ಮುಂಬೈ: ನೀಲಿ ಸಿನಿಮಾ ನಿರ್ಮಾಣ ಪ್ರಕರಣದಡಿ ಬಂಧನಕ್ಕೊಳಗಾಗಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರ ಜೈಲು ವಾಸ ಮುಂದುವರೆದಿದೆ. ಈತನನ್ನು 14 ದಿನಗಳ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಬಾಂಬೆ ಹೈಕೋರ್ಟ ಆದೇಶಿಸಿದೆ.
ಈ ಹಿಂದೆ ಪೊಲೀಸ್ ಕಸ್ಟಡಿಗೆ ನೀಡಲಾಗಿದ್ದ ಅವಧಿ ಇಂದಿಗೆ (ಜು.27 ) ಮುಕ್ತಾಯವಾದ ಹಿನ್ನೆಲೆ ಆರೋಪಿ ರಾಜ್ ಕುಂದ್ರಾನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಈ ವೇಳೆ ಮುಂದಿನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಅದೇಶ ಹೊರಡಿಸಿತು.
ಜಾಮೀನಿಗೆ ಆಗ್ರಹಿಸಿದ ರಾಜ್ ಕುಂದ್ರಾ ಪರ ವಕೀಲು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಇದರ ವಿಚಾರಣೆ ನಾಳೆ ನಡೆಯಲಿದೆ.
ಈ ಪ್ರಕರಣದಡಿ ಬಂಧನಕ್ಕೆ ಒಳಗಾಗಿರುವ ಮತ್ತೊಬ್ಬ ಆರೋಪಿ ರಿಯಾನ್ ಥಾರ್ಪ್ ನನ್ನೂ 14 ದಿನಗಳ ವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಇನ್ನು ಅಶ್ಲೀಲ ಸಿನಿಮಾಗಳ ನಿರ್ಮಾಣ ಹಾಗೂ ವಿವಿಧ ಆ್ಯಪ್ ಗಳ ಮೂಲಕ ಅವುಗಳ ವಿತರಣೆ ಆರೋಪದಡಿ ಉದ್ಯಮಿ ರಾಜ್ ಕುಂದ್ರಾನನ್ನು ಮುಂಬೈನ ಕ್ರೈಂ ಬ್ರ್ಯಾಂಚ್ ನ ಪೊಲೀಸರು ಬಂಧಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ನಟಿ ಶಿಲ್ಪಾ ಶೆಟ್ಟಿಯನ್ನೂ ವಿಚಾರಣೆಗೆ ಒಳಪಡಿಸಲಾಗಿತ್ತು.