ಹಳೇಬೀಡು: ಪಟ್ಟಣದ ಮೇವು ಕೇಂದ್ರಕ್ಕೆ 14 ಟನ್‌ಗೂ ಹೆಚ್ಚು ಮೇವು ಹೆಚ್ಚುವರಿಯಾಗಿ ಪೂರೈಕೆಯಾಗಿರುವುದಕ್ಕೆ ರೈತರ ಮೊಗದಲ್ಲಿ ಸಂತಸ ಮೂಡಿದೆ.
ದಿನಂಪ್ರತಿ ರೈತರು ಮೇವಿಗಾಗಿ ಪಟ್ಟಣದ ಸಮೀಪದ ಬಂಡಾರಿಕಟ್ಟೆ ಗ್ರಾಮದ ಬಳಿಯಿರುವ ಬಯಲು ರಂಗಮಂದಿರದ ಬಳಿ ಕಾಯುತ್ತಿದ್ದ ರೈತರಿಗೆ ಗುರುವಾರ ಖುಷಿಯ ದಿನವಾ ಗಿತ್ತು. ಉದಯವಾಣಿ ಪತ್ರಿಕೆ ಯಲ್ಲಿ ಮೇವು ಅಭಾವದ ಬಗ್ಗೆ ವಿಸ್ತೃತ ವರದಿ ಮಾಡಲಾಗಿದ್ದು, ವರದಿಯ ಫಲಶೃತಿ ಪರಿಣಾಮ ಗುರುವಾರದಂದು ಹೆಚ್ಚುವರಿಯಾಗಿ ಮೇವು ಕೇಂದ್ರಕ್ಕೆ ಮೇವು ಬಂದಿರುವುದನ್ನು ಕಂಡ ರೈತರು ಸಂತೋಷ ಪಟ್ಟರು.
ಮೂರು ಇಲಾಖೆಗಳ ಸಹಯೋಗ: ಕಂದಾಯ ಇಲಾಖೆ, ಪಶುಪಾಲನೆ, ಗ್ರಾಮಪಂಚಾಯಿತಿ ಸಹಯೋಗದೊಂದಿಗೆ ರೈತರಿಗೆ ಮೇವು ವಿತರಿಸಲಾಗುತ್ತಿದೆ. ಕಂದಾಯ ಇಲಾಖೆ ಮೇವನ್ನು ಸಂಗ್ರಹಣೆ, ಸರಬರಾಜು. ಮಾಡಿದರೆ, ಗ್ರಾಮಪಂಚಾಯಿತಿ, ಹಾಗೂ ಪಂಚಾಯಿತಿ ಅಭಿವೃದ್ಧಿಅಧಿಕಾರಿಗಳು ಮೇಲ್ವಿಚಾರಣೆ ಮಾಡುತ್ತಾರೆ. ಪಶುಪಾಲನೆ ಇಲಾಖೆ ಟೋಕನ್ ವಿತರಣೆ, ಜಾನುವಾರುಗಳ ದೃಢೀಕರಣ, ಮೇವು ಗುಣ ಮಟ್ಟ ಪರಿಶೀಲನೆ ಮಾಡಿ ವಿತರಣೆ ಮಾಡುವ ಕಾರ್ಯ ಮಾಡಲಾಗುತ್ತಿದೆ.
ಹಲವು ಜಿಲ್ಲೆಗಳಿಂದ ಮೇವು ಪೂರೈಕೆ: ಹೋಬಳಿಯ 5 ಪಂಚಾಯಿತಿ ಕೇಂದ್ರಗಳಿಗೆ ಮಲೆಬೆನ್ನೂರು, ಶಿವಮೊಗ್ಗ, ಭದ್ರಾವತಿ, ನಂಜನಗೂಡು, ಮಂಡ್ಯ, ಮುಂತಾದ ಕಡೆಗಳಿಂದ ರಾಗಿ, ಭತ್ತ, ಜೊಳದ ಸೆಪ್ಪೆ, ಮೇವು ತರಿಸಿ ಮೇವು ವಿತರಿಸಲಾಗುತ್ತಿದೆ.
ಮಳೆಗಾಲವಾಗಿದ್ದ ಕಾರಣ ಶಿವಮೊಗ್ಗ, ಭದ್ರಾವತಿ ಭಾಗಗಳಲ್ಲಿ ಹೆಚ್ಚು ಮಳೇಯಾಗಿರುವ ಕಾರಣ ಮೇವು ತಡವಾಗಿ ಬಂದಿದೆ. ನಿಗದಿಯಂತೆ ರೈತರ ಅವಶ್ಯಕತೆಗೆ ತಕ್ಕಂತೆ ಪ್ರತಿದಿನ ಮೇವು ತರಿಸಿ ಮೇವು ವಿತರಣೆ ಮಾಡಲಾಗುತ್ತದೆ.
ಇಲ್ಲಿಯವರೆಗೆ 240 ಟನ್ ಮೇವು ವಿತರಣೆ ಮಾಡಲಾಗಿದೆ. 980 ಮಂದಿ ಇದರ ಪ್ರಯೋಜನ ಕೂಡ ಪಡೆದು 6,995 ರಾಸುಗಳಿಗೆ ಮೇವು ಪೂರೈಕೆ ಮಾಡಲಾಗಿದೆ.
ಗುಣ ಮಟ್ಟವಿಲ್ಲದ ಮೇವನ್ನು ವಾಪಸ್ ಕಳುಹಿಸಿ ಉತ್ತಮ ಮೇವನ್ನು ತರಿಸಿ ರೈತಬಾಂಧವರಿಗೆ ವಿರತಣೆ ಮಾಡಲಾಗುತ್ತಿದೆ ಎಂದು ಪಶುಪಾಲನಾ ವೈದ್ಯಾಧಿಕಾರಿ ಡಾ.ಎಂ. ವಿನಯ್ ಅವರು ತಿಳಿಸಿದ್ದಾರೆ.