Advertisement

ಅಂತಿಮ ಕಣದಲ್ಲಿ 133 ಅಭ್ಯರ್ಥಿಗಳು

10:15 AM May 21, 2019 | Suhan S |

ಸಾಗರ: ನಗರದಲ್ಲಿ ಮೇ 29ರಂದು ನಡೆಯಲಿರುವ ನಗರಸಭೆ ಚುನಾವಣೆ ಸಂಬಂಧ ಸೋಮವಾರ ನಾಮಪತ್ರ ವಾಪಸ್‌ ಪಡೆಯುವ ಕೊನೆಯ ದಿನಾಂಕವಾಗಿತ್ತು. ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದ 15 ಆಕಾಂಕ್ಷಿಗಳು ಕೊನೆಯ ದಿನ ನಾಮಪತ್ರ ಹಿಂಪಡೆದುಕೊಂಡಿದ್ದಾರೆ. ಇದರಿಂದ ಅಂತಿಮವಾಗಿ ಕಣದಲ್ಲಿ ಒಟ್ಟು 133 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ.

Advertisement

ಬಿಜೆಪಿ ಹಾಗೂ ಕಾಂಗ್ರೆಸ್‌ನ ಪ್ರಮುಖರು ಬಂಡಾಯವೆದ್ದ ಕಾರ್ಯಕರ್ತರ ಮನವೊಲಿಸುವ ಕೆಲಸವನ್ನು ಗಂಭೀರವಾಗಿ ನಡೆಸಿದರೂ ಕಾಂಗ್ರೆಸ್‌ ಮಾತ್ರ ಈ ನಿಟ್ಟಿನಲ್ಲಿ ಅಲ್ಪ ಯಶಸ್ಸನ್ನು ಪಡೆದಿದೆ.

ಆ ಪಕ್ಷದ ಪ್ರಮುಖ ಬಂಡಾಯ ಅಭ್ಯರ್ಥಿಗಳಾದ ತಾರಾಮೂರ್ತಿ ಹಾಗೂ ಶ್ರೀನಾಥ್‌ ಕಣದಿಂದ ಹಿಂಸರಿದಿದ್ದರೆ ಬಿಜೆಪಿ ಉಳಿಸಿ ಅಭಿಯಾನಕ್ಕೆ ಚಾಲನೆ ನೀಡಿರುವ ಬಿಜೆಪಿಯ 15 ಜನ ಬಂಡಾಯ ಅಭ್ಯರ್ಥಿಗಳು ಪಕ್ಷೇತರರಾಗಿ ಸ್ಪರ್ಧೆಯಲ್ಲಿ ಗಟ್ಟಿಯಾಗಿ ಉಳಿದಿದ್ದಾರೆ. ಈ ಗುಂಪಿನ ಯಾರೊಬ್ಬರೂ ನಾಮಪತ್ರ ಹಿಂಪಡೆಯಲು ತೆರಳದೆ ಒಗ್ಗಟ್ಟು ಪ್ರದರ್ಶಿಸಿರುವುದು ಬಿಜೆಪಿಯ ಗೆಲುವಿನ ಸಾಧ್ಯತೆಗೆ ಆತಂಕ ತಂದಿದೆ ಎಂಬ ಮಾತು ಕೇಳಿಬರುತ್ತಿದೆ.

10ನೇ ವಾರ್ಡ್‌ನಲ್ಲಿ ಸ್ಪರ್ಧೆ ಬಯಸಿದ್ದ ಶ್ರೀನಿವಾಸ ಎಂಬ ಅಭ್ಯರ್ಥಿ ಬಿಜೆಪಿಯ ಸ್ಪರ್ಧಾಳು ಗಣೇಶ ಪ್ರಸಾದ ಅವರ ಜೊತೆಗೆ ಚುನಾವಣೆ ವಿಭಾಗಕ್ಕೆ ತೆರಳಿ ತಮ್ಮ ನಾಮಪತ್ರ ಹಿಂದಕ್ಕೆ ಪಡೆದುಕೊಂಡಿದ್ದಾರೆ.

ವಾರ್ಡ್‌ 1- ಎಚ್.ಅಶೋಕ, ವಾರ್ಡ್‌ 5 -ತಾರಾಮೂರ್ತಿ, ಎಸ್‌.ಗೌರವ್‌, ವಾರ್ಡ್‌ 6- ಜೆ.ವೈ. ಕುಮಾರ, ಲಕ್ಷ ್ಮಣ್‌ ಸಾಗರ್‌, ಜಗದೀಶ, ವಾರ್ಡ್‌ 10-ಶ್ರೀನಿವಾಸ, ವಾರ್ಡ್‌-13 ಸಿ.ಪಿ. ಸುಧಾ, ವಾರ್ಡ್‌ -17-ವಿ. ಪ್ರದೀಪ, ವಾರ್ಡ್‌-18 -ಶ್ರೀನಾಥ, ವಾರ್ಡ್‌-19 ಎಚ್.ಸಿ. ಮಂಜಪ್ಪ, ವಾರ್ಡ್‌-28 ಭಾಷಾ ಶೇಖ್‌, ಗಣೇಶ ಅಚಾರಿ, ಮೆಹಬೂಬ್‌ ಅಲಿ, ವಾರ್ಡ್‌-30 ಸೌಭಾಗ್ಯ ಅಂತಿಮವಾಗಿ ನಾಮಪತ್ರ ಹಿಂಪಡೆದಿದ್ದಾರೆ.

Advertisement

ನಿಟ್ಟುಸಿರು ಕಷ್ಟ: ನಾಮಪತ್ರ ಹಿಂಪಡೆದವರಲ್ಲಿ 5ನೇ ವಾರ್ಡ್‌ನ ನಗರಸಭೆಯ ಮಾಜಿ ನಾಮಕರಣ ಸದಸ್ಯ ತಾರಾಮೂರ್ತಿ ಹಾಗೂ 18ನೇ ವಾರ್ಡ್‌ನ ಮಾಜಿ ನಗರಸಭಾ ಸದಸ್ಯ ಶ್ರೀನಾಥ ಕಾಂಗ್ರೆಸ್‌ ಪಕ್ಷದ ಟಿಕೆಟ್ಗಾಗಿ ಪ್ರಬಲ ಹೋರಾಟ ನಡೆಸಿದ್ದರು. ತಾರಾಮೂರ್ತಿ ಅವರಂತೂ ತಮಗೇ ಬಿ ಫಾರಂ ಖಚಿತ ಎಂದು ಪ್ರಚಾರದ ಕರಪತ್ರ ಕೂಡ ಮುದ್ರಿಸಿ ಹಂಚಲಾರಂಭಿಸಿದ್ದರು. ಆದರೆ, ಅನುಭವಿ ಪ್ರಮುಖ ಸುಂದರ್‌ಸಿಂಗ್‌ ಎದುರು ಬಿ ಫಾರಂ ಸಮರದಲ್ಲಿ ತಾರಾಮೂರ್ತಿಯವರಿಗೆ ಸೋಲಾಗಿತ್ತು. ಈ ಇಬ್ಬರು ನಾಮಪತ್ರ ಹಿಂಪಡೆದಿದ್ದರಿಂದ ಕಾಂಗ್ರೆಸ್‌ ನಿಟ್ಟುಸಿರು ಬಿಡುವ ಸ್ಥಿತಿಯಲ್ಲಿಲ್ಲ. ಪಕ್ಷದ ಮಾಜಿ ನಗರಸಭಾ ಸದಸ್ಯೆ ನಾದಿರಾ, ಮಾಜಿ ಪುರಸಭಾ ಉಪಾಧ್ಯಕ್ಷ ಮಹಮದ್‌ ಖಾಸಿಂ, ಮಾಜಿ ನಾಮಕರಣ ಸದಸ್ಯ ನಿಸಾರ್‌ ಅಹಮದ್‌ ಕುಂಜಾಲಿ, ಪುರಸಭೆಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹಂಜಾ ನಾಮಪತ್ರ ವಾಪಸ್‌ ಪಡೆಯದೆ ಕಣದಲ್ಲಿಯೇ ಉಳಿದಿದ್ದಾರೆ. ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಕಾಂಗ್ರೆಸ್‌ ಟಿಕೆಟ್ ರಾಜಕೀಯದಲ್ಲಿ ಪಾಲ್ಗೊಂಡಿರುವುದು ಸಮ್ಮತವಾಗದೆ ಹಲವಾರು ಕಾಂಗ್ರೆಸ್‌ ಪ್ರಮುಖರು ಇವರ ಸ್ಪರ್ಧೆಯನ್ನು ಬೆಂಬಲಿಸುತ್ತಿದ್ದಾರೆ ಎಂಬ ಸುದ್ದಿ ಕಾಂಗ್ರೆಸ್‌ ಪಕ್ಷಕ್ಕೆ ತಲೆಬಿಸಿ ತರಬಹುದು.

6ನೇ ವಾರ್ಡ್‌ ಮತ್ತು 28ನೇ ವಾರ್ಡ್‌ನಲ್ಲಿ ಸಹ ಕಾಂಗ್ರೆಸ್‌ ಪಕ್ಷದ ಮತಗಳನ್ನು ಪಡೆದುಕೊಳ್ಳುವ ಸಾಧ್ಯತೆಗಳಿದ್ದ ಪಕ್ಷೇತರರು ನಾಮಪತ್ರ ಹಿಂದಕ್ಕೆ ಪಡೆದುಕೊಂಡಿದ್ದಾರೆ. 6ನೇ ವಾರ್ಡ್‌ನಲ್ಲಿ 11 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಮೂವರು ನಾಮಪತ್ರ ಹಿಂದಕ್ಕೆ ಪಡೆದ ಹಿನ್ನೆಲೆಯಲ್ಲಿ ಈಗ 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 28ನೇ ವಾರ್ಡನಲ್ಲಿ ಸಹ ಮೂವರು ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ.

ಬಿಜೆಪಿ ಉಳಿಸಿ ಅಭಿಯಾನ ಪ್ರಾರಂಭಿಸಿದ ಬಿಜೆಪಿಯಿಂದ ಟಿಕೆಟ್ ವಂಚಿತ ಅಭ್ಯರ್ಥಿಗಳು ಮಾತ್ರ ತಮ್ಮ ನಾಮಪತ್ರ ಹಿಂದಕ್ಕೆ ಪಡೆದುಕೊಂಡಿಲ್ಲ. ಪ್ರಬಲವಾದ ಮತ್ತು ವಿಭಿನ್ನ ರೀತಿಯ ಆಮಿಷಗಳು ಬಂದಿದ್ದರೂ ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳದ ಈ ಬಣ ತನ್ನ ಬಲ ಹೆಚ್ಚಿಸಿಕೊಳ್ಳುವ ಯತ್ನ ಶುರುಮಾಡಿದೆ ಎಂದು ಹೆಸರು ಹೇಳಲು ಇಚ್ಛಿಸದ ಅತೃಪ್ತರೊಬ್ಬರು ಪತ್ರಿಕೆಗೆ ತಿಳಿಸಿದರು.

ನಾವು ಗೆಲುವಿಗಾಗಿ ಪ್ರಯತ್ನಿಸುತ್ತೇವೆ. ಒಂದೊಮ್ಮೆ ಸಾಧ್ಯವಾಗದಿದ್ದರೂ ಅಧಿಕೃತ ಬಿಜೆಪಿ ಅಭ್ಯರ್ಥಿಗಿಂತ ಕನಿಷ್ಟ ಒಂದು ಮತವನ್ನು ಹೆಚ್ಚಿಗೆ ಪಡೆಯುವ ನಿಟ್ಟಿನಲ್ಲಿ ಶ್ರಮಿಸುತ್ತೇವೆ ಎಂದು ಆ ಗುಂಪಿನ ಪ್ರಮುಖರಲ್ಲಿ ಓರ್ವರು ಘೋಷಿಸಿಕೊಂಡಿದ್ದಾರೆ.

ಚುನಾವಣೆಯಲ್ಲಿ ಹಣ ಬಲ ಹೊಂದಿದವರ ವಿರುದ್ಧ ಸ್ಪರ್ಧೆಗಿಳಿದವರನ್ನು ಹಣದ ಆಮಿಷವೊಡ್ಡಿ ನಾಮಪತ್ರ ಹಿಂಪಡೆಯುವಂತೆ ಮಾಡಲಾಗುತ್ತದೆ. ಇಂತಹ ಪರಿಸ್ಥಿತಿಯ ಲಾಭ ಪಡೆಯಬಹುದು ಎಂಬ ಕಾರಣಕ್ಕಾಗಿಯೇ ಕೆಲವು ವಾರ್ಡ್‌ಗಳಲ್ಲಿ ಹೆಚ್ಚಿನ ಪಕ್ಷೇತರರು ಸ್ಪರ್ಧಿಸಿದ್ದಾರೆ ಎಂಬ ನಂಬಿಕೆಯನ್ನು ಕಣಕ್ಕಿಳಿದವರು ಸುಳ್ಳು ಮಾಡಿದ್ದಾರೆ. ವಾರ್ಡ್‌ 23ರಲ್ಲಿ ಟಿಪ್‌ಟಾಪ್‌ ಬಶೀರ್‌ ಸ್ಪರ್ಧೆಗೆ ಇಳಿದಿದ್ದು, ಈ ವಾರ್ಡ್‌ ನಲ್ಲಿ 11 ಅಭ್ಯರ್ಥಿಗಳು ಕಣದಲ್ಲಿದ್ದರು. ಕೆಲವು ಪಕ್ಷೇತರರು ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳುತ್ತಾರೆ ಎಂದು ಸಾರ್ವಜನಿಕರು ನಿರೀಕ್ಷೆಯಲ್ಲಿದ್ದರು. ಆದರೆ ಯಾವುದೇ ಅಭ್ಯರ್ಥಿ ನಾಮಪತ್ರ ಹಿಂದಕ್ಕೆ ಪಡೆಯದಿರುವುದು ಗಮನಾರ್ಹವಾಗಿದೆ.

ಶಿಕಾರಿಪುರ ನಾಮಪತ್ರ ಹಿಂಪಡೆಯಲು ಕೊನೆದಿನವಾ ಸೋಮವಾರ 21 ಮಂದಿ ನಾಮಪತ್ರ ವಾಪಸ್‌ ಪಡೆದಿದ್ದು, ಅಂತಿಮ ಕಣದಲ್ಲಿ 77 ಉಮೇದುವಾರರು ಉಳಿದಿದ್ದಾರೆ.

ಪುರಸಭೆಯಲ್ಲಿರುವ ಒಟ್ಟು 23 ವಾರ್ಡ್‌ಗಳಲ್ಲಿ ಬಿಜೆಪಿ ಸ್ಪಧಿಸಿದ್ದರೆ, ಕಾಂಗ್ರೆಸ್‌-19 ವಾರ್ಡ್‌ಗಳಲ್ಲಿ, ಜೆಡಿಎಸ್‌ 4 ವಾರ್ಡ್‌ಗಳಲ್ಲಿ ಸ್ಪರ್ಧಿಸಿದೆ. ವಿವಿಧ ವಾರ್ಡ್‌ಗಳಿಂದ 32 ಜನ ಪಕ್ಷೇತರರು ಸ್ಪರ್ಧೆ ಮಾಡಿದ್ದಾರೆ. ಪ್ರಸಕ್ತ ಸ್ಥಳೀಯ ಚುನಾವಣೆಯಲ್ಲಿ ಪಕ್ಷತೇರರು ಹೆಚ್ಚಾಗಿ ಸ್ಪರ್ಧಿಸಿದ್ದಾರೆ. ಇದರು ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷದ ಗೆಲ್ಲುವ ಅಭ್ಯರ್ಥಿಗಳಿಗೆ ಹಿನ್ನಡೆಯಾಗಿದೆ ಎನ್ನುವ ಅಭಿಪ್ರಾಯ ಕೇಳಿಬಂದಿವೆ.

ಈಗಾಗಲೇ ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ತೊಡಕಾಗಿರುವ ಪಕ್ಷೇತರ ಅಭ್ಯರ್ಥಿಗಳ ಮನವೊಲಿಸಿ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಯುವಂತೆ ಮಾಡಲಾಗಿದೆ. ಇನ್ನೂ ಕೆಲವರು ರಾಷ್ಟ್ರೀಯ ಪಕ್ಷಗಳ ಮುಖಂಡರ ಕೈಗೆ ಸಿಗದಾಗಿದ್ದಾರೆ.

ಈ ಬಾರಿಯ ಪುರಸಭೆ ಚುನಾವಣೆ ಹಿಂದೆಂದಿಗಿಂತಲೂ ಹೆಚ್ಚು ಗಮನ ಸೆಳೆದಿದೆ. ಅಭ್ಯರ್ಥಿಗಳ ಆಯ್ಕೆಯಲ್ಲೂ ಸಾಕಷ್ಟು ಗೊಂದಲ ಉಂಟಾಗಿದೆ. ಆರ್ಹ ಅಭ್ಯರ್ಥಿಗಳಿಗೆ ಸ್ಥಳೀಯ ಚುನಾವಣೆಯಲ್ಲಿ ಸ್ವರ್ಧಿಸಲು ಸ್ಥಾನ ಸಿಗದೆ ಇರುವುದು ಕೂಡ ಬಂಡಾಯಕ್ಕೆ ಕಾರಣವಾಗಿದೆ.

ರಂಗೇರಿದ ಪ್ರಚಾರ ಕಣ: ಸಂಸದ ಬಿ.ವೈ. ರಾಘವೇಂದ್ರ ಅವರು ಚುನಾವಣಾ ಪ್ರಚಾರಕ್ಕೆ ಧುಮುಕಿದ ಬಳಿಕ ಹೊಸ ರಂಗುಬಂದಿದೆ. ಜಯನಗರ, ಸೊಪ್ಪಿನಕೇರಿ, ಕುಂಬಾರಗುಂಡಿ, ದೊಡ್ಡಪೇಟೆ, ಮುಂತಾದೆಡೆ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದು, ಅಭ್ಯರ್ಥಿಗಳಲ್ಲಿ ಬಲಬಂದಂತಾಗಿದೆ. ಪ್ರತಿ ವಾರ್ಡ್‌ಗಳಲ್ಲಿಯೂ ಹೊಸ ಚೈತನ್ಯ ಮೂಡಿದಂತಾಗಿದೆ.

ಪ್ರಚಾರ ಕಾರ್ಯದಲ್ಲಿ ಕಾಂಗ್ರೆಸ್‌ ಕೂಡ ಹಿಂದೆ ಬಿದ್ದಿಲ್ಲ. ಸದ್ದಿಲ್ಲದೆ ಪ್ರಚಾರ ಕಾರ್ಯ ಆರಂಭಿಸಿದೆ. ಒಟ್ಟಿನಲ್ಲಿ ಮಂಗಳವಾರದಿಂದ ಪುರಸಭೆ ಚುನಾವಣೆಗೆ ಹೊಸ ಆಯಾಮ ದೊರೆಯಲಿದೆ. ಗಮನ ಸೆಳೆದ ವಾರ್ಡ್‌ಗಳು: ರಾಜಕೀಯ ಜಿದ್ದಾಜಿದ್ದಿಗೆ ಪುರಸಭೆಯ 2 ,10, 14, 17 ವಾರ್ಡ್‌ ಗಳು ಮಾಜಿ, ಹಾಲಿಗಳ ಘಟಾನುಘಟಿಗಳ ಭವಿಷ್ಯ ನಿರ್ಣಾಯಕವಾಗಿವೆ. 14ನೇ ವಾರ್ಡ್‌ ಬಿ.ಎಸ್‌. ಯಡಿಯೂರಪ್ಪನವರ ನಿವಾಸವಿದ್ದು, ಕಳೆದ ಬಾರಿ ಕಾಂಗ್ರೆಸ್‌ ಪಕ್ಷದ ಪಾಲಾಗಿತ್ತು. ಈಗ ಮತ್ತೆ 14ನೇ ವಾರ್ಡ್‌ನ್ನು ಬಿಜೆಪಿ ತನ್ನತ್ತ ಸೆಳೆಯಲು ಮುಖಂಡರು ಪ್ರಚಾರ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next