ಭೋಪಾಲ್: ಆನ್ ಗೇಮ್ ಚಟಕ್ಕೆ ಬಿದ್ದು, 40 ಸಾವಿರ ರೂಪಾಯಿ ಹಣ ಕಳೆದುಕೊಂಡಿದ್ದ 13 ವರ್ಷದ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಮಧ್ಯಪ್ರದೇಶದ ಛತಾರ್ ಪುರ್ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಕೋವಿಡ್ ಹೆಚ್ಚಳ: ಕೇರಳ, ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರು ಈ ನಿಯಮಗಳನ್ನು ಪಾಲಿಸಲೇಬೇಕು!
ಈ ಬಾಲಕನ ಕುಟುಂಬ ಛತಾರ್ ಪುರ್ ನ ಶಾಂತಿನಗರದಲ್ಲಿ ವಾಸವಾಗಿದ್ದು, ಈತ ತನ್ನ ಪೋಷಕರ ಗಮನಕ್ಕೆ ತಿಳಿಯದಂತೆ ಆನ್ ಲೈನ್ ನ ಫ್ರೀ ಫೈರ್ ಎಂಬ ರಾಯಲ್ ಯುದ್ಧ ಗೇಮ್ ನಲ್ಲಿ 40 ಸಾವಿರ ರೂಪಾಯಿ ಹಣ ವ್ಯಯಿಸಿದ್ದ.
ಬಾಲಕ ನೇಣಿಗೆ ಶರಣಾದ ಸಂದರ್ಭದಲ್ಲಿ ಈತನ ಸಹೋದರಿ ಮಾತ್ರ ಮನೆಯಲ್ಲಿದ್ದಳು. ಹುಡುಗನ ತಾಯಿ ಪೊಲೀಸರಿಗೆ ನೀಡಿರುವ ಮಾಹಿತಿ ಪ್ರಕಾರ, ತಾನು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ನನ್ನ ಬ್ಯಾಂಕ್ ಖಾತೆಯಿಂದ 1,500 ರೂಪಾಯಿ ಹಣ ಡೆಬಿಟ್ ಆಗಿರುವುದಾಗಿ ಸಂದೇಶ ಬಂದಿರುವುದಾಗಿ ತಿಳಿಸಿದ್ದರು.
ತನ್ನ ಖಾತೆಯಿಂದ ಹಣ ಡೆಬಿಟ್ ಆದ ಬಗ್ಗೆ ತಾಯಿ ಮೊಬೈಲ್ ಕರೆ ಮಾಡಿ ಮಗನ ಬಳಿ ವಿಚಾರಿಸಿದ್ದಳು. ಆ ಸಂದರ್ಭದಲ್ಲಿ ಮಗ ತಾನು ಆನ್ ಲೈನ್ ಗೇಮ್ ಗಾಗಿ ಹಣ ಬಳಸಿಕೊಂಡಿರುವುದಾಗಿ ಒಪ್ಪಿಕೊಂಡಿದ್ದ. ಆಗ ತಾಯಿ ಮಗನಿಗೆ ಬೈದು ಬುದ್ಧಿವಾದ ಹೇಳಿದ್ದರು. ಬಳಿಕ ಹುಡುಗ ನೇಣಿಗೆ ಶರಣಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.
ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ, ಸೂಸೈಡ್ ನೋಟ್ ಸಿಕ್ಕಿದ್ದು, ಅದರಲ್ಲಿ ತಾನು ಅಮ್ಮನ ಖಾತೆಯಿಂದ 40 ಸಾವಿರ ರೂಪಾಯಿ ತೆಗೆದಿದ್ದು, ಈ ಎಲ್ಲಾ ಹಣವನ್ನು ಫ್ರೀ ಫೈರ್ ಗೇಮ್ ಆಡಿ ಕಳೆದುಕೊಂಡಿರುವುದಾಗಿ ಬರೆದಿಟ್ಟಿರುವುದಾಗಿ ತಿಳಿಸಿದ್ದಾರೆ.
ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಪೋಷಕರಿಗೆ ಹಸ್ತಾಂತರಿಸಲಾಗಿದೆ. ಪ್ರಕರಣದ ಬಗ್ಗೆ ತನಿಖೆ ಮುಂದುವರಿದಿದೆ, ಈ ಹುಡುಗ ಆನ್ ಲೈನ್ ಗೇಮ್ ಗಾಗಿ ಹಣವನ್ನು ತಾನೇ ಖುದ್ದು ವಹಿವಾಟು ನಡೆಸಿದ್ದಾನೋ ಅಥವಾ ಬೇರೆ ಯಾರಾದರೂ ಬೆದರಿಕೆ ಹಾಕಿ ಆಟವಾಡಿಸುತ್ತಿದ್ದಾರೆಯೇ ಎಂಬುದು ತನಿಖೆಯಿಂದ ತಿಳಿದುಬರಬೇಕಾಗಿದೆ ಎಂದು ಹೇಳಿದ್ದಾರೆ.