ಮಂಡ್ಯ: ಕಳೆದ ಒಂದು ವಾರದಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದರಿಂದ ತಳಮಟ್ಟಕ್ಕಿಳಿದಿದ್ದ ಕೃಷ್ಣರಾಜ ಸಾಗರ ಜಲಾಶಯಕ್ಕೆ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಜಲಾಶಯವೂ ಭರ್ತಿಯಾಗುವತ್ತ ಸಾಗಿದ್ದು, ಕೇವಲ 13 ಅಡಿ ಬಾಕಿ ಉಳಿದಿದೆ.
ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾದ ಪರಿಣಾಮ ಹಾರಂಗಿ, ಜಲಾಶಯವೂ ಭರ್ತಿಯಾಗಿತ್ತು. ಇದರಿಂದ ಅತಿ ಹೆಚ್ಚಿನ ನೀರು ಹೊರ ಬಿಡಲಾಗಿತ್ತು. ಅಲ್ಲದೆ, ಲಕ್ಷ್ಮಣತೀರ್ಥ ನದಿಯೂ ಉಕ್ಕಿ ಹರಿದ ಪರಿಣಾಮ ಜಲಾಶಯಕ್ಕೆ 50 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬಂದಿದ್ದು, ಪ್ರಸ್ತುತ 111 ಅಡಿಗೇರಿದೆ.
25 ದಿನಕ್ಕೆ 33 ಅಡಿ ನೀರು ಸಂಗ್ರಹ: 124.80 ಅಡಿ ಗರಿಷ್ಠ ಮಟ್ಟದ ಕೆಆರ್ ಎಸ್ ಜಲಾಶಯದಲ್ಲಿ ಜು.3ರಂದು 78.30 ಅಡಿಗೆ ಇಳಿದಿತ್ತು. ಇದರಿಂದ ಜಿಲ್ಲೆಯ ರೈತರಲ್ಲಿ ಆತಂಕ ಎದುರಾಗಿತ್ತು. ಈ ಬಾರಿ ಕೃಷಿಗೆ ಹಾಗೂ ಕುಡಿಯುವ ನೀರಿಗೂ ಆತಂಕ ಎದುರಾಗಿತ್ತು. ಅಲ್ಲದೆ, ತಮಿಳುನಾಡು ಸಹ ತಮ್ಮ ಪಾಲಿನ ನೀರು ಬಿಡುವಂತೆ ವಾದ ಮಂಡಿಸಿತ್ತು. ಇದರಿಂದ ಈ ಬಾರಿ ಕಾವೇರಿ ನದಿ ನೀರಿನ ಹಂಚಿಕೆ ವಿವಾದ ಭುಗಿಲೇಳುವ ಸಾಧ್ಯತೆ ಇತ್ತು. ಆದರೆ, ಜುಲೈ ಕೊನೆ ವಾರದಿಂದ ಪ್ರಾರಂಭವಾದ ಮುಂಗಾರು ಚುರುಕುಗೊಂಡಿತು. ಇದರಿಂದ ಜಲಾಶಯಕ್ಕೆ ಒಳಹರಿವು ಹೆಚ್ಚಿತ್ತು. ದಿನದಿಂದ ದಿನಕ್ಕೆ ಒಳಹರಿವು ಹೆಚ್ಚಿದ ಪರಿಣಾಮ 25 ದಿನಗಳಲ್ಲೇ 33 ಅಡಿ ನೀರು ಹರಿದು ಬಂದಿತ್ತು.
23 ಟಿಎಂಸಿ ನೀರು ಸಂಗ್ರಹ: ಜು.3ರಂದು ಜಲಾಶಯದಲ್ಲಿ ಒಟ್ಟು 10.056 ಟಿಎಂಸಿ ನೀರು ಮಾತ್ರ ಇತ್ತು. ಕುಡಿಯಲು ಕೇವಲ 4 ಟಿಎಂಸಿ ಮಾತ್ರ ಬಳಕೆಗೆ ಯೋಗ್ಯವಾಗಿತ್ತು. ಇದರಿಂದ ತೊಂದರೆಯಾಗುವ ಎಲ್ಲ ಸಾಧ್ಯತೆಗಳು ನಿಚ್ಚಳವಾಗಿತ್ತು. ಆದರೆ, ನಂತರ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದರಿಂದ ಒಳಹರಿವು 1054 ಕ್ಯೂಸೆಕ್‌ಗೆ ಏರುವ ಮೂಲಕ ಇದುವರೆಗೂ 23 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಾಗಿತ್ತು. ಪ್ರಸ್ತುತ ಒಟ್ಟು 32.554 ಟಿಎಂಸಿ ನೀರು ಹರಿದು ಬಂದಿದೆ.
111 ಅಡಿ ತಲುಪಿದ ಕೆಆರ್‌ಎಸ್: 124.80 ಅಡಿ ಗರಿಷ್ಠ ಮಟ್ಟದ ಜಲಾಶಯದಲ್ಲಿ ಪ್ರಸ್ತುತ 111.54 ಅಡಿ ತಲುಪಿದೆ. ಇನ್ನು 13 ಅಡಿ ಬಾಕಿ ಇದೆ. ಆದರೆ, ಒಳಹರಿವು ತಗ್ಗಿದೆ. ಮೊದಲು 50 ಸಾವಿರ ಕ್ಯೂಸೆಕ್ ಬರುತ್ತಿದ್ದ ಒಳಹರಿವು ಇದೀಗ 26 ಸಾವಿರ ಕ್ಯೂಸೆಕ್‌ಗೆ ಇಳಿದಿದೆ. ಅಲ್ಲದೆ, ಕೊಡಗಿನಲ್ಲಿ ಮಳೆ ಕುಸಿತವಾಗಿರುವುದು ಒಳಹರಿವಿನ ಪ್ರಮಾಣ ಕಡಿಮೆಯಾಗಲು ಕಾರಣವಾಗಿದೆ. ಕಳೆದ ಎರಡು ದಿನಗಳಿಂದ ಮಳೆ ಸುರಿದಿಲ್ಲ. ಇದೇ ರೀತಿ ಮುಂದುವರಿದರೆ ಜಲಾಶಯ ತುಂಬುವ ಸಾಧ್ಯತೆ ಕಡಿಮೆ ಇದೆ. ಪ್ರತೀ ಬಾರಿಯೂ 110 ಅಡಿ ಬೇಗ ತುಂಬುವ ಜಲಾಶಯ ಉಳಿದ 14 ಅಡಿ ತುಂಬಲು ವಿಳಂಬವಾಗಲಿದೆ. ಆದರೆ ಮಳೆರಾಯ ಕೃಪೆ ತೋರಿದರೆ ಜಲಾಶಯ ಬೇಗ ಭರ್ತಿಯಾಗಿದೆ.
33.299 ಟಿಎಂಸಿ ನೀರು ಸಂಗ್ರಹ: ಶುಕ್ರವಾರ ರಾತ್ರಿ 8ಕ್ಕೆ ಕೊನೆಗೊಂಡಂತೆ ಜಲಾಶಯದ ನೀರಿನ ಮಟ್ಟ 111.54 ಅಡಿಗೇರಿದೆ. ಒಳಹರಿವು 26135 ಕ್ಯೂಸೆಕ್ ಇದ್ದರೆ, ಹೊರಹರಿವು 3137 ಕ್ಯೂಸೆಕ್ ಇದೆ. ಜಲಾಶಯದಲ್ಲಿ ಒಟ್ಟು 33.299 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 124.56 ಅಡಿ ಇತ್ತು. 10540 ಕ್ಯೂಸೆಕ್ ಒಳಹರಿವಿದ್ದರೆ, 14177 ಕ್ಯೂಸೆಕ್ ಹೊರಹರಿವಿತ್ತು. 49.117 ಟಿಎಂಸಿ ನೀರು ಸಂಗ್ರಹವಾಗಿತ್ತು.