Advertisement

ಗುತ್ಯಡ್ಕ: ಕೆಸರಿನಿಂದ ಗದ್ದೆಯಂತಾದ 3.5 ಕಿ.ಮೀ. ರಸ್ತೆ

03:58 PM Jun 28, 2023 | Team Udayavani |

ಬೆಳ್ತಂಗಡಿ: ಮಲವಂತಿಗೆ ಗ್ರಾಮದ ಗುತ್ಯಡ್ಕ ಪರಿಸರದ ಸುಮಾರು 3.5 ಕಿ.ಮೀ ರಸ್ತೆಯು ಕೆಸರಿನಿಂದಾಗಿ ಗದ್ದೆ ಯಂತಾಗಿದ್ದು, ಹರಸಾಹಸಪಟ್ಟು ಸಂಚರಿ ಸಬೇಕಾದ ದುಃಸ್ಥಿತಿ ಇಲ್ಲಿನ ಜನರದ್ದು.

Advertisement

ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಗುತ್ಯಡ್ಕ ರಾಷ್ಟ್ರೀಯ ಉದ್ಯಾನವನಕ್ಕೆ ಒಳಪಡದಿದ್ದರೂ ಈ ಊರಿಗೆ ಸಂಸೆ ಗಡಿಯಿಂದ 5 ಕಿ.ಮೀ. ತೆರಳಬೇಕಾದರೆ ಪಿಕಪ್‌, ಜೀಪು ಬಿಟ್ಟರೆ ಬೇರಾವ ವಾಹನ ಸಂಚರಿಸಲು ಸಾಧ್ಯವಿಲ್ಲ. ಎಳನೀರು ಗಡಿಭಾಗದಿಂದ ಕುರ್ಚಾರು ಕೊರೆಕಲ್‌ ರಸ್ತೆ 3.5 ಕಿ.ಮೀ. ದೂರವಿದೆ. ಈಗಾಗಲೇ ಶಾಸಕ ಹರೀಶ್‌ ಪೂಂಜ ನಿಧಿಯಿಂದ 100 ಮೀಟರ್‌, ನಕ್ಸಲ್‌ ಫಂಡ್‌ನಿಂದ 100 ಮೀಟರ್‌ ಕಾಂಕ್ರೀಟ್‌ ರಸ್ತೆ ಬಿಟ್ಟರೆ ಉಳಿದ ರಸ್ತೆಗಳಲ್ಲಿ ಸಾಗಲು ವಾಹನ ಬಿಡಿ ನಡೆದಾಡಲು ಸಾಧ್ಯವಾಗದ ಹೀನಾಯ ಸ್ಥಿತಿ ಇದೀಗ ನಿರ್ಮಾಣವಾಗಿದೆ.

ಗುತ್ಯಡ್ಕಕ್ಕೆ ಬೆಳ್ತಂಗಡಿಯಿಂದ ದಿಡುಪೆ-ಎಳನೀರು- ಸಂಸೆ ರಸ್ತೆ ಬಳಸಿದರೆ 30 ಕಿ.ಮೀ. ದೂರ. ಆದರೆ ರಾ.ಉ. ಅರಣ್ಯದೊಳಗೆ ಅಭಿವೃದ್ಧಿಗೆ ಆಸ್ಪದವಿಲ್ಲ. ಹಾಗಾಗಿ ಚಾರ್ಮಾಡಿ – ಕೊಟ್ಟಿಗೆಹಾರ -ಸಂಸೆ ಅಥವಾ ಕಾರ್ಕಳ- ಎಸ್‌.ಕೆ. ಬಾರ್ಡರ್‌ -ಕಳಸ -ಸಂಸೆಯಾಗಿ 120 ಕಿ.ಮೀ. ಸುತ್ತಿ ಬಳಸಿ ಗುತ್ಯಡ್ಕ, ಎಳನೀರು, ಬಡಮನೆ, ಬಂಗಾರ ಪಲ್ಕೆ ನಿವಾಸಿಗಳು ತಾಲೂಕು ಕೇಂದ್ರಕ್ಕೆ ಬರಬೇಕಾಗಿದೆ.

ದಿನನಿತ್ಯದ ಅಗತ್ಯತೆಗಳಿಗೆ ಇವರು ಚಿಕ್ಕಮಗಳೂರು ವ್ಯಾಪ್ತಿಯ ಸಂಸೆ, ಕಳಸವನ್ನೇ ಅವಲಂಬಿಸಿದ್ದಾರೆ. ಗುತ್ಯಡ್ಕ ಒಂದೇ ಭಾಗದಲ್ಲಿ 35 ಕುಟುಂಬಗಳಿದ್ದು 180ಕ್ಕೂ ಅಧಿಕ ಜನಸಂಖ್ಯೆಯಿದೆ. ಈವರೆಗೆ 8 ಮಂದಿ ಜಿಲ್ಲಾಧಿಕಾರಿಗಳು ಇಲ್ಲಿಗೆ ಭೇಟಿ ನೀಡಿದ್ದಾರೆ. ಆದರೆ ಕೇವಲ 3.5 ಕಿ.ಮೀ. ಕಾಂಕ್ರೀಟ್‌ ರಸ್ತೆ ನಿರ್ಮಿಸಲು ಎಷ್ಟೇ ಸರಕಾರ ಬಂದುರುಳಿದರೂ ಸಾಧ್ಯವಾಗಿಲ್ಲ.

ಪಶ್ಚಿಮಘಟ್ಟ ಶ್ರೇಣಿಯಲ್ಲಿ ಹುಟ್ಟುವ ನೇತ್ರಾವತಿ ಉಗಮಸ್ಥಾನವು ಇಲ್ಲೇ ಬರುತ್ತದೆ. ಕುರ್ಚಾರು ಮುಂದಕ್ಕೆ ಸಾಗಿದರೆ ರಾಷ್ಟ್ರೀಯ ಉದ್ಯಾನವನದೊಳು ಸುಮಾರು 6 ಕಿ.ಮೀ. ಗುಡ್ಡಗಾಡು ಹತ್ತಿ ಸಾಗಿದರೆ ನೇತ್ರಾವತಿ ಪೀಕ್‌ ಪಾಯಿಂಟ್‌ ಸಿಗುತ್ತದೆ. ಇದೊಂದು ಚಾರಣಿಗರ ಸ್ವರ್ಗವಾಗಿದ್ದು ಪ್ರತಿನಿತ್ಯ 200ಕ್ಕೂ ಅಧಿಕ ಮಂದಿ ಭೇಟಿ ನೀಡಿದರೆ ವಾರಾಂತ್ಯದಲ್ಲಿ ಸಾವಿರ ಮಂದಿಯಷ್ಟು ಸೇರುತ್ತಾರೆ. ಇಲ್ಲಿಗೆ ತೆರಳಲು ಅರಣ್ಯ ಇಲಾಖೆ ಪ್ರತಿಯೊಬ್ಬರಿಗೆ 500 ರೂ. ಟಿಕೆಟ್‌ ನಿಗದಿ ಪಡಿಸಿದೆ. ಆದರೆ ಪ್ರವಾಸಿಗರಿಗೆ ಬರಲು ಸೂಕ್ತ ರಸ್ತೆ ಸೌಕರ್ಯವೇ ಇಲ್ಲ.

Advertisement

ಇಡಿಸಿ ಸಮಿತಿ ರಚಿಸಲು ಮನವಿ ನೀಡಲಿ
ಗ್ರಾಮದ ಅಭಿವೃದ್ಧಿಗೆ ಇಡಿಸಿ (ಎಕೋ ಡೆವಲಪ್‌ಮೆಂಟ್‌ ಕಮಿಟಿ) ಪರಿಸರ ಅಭಿವೃದ್ಧಿ ಸಮಿತಿ ರಚಿಸಿದರೆ ಅರಣ್ಯ ಇಲಾಖೆಯಿಂದ ಚಾರಣಿಗರಿಂದ ಸಂಗ್ರಹಿಸಿದ ಶೇ. 50 ಮೊತ್ತ ಕಮಿಟಿಗೆ ಸೇರುತ್ತದೆ. ಉಳಿದಂತೆ ಸರಕಾರವು ಅನುದಾನ ಒದಗಿಸಿದಾಗ ಗ್ರಾಮದ ಅಗತ್ಯ ಅಭಿವೃದ್ಧಿಗೆ ಕಾರ್ಯ ಕೈಗೊಳ್ಳ ಬಹುದು. ಈಗಾಗಲೇ ಸಭೆ ಕರೆದು ಮನವಿ ನೀಡುವಂತೆ ಗ್ರಾಮಸ್ಥರಿಗೆ ಸೂಚಿಸಲಾಗಿದೆ.
-ಸ್ವಾತಿ, ವಲಯ ಅರಣ್ಯಾಧಿಕಾರಿ, ಕುದುರೆಮುಖ ಅರಣ್ಯ ವಿಭಾಗ

ಅಭಿವೃದ್ಧಿಗೆ ಆದ್ಯತೆ
ಮೊದಲ ಹಂತದಲ್ಲಿ ಎಳನೀರು ಭಾಗದ ರಸ್ತೆ ಹಾಗೂ ಕಿಂಡಿ ಅಣೆಕಟ್ಟಿಗೆ ಆದ್ಯತೆ ನೀಡಿ 5 ಕೋ.ರೂ. ಅನುದಾನ ಒದಗಿಸಿ ಅಭಿವೃದ್ಧಿಪಡಿಸಲಾಗಿದೆ. ಮುಂದೆ ಸರಕಾರ ಅನುದಾನ ಒದಗಿಸಿದರೆ ಗುತ್ಯಡ್ಕ ಭಾಗದ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು.
-ಹರೀಶ್‌ ಪೂಂಜ, ಶಾಸಕ

ಜನಪರ
– ಅಸಮರ್ಪಕ ರಸ್ತೆಯಿಂದ ಆರೋಗ್ಯ ಹದಗೆಟ್ಟರೆ ಸಮಸ್ಯೆ
– ತುರ್ತು ಸೇವೆಗೆ ಆಸ್ಪತ್ರೆ ಸೌಲಭ್ಯವಿಲ್ಲ
– ಚಿಕಿತ್ಸೆಗಾಗಿ ಮಣಿಪಾಲ, ಮಂಗಳೂರಿಗೆ ಬರಬೇಕು
– ಕುರ್ಚಾರು ಸಮೀಪ ಕುಸಿದ ರಸ್ತೆ ದುರಸ್ತಿಗೆ ಬೇಡಿಕೆ
– ಚಿಕ್ಕಮಗಳೂರಿಗೆ ಬಿಟ್ಟುಕೊಡಲು ಆಗ್ರಹ

-ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next