Advertisement

16 ಕಂಪೆನಿಗಳಿಂದ 1,275ಕೋ. ರೂ. ಹೂಡಿಕೆ ಒಡಂಬಡಿಕೆ

11:21 PM Oct 28, 2022 | Team Udayavani |

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡದಲ್ಲಿ ಎಫ್‌ಎಂಸಿಜಿ ಕ್ಲಸ್ಟರ್‌ ಹೂಡಿಕೆದಾರರ ಸಮಾವೇಶದಲ್ಲಿ ಸುಮಾರು 16 ಕಂಪೆನಿಗಳಿಂದ 1,275 ಕೋಟಿ ರೂ.ಗಳ ಹೂಡಿಕೆಗೆ ಒಡಂಬಡಿಕೆ ಮಾಡಿಕೊಳ್ಳಲಾಯಿತು. ಕ್ಲಸ್ಟರ್‌ ಮೂಲಕ ಮೊದಲ ಹಂತದಲ್ಲಿ ಅಂದಾಜು 9,100 ಉದ್ಯೋಗ ಸೃಷ್ಟಿಯಾಗುವುದಾಗಿ ತಿಳಿಸಲಾಗಿದೆ.

Advertisement

ಇಲ್ಲಿನ ಡೆನಿಸನ್ಸ್‌ ಹೊಟೇಲ್‌ನಲ್ಲಿ ಜರಗಿದ ಎಫ್‌ಎಂಸಿಜಿ ಕ್ಲಸ್ಟರ್‌ ಬಂಡವಾಳ ಹೂಡಿಕೆದಾರರ ಸಮಾವೇಶ ಹಾಗೂ ಒಡಂಬಡಿಕೆ ಸಮಾರಂಭದಲ್ಲಿ ರಾಜ್ಯ ಹಾಗೂ ನೆರೆ ರಾಜ್ಯದ ವಿವಿಧ ಉದ್ಯಮಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ವಿವಿಧ ಸಚಿವರ ಸಮ್ಮುಖದಲ್ಲಿ ಒಡಂಡಿಕೆಗೆ ಸಹಿ ಮಾಡಿಕೊಂಡರು.

ದೇಶದ ಆರ್ಥಿಕ ಬೆಳವಣಿಗೆಗೆ ಶಕ್ತಿ
ಎಫ್‌ಎಂಸಿಜಿ ವಲಯ ದೇಶದ ಆರ್ಥಿಕತೆ ಬದಲಾವಣೆಗೆ ಮಹತ್ವದ ಶಕ್ತಿಯಾಗಲಿದೆ. ಇದು ಉದ್ಯೋಗ ಸೃಷ್ಟಿಗೆ ಬಹುದೊಡ್ಡ ಸಹಕಾರಿ ಆಗಲಿದೆ. ಅಂತಹ ವಲಯಕ್ಕೆ ತಾಣವಾಗುವ ಮೂಲಕ ಹುಬ್ಬಳ್ಳಿ-ಧಾರವಾಡ ಪ್ರಮುಖ ಸಾಧನೆಗೆ ಸಾಕ್ಷಿಯಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಇಲ್ಲಿನ ಹೊಟೇಲ್‌ ಡೆನಿಸನ್ಸ್‌ನಲ್ಲಿ ಶುಕ್ರವಾರ ಸಂಜೆ ಜರಗಿದ ಎಫ್‌ಎಂಸಿಜಿ ಹೂಡಿಕೆದಾರರ ಸಮಾವೇಶ ಹಾಗೂ ವಿವಿಧ ಕಂಪೆನಿಗಳಿಗೆ ಒಡಂಡಿಕೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಎಫ್‌ಎಂಸಿಜಿ ಉದ್ಯಮ ಉತ್ಪಾದನ ಹಾಗೂ ಸೇವಾ ವಲಯ ಎರಡರಲ್ಲೂ ತನ್ನದೇ ಆದ ಮಹತ್ವ ಹೊಂದಿದೆ.

ಸಾರಿಗೆ, ಉದ್ಯೋಗ ಸೃಷ್ಟಿ, ಆರ್ಥಿಕತೆ ಬೆಳವಣಿಗೆಗೆ ಸಹಕಾರಿ ಆಗಲಿದೆ. ಎಫ್‌ಎಂಸಿಜಿ ಉದ್ಯಮ ಜತೆಗೆ ಕೃಷಿಗೆ ಬೆಳವಣಿಗೆ ಕೂಡ ಅಗತ್ಯವಾಗಿದೆ. ಕೃಷಿ ಅವಲಂಬಿತರ ಸಂಖ್ಯೆ ಅಧಿಕವಾಗಿದ್ದು, ಉತ್ಪಾದನೆ ಕುಂಠಿತವಾಗುತ್ತಿದೆ. ಕೃಷಿಯಲ್ಲಿ ಶೇ.1ರಷ್ಟು ಬೆಳವಣಿಗೆಯಾದರೆ ಶೇ.4ರಷ್ಟು ಉತ್ಪಾದನ ವಲಯ ಬೆಳವಣಿಗೆಯಾದರೆ, ಶೇ.10 ಸೇವಾವಲಯ ಬೆಳವಣಿಗೆ ಆಗಲಿದೆ ಎಂದರು.

Advertisement

ಡಾ| ಟಿ.ವಿ.ಮೋಹನದಾಸ ಪೈ, ಉಲ್ಲಾಸ ಕಾಮತ್‌ ಮುಂತಾದ ಹಲವಾರು ಪ್ರಮುಖ ಉದ್ಯಮಿಗಳು ಉಪಸ್ಥಿತರಿದ್ದರು.

ವಿಶೇಷ ಕಾರಿಡಾರ್‌:
ಮುಂಬಯಿ- ಬೆಂಗಳೂರು ಕೈಗಾರಿಕಾ ಎಕ್ಸ್‌ಪ್ರೆಸ್‌ ಕಾರಿಡಾರ್‌ ಯೋಜನೆಯಡಿಯಲ್ಲಿ ಚಿತ್ರದುರ್ಗ, ಹಾವೇರಿ, ಧಾರವಾಡ, ಬೆಳಗಾವಿ ಜಿಲ್ಲೆಯಲ್ಲಿ ಪ್ರತಿ ಜಿಲ್ಲೆಯಲ್ಲಿ 1,000 ಎಕ್ರೆ ಜಮೀನನ್ನು ಗುರುತಿಸಲಾಗುತ್ತಿದೆ. ಇದು ಉದ್ಯಮ ದೃಷ್ಟಿಯಿಂದ ಮಹತ್ವದ ಮೈಲುಗಲ್ಲು ಆಗಲಿದೆ. ಬೆಂಗಳೂರು-ಹುಬ್ಬಳ್ಳಿ ನಡುವೆ ರೈಲು ಪ್ರಯಾಣ ಸುಮಾರು ಎರಡೂವರೆ ತಾಸು ಕಡಿತವಾಗುವಂತಾಗಲು ತುಮಕೂರು-ದಾವಣಗೆರೆ ನಡುವೆ ನೇರ ರೈಲು ಮಾರ್ಗಕ್ಕೆ ರೈಲ್ವೆ ಸಚಿವಾಲಯ ಒಪ್ಪಿಗೆ ನೀಡಿದೆ. ವಂದೇ ಭಾರತ ರೈಲು ಸಂಚಾರ ಆರಂಭವಾದರೆ ಬೆಂಗಳೂರಿಗೆ ಮತ್ತಷ್ಟು ವೇಗವಾಗಿ ತಲುಪಬಹುದಾಗಿದೆ. ಹುಬ್ಬಳ್ಳಿ-ಬೆಳಗಾವಿ ನಡುವೆ ನೇರ ರೈಲು ಮಾರ್ಗಕ್ಕೆ 890 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಅನುಮೋದನೆ ದೊರೆಯುವ ಹಂತಕ್ಕೆ ಬಂದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next