Advertisement

ಮುಳಿಹುಲ್ಲಿನ ಕಟ್ಟಡದಲ್ಲಿ ಆರಂಭವಾದ ಶಾಲೆಗೆ 124 ವರ್ಷ

09:51 AM Nov 25, 2019 | mahesh |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1895 ಶಾಲೆ ಆರಂಭ
ಅತ್ಯುತ್ತಮ ಸುಸಜ್ಜಿತ ಸೌಲಭ್ಯಗಳು ಹೊಂದಿರುವ ಶಾಲೆ ಇದಾಗಿದೆ.

ಮೂಡುಬಿದಿರೆ: ಮೂಡುಬಿದಿರೆಯಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ಕಲ್ಲಬೆಟ್ಟು ಗ್ರಾಮದಲ್ಲಿ 1895ರಲ್ಲಿ ಮುಳಿಹುಲ್ಲು ಹೊದೆಸಿಕೊಂಡು ಕಿರಿಯ ಪ್ರಾಥಮಿಕ ಶಾಲೆಯಾಗಿ, ಮುಂದೆ ಹಿರಿಯ ಪ್ರಾಥಮಿಕ, ಅನಂತರ 2007-08ರಲ್ಲಿ ಉನ್ನತೀಕರಿಸಲ್ಪಟ್ಟ ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿದ ಕಲ್ಲಬೆಟ್ಟು ಶಾಲೆಗೆ ಈಗ 124 ವರ್ಷ ತುಂಬಿದೆ.

ಶಾಲೆಯ ಸ್ಥಾಪಕರ ಕುರಿತು ಮಾಹಿತಿಯಿಲ್ಲದಿದ್ದರೂ ಕೂಡ ಎಸ್‌. ಟೆಲ್ಲಿಸ್‌ ಎಂಬುವವರು ತನ್ನ ಜಾಗದ ಒಂದು ಭಾಗವನ್ನು ಶಾಲೆಗೆ ನೀಡಿ ಅವರೇ ಮೊದಲ ಮುಖ್ಯಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. ಅವರು ರಾತ್ರಿ ಹೊತ್ತಲ್ಲಿ ಲಾಟೀನು ಹಿಡಿದುಕೊಂಡು ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಅಲ್ಲಿನ ಮಕ್ಕಳ ಓದು, ಬರೆಹದ ಬಗ್ಗೆ ಗಮನಹರಿಸುತ್ತಿದ್ದನ್ನು ಜನರು ನೆನೆಪಿಸಿಕೊಳ್ಳುತ್ತಾರೆ.

ಸುಸಜ್ಜಿತ ಸೌಲಭ್ಯಗಳು
ಮೂಡುಬಿದಿರೆಯಿಂದ ಗುರುವಾಯನಕೆರೆ -ಬೆಳ್ತಂಗಡಿಯತ್ತ ಸಾಗುವ ರಾಜ್ಯ ಹೆದ್ದಾರಿಯ ಬದಿಯಲ್ಲಿ ಈ ಶಾಲೆಯ ಆರಂಭದ ಕಾಲಕ್ಕೆ ಮಾರೂರು, ನೆತ್ತೋಡಿ, ಉಪೆಲ್‌ ಪಾದೆ, ಕರಿಂಜೆ, ಪಡುಕೊಣಾಜೆ, ಕರಿಂಜೆಗುತ್ತು, ಕೊಡಂಗಲ್ಲು ಹೀಗೆ ಸುತ್ತಮುತ್ತಲಿ ಪ್ರದೇಶದ ವಿದ್ಯಾರ್ಥಿಗಳು ಈ ಶಾಲೆಗೆ ವಿದ್ಯಾಭ್ಯಾಸಕ್ಕೆ ಬರುತ್ತಿದ್ದರು. ಪ್ರಸಕ್ತವಾಗಿ ಈ ವ್ಯಾಪ್ತಿಯಲ್ಲಿ ಎರಡು ಖಾಸಗಿ ಶಾಲೆಗಳನ್ನು ಸೇರಿಸಿ, ಒಟ್ಟು ಎಂಟು ಶಾಲೆಗಳಿವೆ.

Advertisement

ಸುಮಾರು 8-9 ದಶಕಗಳ ಹಿಂದೆ ಪಟೇಲ್‌ ಅನಂತಯ್ಯ ಹೆಗ್ಡೆ ಮತ್ತು ಒಡನಾಡಿಗಳ ಸಹಕಾರದೊಂದಿಗೆ ಹಂಚಿನ ಮಾಡು ಹೊದೆಸಿಕೊಂಡ ಈ ಶಾಲೆಯು ಮುಂದೆ ಸುಮಾರು 50 ಮೀ. ದೂರದಲ್ಲಿ ಹಂತಹಂತವಾಗಿ ಹೊಸ ಕೊಠಡಿಗಳಾಗಿ ಅಭಿವೃದ್ಧಿ ಹೊಂದಿತು.

ಶಾಲೆಗೆ ಸುಮಾರು 1.61 ಎಕ್ರೆಯಷ್ಟು ಜಾಗವಿದೆ. ಅದರೆ ಇನ್ನೂ ಅದನ್ನು ಶಾಲೆಯ ಹೆಸರಿಗೆ ಖಾತೆ ಮಾಡಿಸಿಕೊಳ್ಳಲಾಗಿಲ್ಲ. ಪುಟ್ಟ ಹೂತೋಟ, ತರಕಾರಿ ತೋಟಗಳಿವೆ. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇದೆ. ಎಲ್ಲ ತರಗತಿಗಳಿಗೆ ಟೈಲ್ಸ್‌ ಅಳವಡಿಸಲಾಗಿದೆ. ಶಾಲೆಯ ಹಳೆವಿದ್ಯಾರ್ಥಿ ಕರಿಂಜೆ ರಾಮಚಂದ್ರ ಭಟ್‌ ಅವರ ಸಂಸ್ಮರಣ ರಂಗಮಂದಿರವನ್ನು ಶತಮಾನೋತ್ಸವ ಸಂದರ್ಭ ಅವರ ಪುತ್ರ ಉದ್ಯಮಿ ಕೆ. ಶ್ರೀಪತಿ ಭಟ್‌ ಕೊಡುಗೆಯಾಗಿ ನಿರ್ಮಿಸಿಕೊಟ್ಟಿದ್ದಾರೆ. ಶಾಲೆಗೆ ಸ್ವಂತ ನೀರಿನ ವ್ಯವಸ್ಥೆ , ಕಂಪ್ಯೂಟರ್‌ ಕೊಠಡಿ ನಿರ್ಮಾಣ ಆಗಬೇಕು. ಆವರಣ ಗೋಡೆ ಪೂರ್ಣವಾಗಬೇಕಿದೆ.
ನಲಿ-ಕಲಿ ಹೊರತುಪಡಿಸಿ ಇತರ ತರಗತಿಗಳಿಗೆ ಈಗಿರುವ 7 ಮಂದಿ ಶಿಕ್ಷಕರು (ಮುಖ್ಯಶಿಕ್ಷಕರ ಸಹಿತ) ಸಾಲದು. ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಈ ಶಾÇಯೂ ಗಮನಾರ್ಹವಾದ ಸಾಧನೆ ಮಾಡಿದೆ. ಮೂಡುಬಿದಿರೆ ವಲಯದಲ್ಲಿ ಸದ್ಯ ದಾಖಲಾತಿ ಮಟ್ಟಿಗೆ ಉತ್ತಮ ಸ್ಥಿತಿಯಲ್ಲಿರುವ ಸರಕಾರಿ ಶಾಲೆ ಇದಾಗಿದೆ.

ನೆನಪಾಗಿ ಉಳಿವ ಶಿಕ್ಷಕರು, ಮುಖ್ಯಶಿಕ್ಷಕರು
ಶಿವಣ್ಣ ಶೇರಿಗಾರ, ಶೇಷಗಿರಿ ಭಂಡಾರ್ಕಾರ್‌, ತೋಮರ ಮಾಸ್ಟ್ರೆ, ಇದಿನಬ್ಬ, ದಾಮೋದರ ಭಂಡಾರಿ, ಕೆ. ಪದ್ಮನಾಭ ರೈ, ನಾಗೇಶ್‌ ಮಾಸ್ಟ್ರೆ, ಅಣ್ಣಿ ಮಾಸ್ಟ್ರೆ, ಪ್ರಮೀಳಾ, ಫಿಲೋಮಿನಾ, ಲಿಲ್ಲಿ ಟೀಚರ್‌ ಮೊದಲಾದವರು ಶಿಕ್ಷಕರಾಗಿ ಹೆಸರಾದವರು. ಮುಖ್ಯೋಪಾಧ್ಯಾಯರ ಪೈಕಿ ಪುರೋಹಿತ ವೆಂಕಟ್ರಾಜ ಭಟ್‌, ಹರಿಯಪ್ಪ ಭಟ್‌, ಅರ್ಥಧಾರಿ ಮಾರೂರು ಮಂಜುನಾಥ ಭಂಡಾರಿ, ಲಕ್ಷ್ಮೀ ನಾರಾಯಣ ಭಟ್‌, ಶ್ರೀಪತಿ ರಾವ್‌, ಮೀನಾಕ್ಷಿ, ಪ್ರೇಮಾ, ಗೋವಿಂದ ನಾಯ್ಕ, ಪ್ರತಿಭಾ ಎಂ.ಪಿ. ಮತ್ತೀಗ ವಿನಯಕುಮಾರ್‌ ಎಂ. ಕಳೆದ 2014ರ ಸೆ. 1ರಿಂದ ಪದವೀಧರೇತರ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು ಅವರ ಸಹಿತ 7 ಮಂದಿ ಶಿಕ್ಷಕರಿದ್ದಾರೆ, 188 ಮಂದಿ ವಿದ್ಯಾರ್ಥಿಗಳಿದ್ದಾರೆ.

ಸಾಧಕ ಹಳೆ ವಿದ್ಯಾರ್ಥಿಗಳು
ಕರಿಂಜೆ ಕ್ಷೇತ್ರದ ಮುಕ್ತಾನಂದ ಸ್ವಾಮೀಜಿ, ಗೇರು ಉದ್ಯಮಿ ಕೆ. ಶ್ರೀಪತಿ ಭಟ್‌, ಜೇಕಬ್‌ ಮಿನೇಜಸ್‌, ದಿ| ಐ. ಯೋಗೀಶ ಪ್ರಭು, ಬಿ. ಪದ್ಮಯ್ಯ ಸುವರ್ಣ, ಐ. ರಾಘವೇಂದ್ರ ಪ್ರಭು, ದಿನೇಶ್‌ ಶೆಟ್ಟಿ ಕಲ್ಲಬೆಟ್ಟು , ಬಿಜೆಪಿ ಜಿಲ್ಲಾ ವಕ್ತಾರ ಕೆ. ಕೃಷ್ಣ ರಾಜ ಹೆಗ್ಡೆ, ಕೆಥೋಲಿಕ್‌ ಚರ್ಚ್‌ ಧರ್ಮಗುರುಗಳಾದ ಫೆಡ್ರಿಕ್‌ ಮಿನೇಜಸ್‌, ವಿಲಿಯಂ ಗೋನ್ಸಾಲ್ವಿಸ್‌, ರಿಚಾರ್ಡ್‌ ಪಿಂಟೋ, ಅಶ್ವಿ‌ನ್‌ ಕಡೋìಝಾ , ಆಲ್ವಿನ್‌ ಮಿನೇಜಸ್‌, ಪಿಡಿಒ ಅಬೂಬಕ್ಕರ್‌ ನೀರಳ್ಕೆ , ಕೆ. ದಿನೇಶ್‌ ಆಚಾರ್ಯ ಶಾಲೆಯ ಹೆಮ್ಮೆಯ ಹಳೆವಿದ್ಯಾರ್ಥಿಗಳು.

ಕಲ್ಲಬೆಟ್ಟು ಶಾಲೆಯು ಪೋಷಕರ ಉದಾರ ಸಹಕಾರದಿಂದ ಬೆಳೆದಿದೆ. ಉತ್ತಮ ಗುಣಮಟ್ಟದ ಶಿಕ್ಷಣ ಇಲ್ಲಿ ಲಭಿಸುತ್ತಿರುವ ಕಾರಣ ಈ ಪ್ರದೇಶದಲ್ಲಿ ಉತ್ತಮ ಸಮಾಜ ನಿರ್ಮಾಣವಾಗಿದೆ.
-ವಿನಯಕುಮಾರ್‌ ಎಂ., ಮುಖ್ಯೋಪಾಧ್ಯಾಯರು

ಇಲ್ಲಿ ಕಲಿಸಿದ ಶಿಕ್ಷಕರ ನೆನಪು, ಪಡೆದ ಮೌಲ್ಯಾಧಾರಿತ ಶಿಕ್ಷಣ ನನಗೆ ಅಚ್ಚಳಿಯದ ನೆನಪು. ಜೀವನದಲ್ಲಿ ನನ್ನ ಸಾಧನೆಗೆ ಈ ಶಾಲೆ ಮೂಲ ಪ್ರೇರಣೆ. ಶ್ರೇಷ್ಠ ಬೋಧನ ಪರಂಪರೆಯನ್ನು ಇಂದಿಗೂ ಈ ಶಾಲೆ ಉಳಿಸಿಕೊಂಡು ಬೆಳೆಸಿಕೊಂಡು ಬಂದಿದೆ.
-ಕೆ. ಕೃಷ್ಣರಾಜ ಹೆಗ್ಡೆ, ಹಳೆ ವಿದ್ಯಾರ್ಥಿ.

ಧನಂಜಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next