Advertisement

ಕಾರ್ಮಿಕರಿಗೆ 14.16 ಕೋಟಿ ಪರಿಹಾರ

06:10 PM Aug 16, 2020 | Suhan S |

ಯಾದಗಿರಿ: ಕೋವಿಡ್‌ ಹಿನ್ನೆಲೆಯಲ್ಲಿ ಲಾಕ್‌ ಡೌನ್‌ ಸಂದರ್ಭದಲ್ಲಿ ನಿರುದ್ಯೋಗಿಗಳಾದ ಕಾರ್ಮಿಕರಿಗೆ ಪರಿಹಾರ ಧನವಾಗಿ ಪ್ರತಿ ಫಲಾನುಭವಿಗೆ 5 ಸಾವಿರಗಳಂತೆ ಒಟ್ಟು 28323 ಜನ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ 14.16 ಕೋಟಿ ರೂ.ಗಳ ಪರಿಹಾರ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಹೇಳಿದರು.

Advertisement

ಜಿಲ್ಲಾಡಳತದಿಂದ ನಗರದ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ 74ನೇ ಸ್ವಾತಂತ್ರ್ಯೊತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಜಿಲ್ಲೆಯ ಅಗಸರು, ಕ್ಷೌರಿಕರು, ಅಸಂಘಟಿತ ವಲಯದ ಒಟ್ಟು 3,511 ಕಾರ್ಮಿಕರಿಗೆ ಒಂದು ಬಾರಿ ಪರಿಹಾರವಾಗಿ ತಲಾ 5 ಸಾವಿರ ರೂ. ನೀಡಲು ಕ್ರಮ ವಹಿಸಲಾಗಿದೆ. ತೋಟಗಾರಿಕೆ ಇಲಾಖೆಯಿಂದ ಸಂಕಷ್ಟಕ್ಕೊಳಗಾದ 22 ಹೂ ಬೆಳೆಗಾರರಿಗೆ 3.16 ಲಕ್ಷ, 33 ತರಕಾರಿ ಬೆಳೆಗಾರರಿಗೆ 3.27 ಲಕ್ಷ ಹಾಗೂ 28 ಹಣ್ಣು ಬೆಳೆಗಾರರಿಗೆ 3.10 ಲಕ್ಷ ಪರಿಹಾರ ವಿತರಿಸಲಾಗಿದೆ ಎಂದರು.

ಮನುಕುಲಕ್ಕೆ ಮಾರಕವಾಗಿರುವ ಕೋವಿಡ್‌-19 ಸೋಂಕು ದೇಶ ಹಾಗೂ ರಾಜ್ಯದ ಅಭಿವೃದ್ಧಿ ವೇಗಕ್ಕೆ ತೊಡಕುಂಟಾಗಿದೆ. ಜನರು ಕೋವಿಡ್‌ ನಿಯಮಗಳನ್ನು ಪಾಲಿಸಿ ಕೊರೊನಾ ತಡೆಗೆ ಸಹಕರಿಸಬೇಕು ಎಂದರು. ಜಿಲ್ಲಾಡಳಿತ ಪ್ರವಾಹ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಮುಂಜಾಗ್ರತೆ ಕ್ರಮ ವಹಿಸಲಾಗಿದೆ. ಸಂಭವನೀಯ ಪ್ರವಾಹ ಪೀಡಿತ ಗ್ರಾಮಗಳ ನೋಡಲ್‌ ಅಧಿಕಾರಿಗಳಿಗೆ ಮುಂಜಾಗ್ರತೆ ಕ್ರಮವಾಗಿ ಗ್ರಾಮಗಳಿಗೆ ಭೇಟಿ ನೀಡಲು ಸೂಚಿಸಲಾಗಿದೆ. ಅಗತ್ಯ ಬಿದ್ದಲ್ಲಿ ಜನ ಮತ್ತು ಜಾನು ವಾರುಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ನಿರ್ದೇಶನ ನೀಡಲಾಗಿದೆ. ಯಾವುದೇ ತುರ್ತು ಸಂದರ್ಭಗಳನ್ನು ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದರು.

ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಅತಿ ಹೆಚ್ಚು ಪರಿಶಿಷ್ಟ ಜಾತಿಯ ಜನರು ವಾಸವಾಗಿರುವಜಿಲ್ಲೆಯ ಒಟ್ಟು 37 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಯಾದಗಿರಿ ತಾಲೂಕಿನ-13, ಶಹಾಪುರ ತಾಲೂಕಿನ-7, ಸುರಪುರ ತಾಲೂಕಿನ 17 ಗ್ರಾಮಗಳು ಆಯ್ಕೆಯಾಗಿವೆ. 2018-19ನೇ ಸಾಲಿಗೆ 10, 2019-20ನೇ ಸಾಲಿಗೆ 10 ಗ್ರಾಮಗಳು ಸೇರಿದಂತೆ ಇತ್ತೀಚೆಗೆ ಹೆಚ್ಚುವರಿಯಾಗಿ 17 ಗ್ರಾಮಗಳನ್ನು ಆದರ್ಶ ಗ್ರಾಮಗಳ ಪಟ್ಟಿಗೆ ಸೇರಿಸಲಾಗಿದೆ. ಈ ಗ್ರಾಮಗಳ ಅಭಿವೃದ್ಧಿಗೆ 177 ಕೋಟಿ ರೂ. ಬಿಡುಗಡೆಯಾಗಿದೆ ಎಂದರು.

ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷ ಬಸನಗೌಡ ಪಾಟೀಲ ಯಡಿಯಾಪುರ, ಎಸ್ಪಿ ಋಷಿಕೇಶ್‌ ಸೋನವಣೆ, ಪ್ರೊಬೇಷನರಿ ಐಎಎಸ್‌ ಅಧಿಕಾರಿ ಅಶ್ವಿ‌ಜಾ, ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next