Advertisement

14 ಪಿಎಫ್ಐ ಮುಖಂಡರು 10 ದಿನ ಪೊಲೀಸ್‌ ವಶಕ್ಕೆ

10:18 PM Sep 23, 2022 | Team Udayavani |

ಬೆಂಗಳೂರು: ಕೋಮುಸೌಹಾರ್ದಕ್ಕೆ ಧಕ್ಕೆ ಮತ್ತು ಶಾಂತಿ ಸುವ್ಯವಸ್ಥೆಗೆ ಭಂಗ ಉಂಟು ಮಾಡುವ ಉದ್ದೇಶದಿಂದ ಗುಂಪು ರಚಿಸಿಕೊಂಡಿದ್ದ ಆರೋಪದಡಿ ಬೆಂಗಳೂರಿನ ಉಗ್ರ ನಿಗ್ರಹ ಪಡೆ (ಎಟಿಎಸ್‌), ಸ್ಥಳೀಯ ಪೊಲೀಸರು ಹಾಗೂ ರಾಜ್ಯ ಗುಪ್ತಚರ ದಳ ಹಾಗೂ ರಾಜ್ಯ ಪೊಲೀಸರು ಬಂಧಿಸಿದ 14 ಮಂದಿ ಪಿಎಫ್ಐ ಕಾರ್ಯಕರ್ತರನ್ನು ಶುಕ್ರವಾರ ಕೋರ್ಟ್‌ಗೆ ಹಾಜರು ಪಡಿಸಿ, 10 ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ.

Advertisement

ಬೆಂಗಳೂರಿನ ಪಿಳ್ಳಣ್ಣ ಗಾರ್ಡ್‌ನ್‌ ನಿವಾಸಿ ನಾಸೀರ್‌ ಪಾಷಾ, ಎಚ್‌ಬಿಆರ್‌ ಲೇಔಟ್‌ನ ಮನ್ಸೂರ್‌ ಅಹ್ಮದ್‌, ಕಲಬುರಗಿಯ ಶೇಖ್‌ ಇಜಾಜ್‌ ಅಲಿ, ಮೈಸೂರಿನ ಮೊಹಮ್ಮದ್‌ ಖಲಿಮುಲ್ಲಾ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಅಬ್ದುಲ್‌ ಖಾದರ್‌, ಬಂಟ್ವಾಳ ತಾಲೂಕಿನ ಮೊಹಮ್ಮದ್‌ ತಾಫೀರ್‌, ಮಂಗಳೂರಿನ ಮೊಹಿನುದ್ದೀನ್‌, ನವಾಜ್‌ ಕವೂರ್‌, ಅಶ್ರಫ್ ಜೋಕಟೆ, ಅಯುಬ್‌ ಕೆ. ಅಜೆಂಡಿ, ಶಿವಮೊಗ್ಗದ ಶಾಹೀದ್‌ ಖಾನ್‌, ದಾವಣಗೆರೆಯ ಇಮಾದುದ್ದೀನ್‌, ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಅಬ್ದುಲ್‌ ಅಜೀಜ್‌ ಅಬ್ದುಲ್‌, ಕೊಪ್ಪಳ ಜಿಲ್ಲೆಯ ಮೊಹಮ್ಮದ್‌ ಫ‌ಯಾಜ್‌ ಎಂಬವರನ್ನು ಹತ್ತು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿದೆ.

ತಲೆಮರೆಸಿಕೊಂಡಿರುವ ಮಂಗಳೂರಿನ ಮೊಹಮ್ಮದ್‌ ಅಶ್ರಫ್ ಅನ್ಕಜಲ್‌, ಬಜಪೆಯ ಮೊಹಮ್ಮದ್‌ ಶರೀಫ್, ಪುತ್ತೂರಿನ ಅಬ್ದುಲ್‌ ರಜಾಕ್‌, ದಾವಣಗೆರೆಯ ಆರ್‌.ಕೆ.ತಾಹೀರ್‌, ಉತ್ತರ ಕನ್ನಡ ಜಿಲ್ಲೆಯ ಮೊಸೀನ್‌ ಅಬ್ದುಲ್‌ ಶಾಕೂರ್‌ ಹೊನ್ನಾವರ ಅವರ ಪತ್ತೆಗಾಗಿ ವಿಶೇಷ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಆರೋಪಿಗಳ ವಿರುದ್ಧ ಆರೋಪವೇನು?
ಆರೋಪಿಗಳು ಪಿಎಫ್ಐ ಸಂಘಟನೆ ಹೆಸರಿನಲ್ಲಿ ದೇಶದ್ರೋಹದ ಕೃತ್ಯಗಳನ್ನು ಎಸಗುತ್ತಿದ್ದರು. ಮುಸ್ಲಿಂ ಯುವಕರನ್ನು ಮೂಲಭೂತವಾದಿಗಳನ್ನಾಗಿಸಿ ದೊಡ್ಡ ಮಟ್ಟದ ವಿದ್ವಂಸಕ ಕೃತ್ಯಗಳನ್ನು ನಡೆಸಲು ಧಾರ್ಮಿಕ ಸ್ಥಳ, ನಿರ್ದಿಷ್ಟ ಸಮುದಾಯದ ವ್ಯಕ್ತಿಗಳ ಬಗ್ಗೆ ದ್ವೇಷ ಭಾವನೆ ಹುಟ್ಟು ಹಾಕುತ್ತಿದ್ದರು.

ಪ್ರಮುಖವಾಗಿ ದೇಶ ಮತ್ತು ರಾಜ್ಯದಲ್ಲಿ ಭಾರೀ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದರು.
ಅಲ್ಲದೆ, ಉದ್ದೇಶಪೂರ್ವಕವಾಗಿ ಸೃಷ್ಟಿಸಿರುವ ಕಾರ್ಯಕ್ರಮ ಮತ್ತು ತಪ್ಪು ಮಾಹಿತಿಯನ್ನು ಒಳಗೊಂಡ ಭಾಷಣದ ತುಣುಕುಗಳು ಮತ್ತು ಪೋಸ್ಟರ್‌ಗಳನ್ನು ಆಫ್ಲೈನ್‌ ಮತ್ತು ಆನ್‌ಲೈನ್‌ ಮೂಲಕ ಹೊಸದಾಗಿ ಸಂಘಟನೆಗೆ ಸೇರಿಕೊಂಡಿರುವ ಯುವಕರಿಗೆ ತೋರಿಸಿ ಪ್ರಚೋದಿಸುತ್ತಿದ್ದರು. ಜತೆಗೆ ತರಬೇತಿ ಕ್ಯಾಂಪ್‌ಗ್ಳನ್ನು ಆಯೋಜಿಸುತ್ತಿದ್ದ ಆರೋಪಿಗಳು, ಮಾರಕಾಸ್ತ್ರಗಳು, ಶಸ್ತ್ರಾಸ್ತ್ರಗಳ ಬಳಕೆ ಕುರಿತು ತರಬೇತಿ ನೀಡುತ್ತಿದ್ದರು ಎಂಬುದು ಇವರ ಮೇಲಿನ ಆರೋಪವಾಗಿದೆ.

Advertisement

ಎನ್‌ಐಎ ಅಧಿಕಾರಿಗಳು ರಾಜ್ಯದಲ್ಲಿ ಬಂಧಿಸಿರುವ ಏಳು ಮಂದಿ ಆರೋಪಿಗಳು, ಅಸ್ಸಾಂ, ಬಿಹಾರ, ತಮಿಳುನಾಡು, ಕೇರಳದ ಹಾಗೂ ಇತರ ರಾಜ್ಯಗಳಲ್ಲಿರುವ ಮೂಲಭೂತವಾದಿಗಳ ಜತೆ ನೇರ ಸಂಪರ್ಕದಲ್ಲಿದ್ದರು. ಈ ಆರೋಪಿಗಳ ಜತೆ ರಾಜ್ಯ ಪೊಲೀಸರು ಬಂಧಿಸಿರುವ ಪಿಎಫ್ಐ ಕಾರ್ಯಕರ್ತರು ನಿರಂತರ ಸಂಪರ್ಕದಲ್ಲಿದ್ದು, ಅವರ ಸೂಚನೆ ಮೇರೆಗೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುತ್ತಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಈ ಕ್ಯಾಂಪ್‌ಗಳಲ್ಲಿ ಉತ್ತಮವಾಗಿ ತರಬೇತಿ ಪಡೆದ ಯುವಕರನ್ನು ನಿರ್ದಿಷ್ಟ ಧರ್ಮದ ಮುಖಂಡರು, ಸಾಮಾಜಿಕ ಮತ್ತು ರಾಜಕೀಯ ವ್ಯಕ್ತಿಗಳ ಮೇಲೆ ದಾಳಿಗೆ ಬಳಸಿಕೊಳ್ಳಲಾಗುತ್ತಿತ್ತು. ಭಾರತದ ದ್ವೇಷದ ಭಾವನೆ ಸೃಷ್ಟಿಸುತ್ತಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಧಿಕ್ಕರಿಸುವ ಮೂಲಕ ಭಾರತದ ವಿರುದ್ಧ ಅಸಮಾಧಾನ ಮೂಡಿಸುವುದು, ರಾಷ್ಟ್ರದ ಏಕತೆ, ಸಾರ್ವಭೌಮತೆ ಮತ್ತು ಸಮಗ್ರತೆಗೆ ಬೆದರಿಕೆ ಹಾಕುವುದು ಆರೋಪಿಗಳ ಮೂಲ ಉದ್ದೇಶವಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next