ಹುಬ್ಬಳ್ಳಿ: ಎರಡು ಕಂಟೇನರ್ ಲಾರಿಗಳಲ್ಲಿ ತಮ್ಮ ರಾಜ್ಯಗಳಿಗೆ ತೆರಳುವಾಗ ಸಿಲುಕಿ ಕೊಂಡಿದ್ದ 130 ವಲಸೆ ಕಾರ್ಮಿಕರನ್ನು ಶ್ರಮಿಕ್ ರೈಲಿನ ಮೂಲಕ ಉತ್ತರ ಪ್ರದೇಶ-ಬಿಹಾರ ರಾಜ್ಯಕ್ಕೆ ಕಳುಹಿಸುವ ಕಾರ್ಯ ಜಿಲ್ಲಾಡಳಿತದಿಂದ ನಡೆಯಿತು.
ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನಿಂದ ಉತ್ತರ ಪ್ರದೇಶ- ಬಿಹಾರ ರಾಜ್ಯಗಳಿಗೆ ಕಂಟೇನರ್ ಲಾರಿಗಳಲ್ಲಿ ತೆರಳುತ್ತಿದ್ದಾಗ ಪೊಲೀಸರು ತಪಾಸಣೆ ನಡೆಸಿ ಅನಧಿಕೃತ ಪ್ರಯಾಣಿಸುತ್ತಿರುವ ಆರೋಪದಲ್ಲಿ ವಶಕ್ಕೆ ಪಡೆದಿದ್ದರು. ನಂತರ 130 ಕಾರ್ಮಿಕರನ್ನು ಜಿಲ್ಲಾಡಳಿತ ಇಲ್ಲಿನ ಸ್ಟಾರ್ ಹಾಲ್‌ನಲ್ಲಿ ವ್ಯವಸ್ಥೆ ಕಲ್ಪಿಸಿ ಉಪಹಾರ, ಊಟ ನೀಡಲಾಗಿತ್ತು. ಬುಧವಾರ ಅವರ ರಾಜ್ಯಗಳಿಗೆ ತೆರಳು ರೈಲಿನ ವ್ಯವಸ್ಥೆಯಿದ್ದ ಹಿನ್ನೆಲೆಯಲ್ಲಿ ಎಲ್ಲಾ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸಲಾಯಿತು.
ಟಿಕೆಟ್ಗೆ ದಾನಿಗಳ ನೆರವು: ಲಾರಿಗಳ ಮೂಲಕ ತಮ್ಮ ರಾಜ್ಯಗಳಿಗೆ ತೆರಳಲು ಲಾರಿ ಚಾಲಕರಿಗೆ ಹಣ ನೀಡಿದ್ದರು. ಹೀಗಾಗಿ ಕಾರ್ಮಿಕರಲ್ಲಿ ರೈಲು ಟಿಕೆಟ್ ಪಡೆಯಲು ಹಣ ಇರಲಿಲ್ಲ. ಎಲ್ಲಾ ಕಾರ್ಮಿಕರಿಗೆ ಟಿಕೆಟ್‌ಗಾಗಿ 1.52 ಲಕ್ಷ ರೂ. ಬೇಕಿತ್ತು. ತಮ್ಮಲ್ಲಿ ಯಾವುದೇ ಹಣವಿಲ್ಲ ಇರುವ ಹಣವನ್ನೆಲ್ಲಾ ಲಾರಿ ಚಾಲಕರಿಗೆ ನೀಡಿದ್ದೇವೆ. ಹೇಗಾದರೂ ಮಾಡಿ ತಮ್ಮೂರಿಗೆ ಕಳುಹಿಸಿಕೊಡುವಂತೆ ತಹಶೀಲ್ದಾರ್ ಶಶಿಧರ ಮಾಡ್ಯಾಳ ಹಾಗೂ ಪ್ರಕಾಶ ನಾಶಿ ಅವರಿಗೆ ಮನವಿ ಮಾಡಿದ್ದರು. ಈ ಕುರಿತು ಲಾರಿ ಚಾಲಕರನ್ನು ವಿಚಾರಿಸಿ ಆಯಾ ಕಾರ್ಮಿಕರಿಗೆ ಒಂದಿಷ್ಟು ಹಣ ಕೊಡಿಸಿದ್ದರು. ಆದರೂ ಎಲ್ಲಾ ಕಾರ್ಮಿಕರಿಗೆ ಟಿಕೆಟ್ ಪಡೆಯಲು ಹಣ ಸಾಲದಿದ್ದಾಗ ದಾನಿಗಳ ನೆರವು ಪಡೆದು 130 ಕಾರ್ಮಿಕರಿಗೂ ಟಿಕೆಟ್ ವ್ಯವಸ್ಥೆ ಮಾಡಿದ್ದರು. ನಾಲ್ಕು ಸಾರಿಗೆ ಸಂಸ್ಥೆಗಳ ಬಸ್‌ಗಳ ವ್ಯವಸ್ಥೆ ಮಾಡಿ ಪ್ರತಿಯೊಬ್ಬ ಕಾರ್ಮಿಕರ ಸಂಪೂರ್ಣ ಮಾಹಿತಿ ಪಡೆದು ರೈಲ್ವೆ ಟಿಕೆಟ್ ನೀಡಲಾಯಿತು. ಪ್ರತಿಯೊಬ್ಬರಿಗೆ ಮಾಸ್ಕ್, ಊಟದ ಪೊಟ್ಟಣ, ನೀರಿನ ಬಾಟಲ್ ನೀಡಲಾಯಿತು. ಕಳೆದ ಎರಡು ದಿನಗಳಿಂದ ಹೊಟ್ಟೆ ತುಂಬಾ ಉಪಹಾರ, ಊಟ, ವಸತಿ ವ್ಯವಸ್ಥೆ ಮಾಡಿದ ತಹಶೀಲ್ದಾರ್‌ಗೆ ಕಾರ್ಮಿಕರು ಕೃತಜ್ಞತೆ ಸಲ್ಲಿಸಿದರು.
ಪೊಲೀಸರು ನಮ್ಮನ್ನು ಹಿಡಿದಾಗ ಸಾಕಷ್ಟು ಹೆದರಿಕೆಯಾಯಿತು. ಮಧ್ಯಾಹ್ನದವರೆಗೂ ಹೊಟ್ಟೆಗೇನೂ ತಿಂದಿರಲಿಲ್ಲ. ನಮ್ಮನ್ನು ಎಲ್ಲಿಯೂ ಬಿಡದೆ ಒಂದೆಡೆ ಕೂಡಿಸಿದ್ದರು. ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಿ ಅಧಿಕಾರಿಗಳು ಇಲ್ಲಿಗೆ ಕರೆದುಕೊಂಡು ಬಂದು ಬಿಟ್ಟರೆಂದು ಹೇಳುವಾಗ ಕಾರ್ಮಿಕ ಜಿತೇಂದ್ರಕುಮಾರ ಕಣ್ಣುಗಳು ಒದ್ದೆಯಾದವು. ತಹಶೀಲ್ದಾರ್ ಶಶಿಧರ ಮಾಡ್ಯಾಳ ಮಾತನಾಡಿ, ಕಳೆದ ಎರಡು ದಿನಗಳಿಂದ ದಾನಿಗಳ ನೆರವಿನಿಂದ ಬೆಳಗಿನ ಉಪಹಾರ, ಊಟದ ವ್ಯವಸ್ಥೆ ಮಾಡಲಾಗಿದೆ. ಈ ಹಾಲ್‌ನ ಮಾಲಿಕರು ಕಾರ್ಮಿಕರಿಗೆ ವಸತಿ ಸೌಲಭ್ಯದೊಂದಿಗೆ ಎಲ್ಲಾ ಸೌಲಭ್ಯ ಕಲ್ಪಿಸಿದ್ದಾರೆ. ಟಿಕೆಟ್‌ಗೆ ಹಣದ ಕೊರತೆಯಾದಾಗ ದಾನಿಗಳ ನೆರವು ಪಡೆದು ಟಿಕೆಟ್ ಖರೀದಿಸಿ ಅವರನ್ನು ತಮ್ಮ ರಾಜ್ಯಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಎಲ್ಲರನ್ನೂ ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಲಾಗಿದೆ ಎಂದು ತಿಳಿಸಿದರು.
ಗ್ರಾಮಾಂತರ ತಹಶೀಲ್ದಾರ್ ಪ್ರಕಾಶ ನಾಶಿ ಹಾಗೂ ತಾಲೂಕು ಆಡಳಿತದ ಸಿಬ್ಬಂದಿ ಇದ್ದರು.