ಚೆನ್ನೈ: ಟೀಚರ್ ಪಾಠ ಮಾಡುವ ವೇಳೆ ತರಗತಿಯಲ್ಲೇ ವಿದ್ಯಾರ್ಥಿನಿಯೋರ್ವಳು ಕುಸಿದು ಬಿದ್ದು ಮೃತಪಟ್ಟ ದಾರುಣ ಘಟನೆ ತಮಿಳುನಾಡಿನ ರಾಣಿಪೇಟೆಯಲ್ಲಿ ನಡೆದಿದೆ.
ರಾಣಿಪೇಟೆಯ ಖಾಸಗಿ ಶಾಲೆಯ ೯ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಅದ್ವಿತಾ(14) ಮೃತ ದುರ್ದೈವಿಯಾಗಿದ್ದಾಳೆ.
ಚೆನ್ನೈ-ಬೆಂಗಳೂರು ಹೆದ್ದಾರಿ (NH 44) ನಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು ಬೆಳಿಗ್ಗೆ 11.30 ರ ಸುಮಾರಿಗೆ ಟೀಚರ್ ತರಗತಿ ನಡೆಸುತ್ತಿದ್ದ ವೇಳೆ ಕೊನೆಯ ಬೆಂಚ್ ನಲ್ಲಿ ತನ್ನ ಸಹಪಾಠಿಯ ಜೊತೆ ಕುಳಿತ್ತಿದ್ದ ವಿದ್ಯಾರ್ಥಿನಿ ಅದ್ವಿತಾ ಒಮ್ಮೆಲೇ ಕುಸಿದು ಸಹಪಾಠಿಯ ಮೇಲೆ ಬಿದ್ದಿದ್ದಾಳೆ ಈ ವೇಳೆ ಗಾಬರಿಗೊಂಡ ಸಹಪಾಠಿ ಕಿರುಚಿದ್ದಾಳೆ ಇದನ್ನು ಗಮನಿಸಿದ ಶಿಕ್ಷಕಿ ಕೂಡಲೇ ಅದ್ವಿತಾ ನೆರವಿಗೆ ಧಾವಿಸಿದ್ದಾರೆ ಅಲ್ಲದೆ ಅಲ್ಲಿದ್ದ ಇತರ ವಿದ್ಯಾರ್ಥಿಗಳ ಬಳಿ ಶಾಲೆಯ ಶಿಕ್ಷಕರನ್ನು ಕರೆಯುವಂತೆ ಹೇಳಿದ್ದಾರೆ, ಕೂಡಲೇ ಅಲ್ಲಿದ್ದ ಇತರ ವಿದ್ಯಾರ್ಥಿಗಳು ಶಿಕ್ಷಕರನ್ನು ಕರೆಯಲು ಓಡಿದ್ದಾರೆ.
ಕೂಡಲೇ ವಿದ್ಯಾರ್ಥಿನಿಯನ್ನು ಪಕ್ಕದ ಆಸ್ಪತ್ರೆಗೆ ಕರೆದೊಯ್ದರೂ ಪರಿಶೀಲಿಸಿದ ವೈದ್ಯರು ವಿದ್ಯಾರ್ಥಿನಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ ವೇಳೆ ವಿದ್ಯಾರ್ಥಿನಿ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು ಅದಕ್ಕೆ ಚಿಕಿತ್ಸೆಯನ್ನು ಪಡೆಯುತ್ತಿದ್ದಳು ಎಂದು ಬಾಲಕಿಯ ಪೋಷಕರು ಮಾಹಿತಿ ನೀಡಿದ್ದಾರೆ.
ಶಾಲಾ ಕೊಠಡಿಯಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾದಲ್ಲಿ ಘಟನೆಯ ದೃಶ್ಯ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.