ್ ಬಳಕೆಯಾಗಿದೆ. ಮಹಾ ನಗರ ಪಾಲಿಕೆ ಬೆಳಗಿಸಿದ ಪ್ರಮುಖ ರಸ್ತೆಗಳನ್ನು ಹೊರತುಪಡಿಸಿದ ಒಳರಸ್ತೆಗಳು, ಹಲ ವಾರು ದೇವಸ್ಥಾನಗಳು, ಖಾಸಗಿ ಕಟ್ಟಡಗಳ ಅಲಂಕಾರ ನೋಡಿದರೆ 15 ಲಕ್ಷಕ್ಕೂ ಹೆಚ್ಚು ಬಲ್ಬ್ ಗಳ ಬಳಕೆ ಆಗಿರಬಹುದು ಎಂದು ಅಂದಾಜಿಸಲಾಗಿದೆ.

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next