Advertisement

ಹುಣಸೂರು: ಒಂದು ದಿನಕ್ಕೆ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ 14 ವರ್ಷದ ಬಾಲಕಿ.!

04:56 PM Apr 30, 2022 | Team Udayavani |

ಹುಣಸೂರು: ಕ್ಯಾನ್ಸರ್ ಪೀಡಿತೆ ಬಾಲಕಿಯೊಬ್ಬಳ ಜೀವನದ ಬಹುದೊಡ್ಡ ಆಸೆಯನ್ನು ಒಂದು ದಿನದ ಮಟ್ಟಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ನನಸಾಗಿಸಿದ ಘಟನೆ ಹುಣಸೂರಿನಲ್ಲಿ ನಡೆದಿದೆ.

Advertisement

ಮಂಡ್ಯ ಜಿಲ್ಲೆಯ ಬೇವಕಲ್ಲು ಗ್ರಾಮದ ಈರಯ್ಯ-ನೇತ್ರಾವತಿ ದಂಪತಿ  ಪುತ್ರಿ 14 ವರ್ಷದ ಐಶ್ವರ್ಯ ಒಂದು ದಿನಕ್ಕೆ ಆರ್.ಎಫ್.ಓ ಆಗಿದ್ದಾಕೆ.

ಈಕೆ ಮೂಳೆ  ಕ್ಯಾನ್ಸರ್‌ಗೆ ತುತ್ತಾಗಿ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆಯುತ್ತಿದ್ದಾಳೆ. ಮೈಸೂರು ಅರಣ್ಯ ಭವನದಲ್ಲಿ “ಡಿ” ದರ್ಜೆ ನೌಕರರಾಗಿರುವ ಐಶ್ವರ್ಯಳ ಅಜ್ಜಿ ಹೇಳುತ್ತಿದ್ದ ಕತೆಗಳನ್ನು ಕೇಳಿ ಅರಣ್ಯ, ವನ್ಯಜೀವಿ ಹಾಗೂ ಪರಿಸರ ಸಂರಕ್ಷಣೆ ಕುರಿತು ಆಸಕ್ತಿ ವ್ಯಕ್ತಪಡಿಸುತ್ತಿದ್ದಳು.

ಬಾಲ್ಯದಿಂದಲೂ ಐಶ್ವರ್ಯಳಿಗೆ ಅರಣ್ಯಾಧಿಕಾರಿಯಾಗಬೇಕು ಎಂಬ ಹಂಬಲವಿತ್ತು. ಪೋಷಕರಿಗೂ ಮಗಳನ್ನು  ಅರಣ್ಯಾಧಿಕಾರಿಯಾಗಿಸಬೇಕೆಂಬ ಕನಸು ಹೊತ್ತಿದ್ದರು.  ಆದರೆ ಮಗಳಿಗೆ  ಕ್ಯಾನ್ಸರ್ ಇದೆ ಎಂಬುದನ್ನು ತಿಳಿದು ಸಂಕಟಪಟ್ಟರು.

ಆಸೆಗೆ ನೀರೇರೆದ ಫೌಂಡೇಶನ್; ಇಂಥ ಮಕ್ಕಳ ಕನಸನ್ನು  ನನಸಾಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರಿನ ಮೇಕ್  ವಿಶ್ ಫೌಂಡೇಶನ್ ಆಪ್ ಇಂಡಿಯಾ ಸಂಸ್ಥೆಯ ಅರುಣ್‌ಕುಮಾರ್ ಮತ್ತು  ಬಾಸ್ಕೋರವರ ಸತತ ಪರಿಶ್ರಮದಿಂದ ಅರಣ್ಯಾಧಿಕಾರಿಯಾಗುವ ಐಶ್ವರ್ಯರ  ಆಸೆಯನ್ನು ನನಸಾಗಿಸಲು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಸೆಳೆದು  ಐಶ್ವರ್ಯಳಿಗೆ ಖಾಕಿ ಸಮವಸ್ತ್ರ ಹಾಕುವ ಅವಕಾಶ ಕಲ್ಪಿಸಿಕೊಟ್ಟರು.

Advertisement

ಗುರುವಾರ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹುಣಸೂರು ನಿರ್ದೇಶಕರ ಕಛೇರಿಯಲ್ಲಿ ಐಶ್ವರ್ಯ ವಲಯ ಅರಣ್ಯಾಧಿಕಾರಿಯಾಗಿ  ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ವಿ.ಸತೀಶ್‌ರಲ್ಲಿ ವರದಿ ಮಾಡಿಕೊಂಡು,  ಏ.29ರ ಶುಕ್ರವಾರ ನಾಗರಹೊಳೆ ವನ್ಯಜೀವಿ ವಲಯದಲ್ಲಿ ಸಿಬ್ಬಂದಿಗಳಿಂದ  ಗೌರವರಕ್ಷೆ ಸ್ವೀಕರಿಸಿ, ವಲಯ ಕಛೇರಿಯಲ್ಲಿ ವಲಯ ಅರಣ್ಯಾಧಿಕಾರಿ  ಮುಹಮ್ಮದ್ ಜೀಷಾನ್‌ರಿಂದ ಅಧಿಕಾರ ಸ್ವೀಕರಿಸಿ, ಸಿಬ್ಬಂದಿಗಳೊಂದಿಗೆ ದೈನಂದಿನ  ಚಟುವಟಿಕೆಗಳ ಬಗ್ಗೆ ಚರ್ಚಿಸಿ, ಕಳ್ಳಬೇಟೆ ತಡೆ ಶಿಬಿರ ಹಾಗೂ ನಾಗರಹೊಳೆ ಉದ್ಯಾನದ ಅರಣ್ಯ  ಗಡಿಗಳನ್ನು ಪರಿಶೀಲಿಸಿದರು.

ವನ್ಯಜೀವಿಗಳ ಕಂಡು  ಪುಳಕಿತರಾಗಿದ್ದರು. ಒಂದು ದಿನದ ಕರ್ತವ್ಯ ಮುಗಿಸಿ, ಆರ್‌ಎಫ್‌ಓ  ಐಶ್ವರ್ಯ ತಾಯಿಯೊಂದಿಗೆ ಸಮವಸ್ತ್ರದಲ್ಲೇ ಊರಿಗೆ ಪಯಣ  ಬೆಳೆಸಿದಳು. ಹುಣಸೂರು ಕಛೇರಿಯಿಂದ ಎಸಿಎಫ್ ಸತೀಶ್ ಬೀಳ್ಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next