Advertisement

13 ಬೇಡಿಕೆ ಈಡೇರಿಕೆಗೆ 15 ದಿನ ಗಡುವು

11:43 AM May 27, 2022 | Team Udayavani |

ಬಾಗಲಕೋಟೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಡಿ ಹಳ್ಳಿ ಹಳ್ಳಿಗಳಲ್ಲಿ ಕಾರ್ಯ ನಿರ್ವಹಿಸುವ ಜಿಲ್ಲೆಯ ಪಿಡಿಒಗಳು ತಮ್ಮ 13 ಪ್ರಮುಖ ಬೇಡಿಕೆಗಳ ಈಡೇರಿಕೆಗೆ 15 ದಿನಗಳ ಗಡುವು ನೀಡಿದ್ದಾರೆ. 15 ದಿನಗಳಲ್ಲಿ ತಮ್ಮ ಬೇಡಿಕೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಎಲ್ಲ ಪಿಡಿಒಗಳು ಕಠಿಣ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದ್ದಾರೆ.

Advertisement

ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ ಹಾಗೂ ಜಿಪಂ ಉಪ ಕಾರ್ಯದರ್ಶಿ ಎನ್‌. ವೈ. ಬಸರಿಗಿಡದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸಂಘದ ರಾಜ್ಯ ಉಪಾಧ್ಯಕ್ಷರೂ ಆಗಿರುವ ಜಿಲ್ಲಾಧ್ಯಕ್ಷ ರಾಜು ವಾರದ ಪ್ರತಿಭಟನೆಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಶೇ.70 ಗ್ರಾಮೀಣ ಜನತೆ ಪ್ರತಿನಿಧಿಸುತ್ತದೆ. ಗ್ರಾಪಂ-ತಾಪಂ ಹಾಗೂ ಜಿಪಂ ಒಳಗೊಂಡಂತೆ ಒಂದು ಲಕ್ಷಕ್ಕೂ ಅಧಿಕ ಜನಪ್ರತಿನಿಧಿಗಳಿಗೆ ಸಮನ್ವಯ ಸಾಧಿಸಿ ವಿಕೇಂದ್ರಿಕರಣ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ. ಗ್ರಾಮ ಮಟ್ಟದ ಮೂಲ ಸೌಲಭ್ಯಗಳಾದ ಕುಡಿವ ನೀರು, ಬೀದಿ ದೀಪ, ಚರಂಡಿ ಸ್ವಚ್ಛತೆ, ತ್ಯಾಜ್ಯ ವಿಲೇವಾರಿ, ರಸ್ತೆ ಸಂಪರ್ಕ, ವಸತಿ, ನರೇಗಾದಡಿ ಉದ್ಯೋಗ ಕಲ್ಪಿಸುವ ಜತೆಗೆ ಗ್ರಾಪಂ ಮಟ್ಟದ ಟಾಸ್ಕ್ಫೋರ್ಸ್‌, ಶಿಕ್ಷಣ ಪಡೆ, ಆರೋಗ್ಯ ನೈರ್ಮಲ್ಯ ಸಮಿತಿ ಮುಂತಾದ 29 ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಅಧಿಕಾರಿಗಳು, ನೌಕರರು ಕಡಿಮೆ ಸಿಬ್ಬಂದಿಯೊಂದಿಗೆ ಕೆಲಸ ಮಾಡುತ್ತಿದ್ದೇವೆ. ಹಲವಾರು ಒತ್ತಡದಲ್ಲೂ ಕಾರ್ಯ ನಿರ್ವಹಿಸುವ ನಮಗೆ ಒಂದಷ್ಟು ಸೌಲಭ್ಯ ಕಲ್ಪಿಸಲು ಹಲವು ಬಾರಿ ಮನವಿ ಸಲ್ಲಿಸಿದರೂ ಸರ್ಕಾರ ಈಡೇರಿಸಿಲ್ಲ. ಹೀಗಾಗಿ ಈ ಬಾರಿ ಅಂತಿಮ ಹೋರಾಟಕ್ಕೆ ಮುಂದಾಗಿದ್ದು, ಪ್ರಮುಖ 13 ಬೇಡಿಕೆಗಳನ್ನು 15 ದಿನಗಳ ಒಳಗಾಗಿ ಈಡೇರಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಕಠಿಣ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರಮುಖ ಬೇಡಿಕೆಗಳೇನು?: ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಯಿಂದ ಖಾಲಿ ಇರುವ ಸಹಾಯಕ ನಿರ್ದೇಶಕರ ಹುದ್ದೆಗಳಿಗೆ ಬಡ್ತಿ ನೀಡಬೇಕು. 2006-2007ರಿಂದ 2011-12ರವರೆಗೆ ನರೇಗಾ ಯೋಜನೆಯಡಿ ಅನುಷ್ಠಾನಗೊಂಡ ಕಾಮಗಾರಿಗಳ ತನಿಖೆಗೆ ಲೋಕಾಯುಕ್ತಕ್ಕೆ ವಹಿಸಿರುವ ಪ್ರಕರಣ ಮರಳಿ ಪಡೆಯಬೇಕು. 8 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಪಿಡಿಒ ಹುದ್ದೆಯನ್ನು ಗ್ರುಪ್‌ ಬಿಗೆ ಮೇಲ್ದರ್ಜೆಗೇರಿಸಬೇಕು. ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿ ಮತ್ತು ನೌಕರರನ್ನು ಕೌನ್ಸೆ ಲಿಂಗ್‌ ಮೂಲಕ ವರ್ಗಾವಣೆ ಮಾಡುವ ನಿಯಮ ತಕ್ಷಣ ಜಾರಿಗೊಳಿಸುವಂತೆ ಆಗ್ರಹಿಸಿದರು.

ಇಲಾಖೆ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗಳ ಸೇವೆ ವಿಷಯ ಸಕಾಲ ವ್ಯಾಪ್ತಿಗೆ ತರಬೇಕು. ಕೋವಿಡ್‌ನಿಂದ ಮೃತಪಟ್ಟ ಅಧಿಕಾರಿ ಮತ್ತು ಸಿಬ್ಬಂದಿಗಳ ಕುಟುಂಬಗಳಿಗೆ ಪರಿಹಾರ ಮತ್ತು ಅನುಕಂಪದ ನೌಕರಿ ಒದಗಿಸಬೇಕು. 16ಎ ರದ್ದು ಮಾಡಿರುವುದರಿಂದ ಅಂತರ್‌ ಜಿಲ್ಲೆಗೆ ವರ್ಗಾವಣೆಗೆ ಅವಕಾಶವಿಲ್ಲ. ಹೀಗಾಗಿ ಒಂದು ಬಾರಿ ಅಂತರ್‌ ಜಿಲ್ಲೆಗೆ ವರ್ಗಾವಣೆಗೊಳ್ಳಲು ಅವಕಾಶ ನೀಡಬೇಕು. ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ನಿರ್ದೇಶಕರು ಮತ್ತು ಕಾರ್ಯ ನಿರ್ವಾಹಕ ಅಧಿಕಾರಿಗಳ ಹುದ್ದೆಗೆ ಇಲಾಖೆ ಅಧಿಕಾರಿಗಳ ಪ್ರಭಾರ ನೀಡಿ, ಅನ್ಯ ಇಲಾಖೆ ಅಧಿಕಾರಿಗಳನ್ನು ಅವರ ಮಾತೃ ಇಲಾಖೆಗೆ ಬಿಡುಗಡೆಗೊಳಿಸಬೇಕು. ಗ್ರಾಪಂ ಸಿಬ್ಬಂದಿಗೆ ವೇತನ ಶ್ರೇಣಿ ನಿಗದಿಪಡಿಸಬೇಕು. ಅನುಮೋದನೆಗೆ ಬಾಕಿ ಇರುವ ಸಿಬ್ಬಂದಿಗಳಿಗೆ ಜಿಪಂನಿಂದ ಅನುಮೋದನೆ ನೀಡಬೇಕು. ಎಲ್ಲ ಗ್ರಾಪಂಗಳಿಗೆ ಎಸ್‌ಡಿಎಎ ಹುದ್ದೆ ನೇಮಕ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಸಾಮಗ್ರಿ ವೆಚ್ಚ ನಿಯಮಿತವಾಗಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

Advertisement

ಈ ವೇಳೆ ಸಂಘದ ಲಕ್ಷ್ಮಣ ಶಾಂತಗಿರಿ, ಉಮೇಶ ಸಾವಳಗಿ, ಗಂಗಾ ಕಾಳಗಿ, ಮಹಾಂತೇಶ ಚಲವಾದಿ, ಎಸ್‌.ಪಿ. ಹಿರೇಮಠ, ಶಶಿಕಲಾ ಕೊಡತೆ, ಶಿವಾನಂದ ನರಸಣ್ಣವರ, ಮಹೇಶ ಜಗಲಿ, ಮಹಾಂತೇಶ ನಾಲತವಾಡ, ಹುಲ್ಲಪ್ಪ ಆವಿನ, ಪರಮೇಶ್ವರ ಚಲವಾದಿ, ಗುರುರಾಜ ಅರಳಿಕಟ್ಟಿ, ಸೋಮಶೇಖರ ಬಿರಾದಾರ, ರಾಧಿಕಾ ಬಿರಾದಾರ ಸೇರಿದಂತೆ ಜಿಲ್ಲೆಯ ಪಿಡಿಒಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next