ನವದೆಹಲಿ: ದೇಶಾದ್ಯಂತ ಕಾನೂನು ಬಾಹಿರ ಕಟ್ಟಡಗಳು ಮತ್ತು ಅತಿಕ್ರಮಣಗಳನ್ನು ತೆರವುಗೊಳಿಸಲು ಬುಲ್ಡೋಜರ್ ಕಾರ್ಯಾಚರಣೆ ನಡೆಸುತ್ತಿರುವುದಕ್ಕೆ ಸುಪ್ರೀಂಕೋರ್ಟ್ ಬುಧವಾರ (ನ.13) ತೀವ್ರವಾಗಿ ವಿರೋಧಿಸಿದ್ದು, ಕಾನೂನು ಬಾಹಿರ ಕಟ್ಟಡ ತೆರವಿಗೆ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಸುಪ್ರೀಂ ಮಾರ್ಗಸೂಚಿಯಲ್ಲೆನಿದೆ?
ಯಾವುದೇ ಕಾನೂನು ಬಾಹಿರ ಕಟ್ಟಡ ಅಥವಾ ಅತಿಕ್ರಮಣ ನಿವಾಸ ತೆರವುಗೊಳಿಸುವ ಮೊದಲು 15 ದಿನ ಮುನ್ನ ನೋಟಿಸ್ ನೀಡಬೇಕು, ಕಟ್ಟಡ ತೆರವುಗೊಳಿಸುವ ಪ್ರಕ್ರಿಯೆಯ ವಿಡಿಯೋ ಚಿತ್ರೀಕರಣ ಮಾಡಬೇಕು ಹಾಗೂ ಸ್ಥಳದ ವಿವರ, ಕಾನೂನು ಕ್ರಮದ ಮಾಹಿತಿ, ಮತ್ತ ಇನ್ನಿತರ ಮಾನದಂಡಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಬೇಕು ಎಂದು ಸುಪ್ರೀಂಕೋರ್ಟ್ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಆದರೆ ಸಾರ್ವಜನಿಕ ರಸ್ತೆ, ರೈಲ್ವೆ ಮಾರ್ಗ, ಪಾದಚಾರಿ ಮಾರ್ಗ, ಜಲಮಂಡಳಿಗೆ ಸಂಬಂಧಿಸಿದ ಸ್ಥಳದಲ್ಲಿ ಅನಧಿಕೃತ ಕಟ್ಟಡ ತೆರವುಗೊಳಿಸಲು ಈ ಮಾರ್ಗಸೂಚಿ ಅನ್ವಯವಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ವ್ಯಕ್ತಿಯನ್ನು ಆರೋಪಿ ಎಂದು ಘೋಷಿಸಿ, ಆತನ ಮನೆಯನ್ನು ಧ್ವಂಸಗೊಳಿಸುವಂತೆ ನಿರ್ಧರಿಸಿ ಕಾರ್ಯಾಂಗ ನ್ಯಾಯಾಧೀಶರಂತೆ ವರ್ತಿಸಬಾರದು ಎಂದು ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದೆ.
*ಅನಧಿಕೃತ ಕಟ್ಟಡವನ್ನು ಮಾತ್ರ ಧ್ವಂಸಗೊಳಿಸಬೇಕು ಮತ್ತು ಕೋರ್ಟ್ ವಿಚಾರಣೆಯಲ್ಲಿರುವ ಕಟ್ಟಡಗಳನ್ನು ತೆರವುಗೊಳಿಸಬಾರದು.
*ಕಟ್ಟಡದ ಮಾಲೀಕರಿಗೆ ಮುನ್ನೆಚ್ಚರಿಕೆ ನೋಟಿಸ್ ನೀಡದೇ ಕಟ್ಟಡ ಧ್ವಂಸಗೊಳಿಸಬಾರದು. ಅಲ್ಲದೇ ಆ ನೋಟಿಸ್ ಅನ್ನು ಕಟ್ಟಡದ ಪ್ರಮುಖ ಭಾಗದಲ್ಲಿ ಕಾಣುವಂತೆ ಅಂಟಿಸಬೇಕು.
*ಶೋಕಾಸ್ ನೋಟಿಸ್ ಅನ್ನು 15 ದಿನ ಮೊದಲು ನೀಡಬೇಕು. ಯಾವ ಕಾರಣಕ್ಕಾಗಿ ತೆರವುಗೊಳಿಸುತ್ತಿದ್ದೇವೆ ಎಂಬ ಬಗ್ಗೆ ಸ್ಪಷ್ಟ ಕಾರಣವನ್ನು ನೀಡಬೇಕು.
*ಅನಧಿಕೃತ ಕಟ್ಟಡಗಳ ತೆರವಿಗೆ ನೋಟಿಸ್ ನೀಡಿರುವ ಮಾಹಿತಿಯನ್ನು ಡಿಜಿಟಲ್ ಪೋರ್ಟಲ್ ರಚಿಸಿ ಅದರಲ್ಲಿ ಅಪ್ ಲೋಡ್ ಮಾಡಲು 3 ತಿಂಗಳ ಕಾಲಾವಕಾಶ ನೀಡಿದೆ.