Advertisement

ಕಗ್ಗಂಟಾಗಿಯೇ ಉಳಿದ ಇಡುಗಂಟು

11:12 PM Jan 09, 2022 | Team Udayavani |

ಬೆಂಗಳೂರು: ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರ ಭವಿಷ್ಯದ ಬದುಕಿನ ಆಸರೆಯಾಗಿ ರುವ “ಇಡುಗಂಟು’ ಮೊತ್ತವನ್ನು ಮಂಜೂರು ಮಾಡುವ ವಿಚಾರ ಕಗ್ಗಂಟಾಗಿದ್ದು, ಇದನ್ನೇ ನಂಬಿರುವ 1,468 ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕಂಗಾಲಾಗಿದ್ದಾರೆ.

Advertisement

ಇಡುಗಂಟು ಪ್ರಸ್ತಾವನೆ ಕೈಬಿಡು ವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯವರು ನಿರ್ದೇಶಕ ರಿಗೆ ಪತ್ರ ಬರೆದಿದ್ದಾರೆ. ಆದರೆ 1,468 ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಇಡುಗಂಟು ಪಾವತಿಸಲು 5.26 ಕೋಟಿ ರೂ. ಮಂಜೂರು ಮಾಡಬೇಕು ಎಂದು ನಿರ್ದೇಶಕರು ಇಲಾಖೆ ಕಾರ್ಯದರ್ಶಿಗೆ ಮನವಿ ಮಾಡಿದ್ದಾರೆ. ಇವರಿಬ್ಬರ ಪತ್ರ ವ್ಯವಹಾರದಲ್ಲಿ ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರು ಹೈರಾಣಾಗಿದ್ದಾರೆ.

ನೂತನ ಪಿಂಚಣಿ ಯೋಜನೆ(ಎನ್‌ಪಿಎಸ್‌)ಯಡಿ ನೋಂದಣಿಯಾಗದೆ ನಿವೃತ್ತಿಯಾದ ಮತ್ತು ನಿವೃತ್ತಿಯಾಗುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಇಡುಗಂಟು ಪಾವತಿಸುವ ಪ್ರಸ್ತಾವನೆ ಯನ್ನು ಕೈಬಿಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯದರ್ಶಿಯವರು 2021ರ ನ.18ರಂದು ನಿರ್ದೇಶಕರಿಗೆ ಪತ್ರ ಬರೆದಿದ್ದರು. ಆದರೆ, ಮಾನ ವೀಯತೆಯ ದೃಷ್ಟಿಯಿಂದ ಇಡುಗಂಟು ಪಾವತಿಸುವುದು ಸೂಕ್ತ. ಇಡುಗಂಟು ಪಾವತಿಸಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆಯರು ಮಾನವ ಹಕ್ಕು ಆಯೋಗಕ್ಕೂ ದೂರು ಸಲ್ಲಿಸಿದ್ದಾರೆ. ಆದ್ದರಿಂದ ಇಡುಗಂಟಿಗಾಗಿ ಮೊತ್ತ ಮಂಜೂರು ಮಾಡುವಂತೆ ನಿರ್ದೇಶಕರು ಕಾರ್ಯದರ್ಶಿಯವರಿಗೆ 2021ರ ಡಿ.23ರಂದು ಕೋರಿಕೆ ಸಲ್ಲಿಸಿದ್ದಾರೆ. ಆದರೆ, ಈವರೆಗೂ ಅಂತಿಮ ತೀರ್ಮಾನವಾಗಿಲ್ಲ.

ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಗೌರವಧನ ಸೇವೆಯ ಆಧಾರದಲ್ಲಿ ಕೆಲಸ ಮಾಡಿ 2016ರಿಂದ ಈವರೆಗೆ 432 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 1,036 ಸಹಾಯಕಿಯರು ಸಹಿತ ಒಟ್ಟು 1,468 ಮಂದಿ ನಿವೃತ್ತಿಯಾಗಿದ್ದಾರೆ. ಇವರು ನೂತನ ಪಿಂಚಣಿ ಯೋಜನೆಯಡಿ ನೋಂದಣಿ ಆಗಿಲ್ಲ ಎಂಬ ಕಾರಣಕ್ಕೆ ಇವರಿಗೆ ಪಿಂಚಣಿ ಸೌಲಭ್ಯ ಇಲ್ಲ. ಹಾಗಾಗಿ, ಒಂದು ಬಾರಿಯ ಇಡುಗಂಟು ಮೊತ್ತ ಕೊಡಬೇಕು ಎಂದು ಬೇಡಿಕೆ ಇತ್ತು. ಒಬ್ಬರಿಗೆ 1.50 ಲಕ್ಷ ರೂ.ಗಳು ನೀಡಬೇಕು ಎಂಬ ಪ್ರಸ್ತಾವನೆಯನ್ನು ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರು ಇಟ್ಟಿದ್ದರು.

ಇದನ್ನೂ ಓದಿ:ರಸ್ತೆ ಬಂದ್‌ ಮಾಡಿ ಮಹಾರಾಷ್ಟ್ರ ಸಂಪರ್ಕ ಕಡಿತ; ಕರ್ಫ್ಯೂ ಯಶಸ್ವಿ

Advertisement

ಒಪ್ಪದ ಆರ್ಥಿಕ ಇಲಾಖೆ
ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಒಪ್ಪಿರಲಿಲ್ಲ. ಹಲವು ಹಂತಗಳ ಚರ್ಚೆ ಬಳಿಕ 1,468 ನಿವೃತ್ತ ಅಂಗನವಾಡಿ ನೌಕರರು ಇಡುಗಂಟು ಯೋಜನೆಗೆ ಅರ್ಹರಿದ್ದು, ಅಂಗನವಾಡಿ ಕಾರ್ಯಕರ್ತೆಯರಿಗೆ 50 ಸಾವಿರ ಹಾಗೂ ಸಹಾಯಕಿಯರಿಗೆ 30 ಸಾವಿರ ರೂ.ಗಳಂತೆ 5.26 ಕೋ. ರೂ ಅನುದಾನ ಬಿಡುಗಡೆಗಾಗಿ 2021ರ ಎಪ್ರಿಲ್‌ನಲ್ಲಿ ಸರಕಾರಕ್ಕೆ ಪತ್ರ ಬರೆಯಲಾಗಿತ್ತು. ಆದರೆ, ಈ ಪ್ರಸ್ತಾವನೆ ಕೈಬಿಡುವಂತೆ ಇಲಾಖೆ ಕಾರ್ಯದರ್ಶಿಗಳು ತಿಳಿಸಿದ್ದರು. ಇದು ಗೊಂದಲವಾಗಿ ಮಾರ್ಪಟ್ಟಿದೆ.

ನೂತನ ಪಿಂಚಣಿ ಯೋಜನೆಯಡಿ ನೋಂದಣಿಯಾಗದ ನಿವೃತ್ತ ಅಂಗನವಾಡಿ ನೌಕರರಿಗೆ ಇಡುಗಂಟು ಪಾವತಿಸುವ ವಿಚಾರದಲ್ಲಿ ಸರಕಾರ ಸ್ಪಷ್ಟ ನಿರ್ಧಾರಕ್ಕೆ ಬರುತ್ತಿಲ್ಲ. ಇದರಿಂದ ನಿವೃತ್ತಿ ಹೊಂದಿ ಐದಾರು ವರ್ಷ ಕಳೆದರೂ 1,468 ಅಂಗನವಾಡಿ ನೌಕರರಿಗೆ ನಿವೃತ್ತಿ ಬಳಿಕದ ಜೀವನೋಪಾಯಕ್ಕೆ ಯಾವುದೇ ಆಧಾರ ಇಲ್ಲದಂತಾಗಿದೆ.
– ಎಸ್‌. ವರಲಕ್ಷ್ಮೀ, ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ.

– ರಫೀಕ್‌ ಅಹ್ಮದ್‌

 

Advertisement

Udayavani is now on Telegram. Click here to join our channel and stay updated with the latest news.

Next