ದಾವಣಗೆರೆ: ಜಿಲ್ಲಾ ವಿಶ್ವಕರ್ಮ ಸಮಾಜ ಸಂಘ, ಜಿಲ್ಲಾ ವಿಶ್ವಕರ್ಮ ಸಮಾಜದಿಂದ ಏ.13ರಂದು ಕಾಳಿಕಾ ದೇವಿ ರಸ್ತೆಯಲ್ಲಿನ ಕಾಳಿಕಾಂಬ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ 34ನೇ ವರ್ಷ ಸಾಮೂಹಿಕ ವಿವಾಹ, ಉಪನಯನ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಮಾಜದ ಪ್ರಧಾನ ಕಾರ್ಯದರ್ಶಿ ವಿ.ಎಂ. ಕೊಟ್ರೇಶಾಚಾರ್, 12ರಂದು ಸಂಜೆ 5.30ಕ್ಕೆ ಶ್ರೀ ಗಣಪತಿ ಪೂಜಾ ಪುಣ್ಯಾಹವಾಚನ ಹೋಮ, ನಾಂದಿ ಮೂಲಕ ವಿವಾಹ ಪೂರ್ವ ವಿಧಿ ವಿಧಾನ ಕೈಗೊಳ್ಳಲಾಗುವುದು.
13ರ ಬೆಳಗ್ಗೆ 4.40ರಿಂದ 5.30ರ ವರೆಗೆ ಉಪನಯನ ವಿಧಿ ವಿಧಾನ ನೆರವೇರಲಿವೆ ಎಂದರು. ಬೆಳಗ್ಗೆ 11.30ಕ್ಕೆ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠದ ಮಠಾಧೀಶ ಶಿವಸುಜ್ಞಾನತೀರ್ಥ ಸ್ವಾಮೀಜಿ, ಚಿಕ್ಕಬಳ್ಳಾಪುರ ಜಿಲ್ಲೆ ನಂದಿಬೆಟ್ಟದ ಶ್ರೀ ಶಿವಾತ್ಮಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ವಿಶ್ವಕರ್ಮ ಸಮಾಜದ ಸಂಘದ ಅಧ್ಯಕ್ಷ ಬಸಾಪುರ ಬಿ. ನಾಗೇಂದ್ರಾಚಾರ್, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಶಾಸಕ ಶಾಮನೂರು ಶಿವಶಂಕರಪ್ಪ, ಮೇಯರ್ ರೇಖಾ ನಾಗರಾಜ, ಜವಳಿ ವರ್ತಕ ಬಿ.ಸಿ. ಉಮಾಪತಿ ಪಾಲ್ಗೊಳ್ಳಲಿದ್ದಾರೆ ಎಂದರು. ಈ ಬಾರಿ 15 ಜೋಡಿ ವಿವಾಹ, 70 ಸಾಮೂಹಿಕ ಉಪನಯನ ಜರುಗಲಿವೆ.
ಸಂಘದ ಶುಲ್ಕ ಹೊರತುಪಡಿಸಿ, ವಿವಾಹಕ್ಕಾಗಲಿ, ಉಪನಯನಕ್ಕಾಗಲಿ ಯಾವುದೇ ಶುಲ್ಕ ಪಡೆದಿಲ್ಲ ಎಂದರು. ಸಂಘದ ಅಧ್ಯಕ್ಷ ಬಸಾಪುರದ ಬಿ. ನಾಗೇಂದ್ರಚಾರ್, ವಿ.ಎಂ. ಕೊಟ್ರೇಶಾಚಾರ್, ಪೂರ್ವಾಚಾರ್, ಬಿ.ವಿ. ರಾಜಶೇಖರ್, ಸಿದ್ಧಾಚಾರ್, ವೀರಭದ್ರಾಚಾರ್ ಸುದ್ದಿಗೋಷ್ಠಿಯಲ್ಲಿದ್ದರು.