Advertisement
ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲೆಯ 4ನೇ ತ್ತೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೆಚ್ಚಿನ ಹೆದ್ದಾರಿಗಳು, ಕಿರುರಸ್ತೆಗಳು ಮತ್ತು ಸರ್ಕಾರದ ಒಡೆತನದ ಜಾಗ ಅತಿಕ್ರಮಣಗೊಂಡ ಬಗ್ಗೆ ಅನೇಕರು ದೂರು ನೀಡಿದ್ದಾರೆ. ಕೂಡಲೇ ಈ ಬಗ್ಗೆ ಜಿಲ್ಲಾಧಿಕಾರಿ ಸಭೆ ಕರೆದು ತಂಡ ರಚಿಸಿ ಅತಿಕ್ರಮಣದ ಮಾಹಿತಿ ಪಡೆದು ಅದನ್ನು ಶೀಘ್ರ ತೆರವುಗೊಳಿಸಿ ಅಲ್ಲಿ ಸರ್ಕಾರಿ ಜಾಗ ಎಂದು ಫಲಕ ಹಾಕುವಂತೆ ಸೂಚಿಸಿದರು.
Related Articles
Advertisement
ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ, ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಕೆಂಪೇಗೌಡ ಪಾಟೀಲ, ಉಪಾಧ್ಯಕ್ಷ ಶಿವಾನಂದ ಕರಿಗಾರ, ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಪಂ ಸಿಇಒ ಡಾ| ಬಿ.ಸಿ. ಸತೀಶ, ಎಸ್ಪಿ ಜಿ. ಸಂಗೀತಾ ಮತ್ತಿತರರು ಇದ್ದರು.
ಎಲ್ಲಿಯೂ ನೀರಿನ ಅಭಾವ ಉಂಟಾಗದಂತೆ ಎಚ್ಚರ ವಹಿಸಿ:
ಅವಳಿ ನಗರದಲ್ಲಿ ಅಗತ್ಯವಿರುವೆಡೆ ಕೊಳವೆಬಾವಿ ಕೊರೆದು ನೀರು ಕೊಡಿ. ಮಹಾನಗರದ ಎಲ್ಲ ಪ್ರದೇಶಗಳಿಗೆ ಕನಿಷ್ಟ 6-7 ದಿನಗಳಿಗೆ ಒಮ್ಮೆ ನೀರು ಪೂರೈಸಬೇಕು. ಅಗತ್ಯವಿರುವ 27 ಕಡೆಗಳಲ್ಲಿ ಕೊಳವೆಬಾವಿ ಕೊರೆದು ನೀರು ಪೂರೈಸಲು ಉದ್ದೇಶಿಸಲಾಗಿದೆ. ಸರ್ಕಾರ ಹಣ ಒದಗಿಸಲಿದೆ. ಎಲ್ಲಿಯೂ ನೀರಿನ ಅಭಾವ ಉಂಟಾಗದಂತೆ ಎಚ್ಚರ ವಹಿಸಿ. ಅವಶ್ಯವಿದ್ದರೆ ಟ್ಯಾಂಕರ್ ಮೂಲಕವೂ ನೀರು ಪೂರೈಸಿ ಎಂದು ಸಚಿವರು ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.
ವಿವರಣೆ ಕೇಳಿದ ಮುನೇನಕೊಪ್ಪ:
ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ನವಲಗುಂದ ಪಟ್ಟಣದ ಮೂಲಕ ಹಾಯ್ದುಹೋಗುವ ರಾಜ್ಯ ಹೆದ್ದಾರಿಗೆ ಬೈಪಾಸ್ ರಸ್ತೆ ನಿರ್ಮಿಸುವ ಕಾರ್ಯ ಕುಂಠಿತವಾಗಿರುವ ಬಗ್ಗೆ ವಿವರಣೆ ಕೇಳಿದರು.ಲೋಕೋಪಯೋಗಿ ಇಲಾಖೆ ಹೆದ್ದಾರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಎನ್.ಎಂ. ಕುಲಕರ್ಣಿ ಮಾತನಾಡಿ, ನವಲಗುಂದ, ನರಗುಂದ ಪಟ್ಟಣಗಳಲ್ಲಿ ಬೈಪಾಸ್ ರಸ್ತೆ ನಿರ್ಮಿಸಲು ವಿಸ್ತೃತ ಯೋಜನಾ ವರದಿ ತಯಾರಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ ನಡೆಸಲು ಮಂಜೂರಾತಿ ಸಿಗಬೇಕಾಗಿದೆ ಎಂದರು.
ತಿಂಗಳು ಕಾಲಾವಕಾಶ:
ಅವಳಿ ನಗರಗಳ ವರ್ತಕರಿಗೆ ನೂತನ ಎಪಿಎಂಸಿ ಪ್ರಾಂಗಣಗಳಲ್ಲಿ ಸೌಲಭ್ಯಗಳಿದ್ದರೂ ಸ್ಥಳಾಂತರಗೊಳ್ಳದೇ ಕೆಲವು ವ್ಯಾಪಾರಿಗಳು ಚಿಲ್ಲರೆ ವ್ಯಾಪಾರದ ಅನುಮತಿ ಪಡೆದು ಹಳೆಯ ಮಾರುಕಟ್ಟೆಗಳಲ್ಲಿ ವಹಿವಾಟು ಮುಂದುವರಿಸಿದ್ದಾರೆ. ವಾಸ್ತವವಾಗಿ ಅವರು ಸಗಟು ವ್ಯಾಪಾರ ಮಾಡುತ್ತಿದ್ದಾರೆ. ಅವರಿಗೆಲ್ಲ 30 ದಿನಗಳ ಕಾಲಾವಕಾಶ ನೀಡಿ ಸ್ಥಳಾಂತರಗೊಳ್ಳಲು ಸೂಚನೆ ನೀಡಬೇಕು. ಇಲ್ಲದಿದ್ದರೆ ಜಿಲ್ಲಾಡಳಿತ ಹಾಗೂ ಪೊಲೀಸರ ನೆರವು ಪಡೆದು ಕಾರ್ಯಾಚರಣೆ ಕೈಗೊಳ್ಳಬೇಕು ಎಂದು ಸಚಿವ ದೇಶಪಾಂಡೆ ಕೃಷಿ ಮಾರುಕಟ್ಟೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಚಿವರ ವಾಹನಕ್ಕೆ ಅಡ್ಡಬಂದ ಬಸ್ ಚಾಲಕಗೆ ಬಿಸಿ:
ಜಿಲ್ಲಾ ಉಸ್ತುವಾರಿ ಸಚಿವರ ವಾಹನಕ್ಕೆ ಅಡ್ಡಬಂದು ದಾರಿ ಬಿಡಲು ವಿಳಂಬ ಮಾಡಿದ್ದಕ್ಕೆ ಸಾರಿಗೆ ಬಸ್ ಚಾಲಕನಿಗೆ ಬಿಸಿ ಮುಟ್ಟಿಸಿದ್ದು, ಅಲ್ಲದೇ ಬಸ್ ಸಂಚಾರಕ್ಕೆ ತಡೆ ಹಾಕಿದ ಘಟನೆ ಧಾರವಾಡದ ಹಳೆ ಬಸ್ ನಿಲ್ದಾಣದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಧಾರವಾಡದಿಂದ ಹೊಸವಾಳಕ್ಕೆ ಹೊರಟಿದ್ದ ಬಸ್ಸನ್ನು ಸಚಿವರ ಪಿಎ ಸೂಚನೆ ಮೇರೆಗೆ ನಿಲ್ದಾಣದ ಒಳಗಡೆಯೇ ಸಂಚಾರಿ ಪೊಲೀಸರು ತಡೆ ಹಿಡಿದರು. ಇದಲ್ಲದೇ ಚಾಲಕ ಮಲ್ಲಿಕಾರ್ಜುನ ರಾಯನಗೌಡರಿಗೆ ಎಚ್ಚರಿಕೆ ಸಹ ನೀಡಿದರು. ಬಸ್ ಸಂಚಾರಕ್ಕೆ ಕೆಲ ಹೊತ್ತು ತಡೆ ಹಾಕಿದ್ದರಿಂದ ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಆರ್.ವಿ. ದೇಶಪಾಂಡೆ, ನನ್ನ ವಾಹನಕ್ಕೆ ಅಪಘಾತ ಆಗುತ್ತಾ ಇತ್ತು. ನನ್ನ ವಾಹನದ ಮೇಲೆ ಬಂದ ಹಿನ್ನೆಲೆ ಅದರನ್ನು ಗಂಭೀರವಾಗಿ ತೆಗೆದುಕೊಂಡಿದ್ದೇನೆ. ಅದಕ್ಕೆ ಚಾಲಕನಿಗೆ ವಾರ್ನ್ ಮಾಡಿ ಅಂತಾ ಪಿಎಗೆ ಹೇಳಿದ್ದೆ. ನನ್ನ ಕಾರಿನ ಮೇಲೆಯೇ ಆತ ಬಂದಿದ್ದ. ನಮ್ಮದು ಸಣ್ಣ ಗಾಡಿ ಅದು ದೊಡ್ಡ ಬಸ್. ಡ್ರೈವರ್ ಯಾರು ಅಂತ ಕೂಡ ಗೊತ್ತಿಲ್ಲ. ಇದು ಸಚಿವರ ಪ್ರಶ್ನೆ ಇಲ್ಲ. ಸಾಮಾನ್ಯ ಜನರಿಗೂ ಹೀಗೆ ಆಗಬಹುದು ಎಂದರು. ಮಿನಿಸ್ಟರ್ ಕಾರ್ ಮೇಲೆಯೇ ಹೀಗೆ ಬಂದರೆ ಸಾಮಾನ್ಯರಿಗೆ ಹೇಗಾಗಬೇಡ? ನಗರದಲ್ಲೇ ಆತ ಹೀಗೆ ಬಸ್ ನಡೆಸುತ್ತಾನೆಂದರೆ ಹೇಗೆ? ಅದಕ್ಕಾಗಿಯೇ ನಾನು ವಾರ್ನ್ ಮಾಡಲು ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು. ಇನ್ನೂ ಧಾರವಾಡದ ಪೊಲೀಸ್ ಮಕ್ಕಳ ವಸತಿ ಶಾಲೆಯ ಶಿಕ್ಷಕರನ್ನು ಹೊರ ಹಾಕಿರುವುದು ಗೊತ್ತಿಲ್ಲ ಎಂದು ಹೇಳಿದ ಸಚಿವರು, ಈ ಬಗ್ಗೆ ಪರಿಶೀಲಿಸುವಂತೆ ಡಿಸಿಗೆ ಸೂಚನೆ ನೀಡಿದರು.
ಅರೇ ತಮ್ಮಾ.. ಉಶ್.. ಕೇಳು:
ಸುಳ್ಳು ಹೇಳಿದ್ರೆ ತುಳಜಾ ಭವಾನಿ ಶಾಪಾ ಕೊಡ್ತಾಳೆ ನೀನು ನಿಜಾ ಹೇಳಿದ್ರೆ ನಿನ್ನ ಆಯುಷ್ಯ ಹೆಚ್ಚಲಿ..ಆದ್ರೆ ನೀನು ಸುಳ್ಳ ಹೇಳಿದ್ರೆ ತುಳಜಾ ಭವಾನಿ ನಿನ್ನ ನೋಡ್ಕೊಳ್ಳಲಿ ಹೋಗು..ಅರೇ ಬಾಬಾ ಇಲ್ಲೆ ಹವಾಗುಣ ಚಲೋ ಇಲ್ಲೇನು..ಕೆಲ್ಸಾ ಯಾಕ ಮಾಡವಲ್ಲಿ ನೀನು? ಬಾ ಕಾರವಾರಕ್ಕೆ ಹಾಕತೇನಿ ನಿನ್ನಾ ಮೀನಾ ತಿನ್ನೊಕೊಂತ ಇರುವಂತೆ ಅಲ್ಲೆ.., ಏ ತಹಶೀಲ್ದಾರ ನಿನ್ನ ಮನ್ಯಾಗ ದಿನಾ ನೀರ ಬರ್ತಾವಿಲ್ಲೋ? ಹಾಂ.. ಕುಂದಗೋಳಕ್ಕ ಮಾತ್ರ 15 ದಿನಕ್ಕೊಮ್ಮೆ ನೀರು? ಹಿಂಗಾದ್ರ ಹೆಂಗ? ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಜಿಲ್ಲೆಯ ವಿವಿಧ ಇಲಾಖೆ ಅಧಿಕಾರಿಗಳಿಗೆ ತಮ್ಮದೇ ಶೈಲಿಯಲ್ಲಿ ಚಾಟಿ ಬೀಸಿದ ಪರಿ ಇದು. 4ನೇ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಇಲಾಖಾವಾರು ಪ್ರಗತಿ ಪರಿಶೀಲನೆ ಮಾಡುವಾಗ ಅಧಿಕಾರಿಗಳ ಮೂಗು ಹಿಂಡಿದ ಸಚಿವರು, ಅವರ ತಪ್ಪುಗಳನ್ನು ಎತ್ತಿ ಹಿಡಿದು ಎಚ್ಚರಿಕೆ ನೀಡಿದರು. ಕಠಿಣ ಪ್ರಶ್ನೆ ಮತ್ತು ಉದಾಹರಣೆಗಳ ಮೂಲಕ ಸರಿಯಾಗಿ ತಮ್ಮ ಕೆಲಸ ನಿರ್ವಹಿಸುವಂತೆ ಸೂಚಿಸಿದರು.