ಚಳಿಗಾಲದ ಅಧಿವೇಶನದಲ್ಲಿ 14 ವಿಧೇಯಕ ಮಂಡನೆ
Team Udayavani, Dec 19, 2022, 6:55 AM IST
ಸುವರ್ಣ ಸೌಧ: ಪ್ರಸಕ್ತ ಸಾಲಿನ ಚಳಿಗಾಲದ ಅಧಿವೇಶನದಲ್ಲಿ 14 ವಿಧೇಯಕ ಮಂಡನೆಯಾಗಲಿದೆ. ಇದರ ಜತೆಗೆ ಸದಸ್ಯರೊಬ್ಬರು ಖಾಸಗಿ ವಿಧೇಯಕ ಮಂಡನೆಗೂ ಅರ್ಜಿ ಸಲ್ಲಿಸಿದ್ದಾರೆ ಎಂದು ವಿಧಾನ ಪರಿಷತ್ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಹೇಳಿದರು.
ಸುವರ್ಣ ಸೌಧದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸದಸ್ಯರು ಈ ಅಧಿವೇಶನದಲ್ಲಿ 1,452 ಪ್ರಶ್ನೆಗಳನ್ನು ಕೇಳಿದ್ದಾರೆ. ಇದನ್ನು 150ಕ್ಕೆ ಸೀಮಿತಗೊಳಿಸಿ, ಪ್ರತಿ ದಿನ 15 ಪ್ರಶ್ನೆಗಳಿಗೆ ಪ್ರಶ್ನೋತ್ತರದಲ್ಲಿ ಅವಕಾಶ ನೀಡಲಾಗುವುದು. 900ಕ್ಕೂ ಅಧಿಕ ಪ್ರಶ್ನೆಗಳಿಗೆ ಲಿಖೀತ ರೂಪದಲ್ಲಿ ಉತ್ತರ ನೀಡಲಾಗುವುದು ಎಂದರು.
ಸಮಯದ ಲಭ್ಯತೆಯ ಆಧಾರದಲ್ಲಿ ಸದನ ಸಲಹಾ ಸಮಿತಿಯ ತೀರ್ಮಾನದಂತೆ ಕೆಲ ವಿಷಯಗಳ ಚರ್ಚೆಗೂ ಅವಕಾಶ ನೀಡಲಾಗುವುದು. ಒಂದು ಖಾಸಗಿ ಮಸೂದೆ ಮಂಡಿಸುವ ಬಗ್ಗೆ ಮೇಲ್ಮನೆ ಸದಸ್ಯರಾದ ಎನ್. ರವಿಕುಮಾರ್ ಅವರು ಅರ್ಜಿ ಸಲ್ಲಿಸಿದ್ದಾರೆ. ಹಾಗೆಯೇ ಖಾಸಗಿ ನಿರ್ಣಯಕ್ಕೆ ಸಂಬಂಧಿಸಿದಂತೆ ಸದಸ್ಯರಾದ ಯು.ಬಿ.ವೆಂಕಟೇಶ್ ಅವರು ಅರ್ಜಿ ಸಲ್ಲಿದ್ದಾರೆ. ಇವುಗಳನ್ನು ಪರಿಶೀಲಿಸಿ, ಮುಂದಿನ ಕ್ರಮವಹಿಸಲಿದ್ದೇವೆ ಎಂದು ಹೇಳಿದರು.
ಸಭಾಪತಿ ಚುನಾವಣೆ
ಕಳೆದ 7 ತಿಂಗಳಿಂದ ಸಭಾಪತಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಡಿ.21ರಂದು ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಡಿ.20ರೊಳಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಸದ್ಯ ಸಭಾಪತಿ ಹುದ್ದೆಯಲ್ಲಿರುವುದರಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಸಂಬಂಧ ಮುಂದೆ ನಿರ್ಧರಿಸಲಾಗುವುದು ಎಂದು ಮಲ್ಕಾಪುರೆ ಹೇಳಿದರು.
ಸಲಹಾ ಸಮಿತಿ ನಿರ್ಧರಿಸಲಿದೆ: ಕಳೆದ ಅಧಿವೇಶನದಲ್ಲಿ ವಕ್ಫ್ ಆಸ್ತಿ ಕಬಳಿಕೆ ವರದಿಗೆ ಸಂಬಂಧಿಸಿದ ವಿಚಾರವನ್ನು ಸದಸ್ಯರೊಬ್ಬರು ಮಂಡಿಸಿದ ಸಂದರ್ಭದಲ್ಲಿ ಸರ್ಕಾರದ ಗಮನಕ್ಕೆ ತರಲಾಗಿತ್ತು ಮತ್ತು ಯಾವುದೇ ಸೂಚನೆ ಇಲ್ಲದೆ ಈ ರೀತಿ ವರದಿ ಮಂಡಿಸುವುದು ಸರಿಯಲ್ಲ ಎಂಬುದನ್ನು ಸೂಚಿಸಲಾಗಿತ್ತು. ಸಾಂವಿಧಾನಿಕ ಪರಂಪರೆಯಲ್ಲಿ ಆಡಳಿತಪಕ್ಷಕ್ಕೆ ಎಷ್ಟು ಜವಾಬ್ದಾರಿಯಿದೆಯೋ ಅಷ್ಟೇ ಜವಾಬ್ದಾರಿ ವಿರೋಧ ಪಕ್ಷಕ್ಕೂ ಇರುತ್ತದೆ. ಸಭಾಪತಿ ಪೀಠದ ಗಮನಕ್ಕೆ ಬಾರದೇ ಯಾವುದೇ ವಿಷಯ ಮಂಡನೆಯಾಗುವುದಿಲ್ಲ ಮತ್ತು ಅದಕ್ಕೆ ಅವಕಾಶ ನೀಡುವುದೂ ಇಲ್ಲ ಎಂದು ಮಲ್ಕಾಪುರೆ ಸ್ಪಷ್ಟಪಡಿಸಿದರು.