ಜೈಪುರ : ರಾಜಸ್ಥಾನದ ಪ್ರತಾಪಗಢ ಜಿಲ್ಲೆಯಲ್ಲಿ ಅತ್ಯಂತ ವೇಗವಾಗಿ ಧಾವಿಸುತ್ತಿದ್ದ ಟ್ರಕ್, ಮದುವೆಯ ದಿಬ್ಬಣದ ಮೇಲೆ ಹರಿದು ಸಂಭವಿಸಿದ ಭೀಕರ ಅವಘಡದಲ್ಲಿ 13 ಮಂದಿ ಮೃತಪಟ್ಟು ಇತರ 18 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ನಾಲ್ವರು ಮಕ್ಕಳೂ ಸೇರಿದ್ದಾರೆ.
113ನೇ ರಾಜ್ಯ ಹೆದ್ದಾರಿಯಲ್ಲಿನ ರಾಮದೇವ ದೇವಸ್ಥಾನದ ಬಳಿ ನಿನ್ನೆ ಸೋಮವಾರ ತಡ ರಾತ್ರಿ ಈ ದುರ್ಘಟನೆ ನಡೆದಿದೆ. ಟ್ರಕ್ಕು ಬನಾಸ್‌ವಾರಾದಿಂದ ನಿಂಬಾಹೇರಾ ಕಡೆಗೆ ಹೋಗುತ್ತಿತ್ತು. ಆಗ ರಸ್ತೆ ಬದಿಯಲ್ಲಿ ಸಾಗುತ್ತಿದ್ದ ಮದುವೆ ದಿಬ್ಬಣದ ಮೇಲೆಯೆ ಟ್ರಕ್ ಹರಿಯಿತು ಎಂದು ಛೋಟಿ ಸದ್ರಿ ಡಿಎಸ್‌ಪಿ ವಿಜಯಪಾಲ್ ಸಿಂಗ್ ಸಂಧು ಹೇಳಿದರು.
ಮುಖ್ಯಮಂತ್ರಿ ಅಶೋಕ್ ಗೆಹಲೋಟ್ ಅವರು ಈ ಭೀಕರ ಅವಘಡದ ಬಗ್ಗೆ ತೀವ್ರ ಆಘಾತ, ಮತ್ತು ಮೃತರಿಗಾಗಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಗಾಯಾಳುಗಳನ್ನು ಛೋಟಿ ಸದ್ರಿ ಯಲ್ಲಿನ ಸರಕಾರಿ ಆಸ್ಪತ್ರೆಗೆ ಒಯ್ಯಲಾಯಿತು. ಗಂಭೀರ ಸ್ಥಿತಿಯಲ್ಲಿದ್ದ 15 ಗಾಯಾಳುಗಳನ್ನು ಅಲ್ಲಿ,ದ ಉದಯಪುರ ಆಸ್ಪತ್ರೆಗೆ ರವಾನಿಸಲಾಯಿತು.
ಮೃತರಲ್ಲಿ 9 ಮಂದಿಯನ್ನು ಗುರುತಿಸಲಾಗಿದ್ದು ಅವರ ಹೆಸರು ಇಂತಿವೆ : ದೌಲತ್‌ರಾಮ್ 60, ಭರಥ 30, ಶುಭಂ 5, ಛೋಟು 5, ದಿಲೀಪ್ 11, ಅರ್ಜುನ್ 15, ಇಶು 19, ರಮೇಶ್ 30 ಮತ್ತು ಕರಣ್ 28.