Advertisement

ತುಂಬೆ ವೆಂಟೆಡ್‌ ಡ್ಯಾಂ: 120 ಕೋ. ರೂ. ಪರಿಹಾರಕ್ಕೆ ಪ್ರಸ್ತಾವನೆ

11:10 AM Jun 01, 2017 | Team Udayavani |

ಮಂಗಳೂರು: ಮಂಗಳೂರಿಗೆ ನೀರು ಒದಗಿಸುವ ತುಂಬೆ ವೆಂಟೆಡ್‌ ಡ್ಯಾಂನಲ್ಲಿ 8 ಮೀಟರ್‌ ನೀರು ಸಂಗ್ರಹಿಸುವುದರಿಂದ ಮುಳುಗಡೆಗೊಳ್ಳುವ ಜಮೀನಿನ ಮಾಲಕರಿಗೆ ಪರಿಹಾರ ಒದಗಿಸಲು 120 ಕೋ.ರೂ. ಅನುದಾನವನ್ನು ವಿಶ್ವೇಶ್ವರಯ್ಯ ನೀರಾವರಿ ನಿಗಮದ ವತಿಯಿಂದ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲು ಮಂಗಳೂರು ಪಾಲಿಕೆಯಲ್ಲಿ ನಿರ್ಧರಿಸಲಾಗಿದೆ. 

Advertisement

ಮೇಯರ್‌ ಕವಿತಾ ಸನಿಲ್‌ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಮಂಗಳೂರು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕಾರ್ಯಸೂಚಿ ಮಂಡಿಸಿದ ಮುಖ್ಯ ಸಚೇತಕ ಎಂ. ಶಶಿಧರ ಹೆಗ್ಡೆ, 8 ಮೀಟರ್‌ ಎತ್ತರಕ್ಕೆ ನೀರು ಸಂಗ್ರಹಿಸಿದರೆ ಮುಳುಗಡೆಯಾಗುವ ಜಮೀನಿಗೆ ಪರಿಹಾರ ನೀಡಬೇಕಿದೆ. ಈ ಬಗ್ಗೆ ಮೇಯರ್‌ ಕವಿತಾ ಸನಿಲ್‌ ಹಾಗೂ ಸಚಿವ ರಮಾನಾಥ ರೈ ವಿಶೇಷ ಮುತುವರ್ಜಿ ವಹಿಸಿ 120 ಕೋ. ರೂ. ಪರಿಹಾರ ಒದಗಿಸುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ. ಇದರಂತೆ ಅನುದಾನ ಬಿಡುಗಡೆಗೆ ಕೋರುವ ಬಗ್ಗೆ ಪಾಲಿಕೆ ಸಭೆಯಲ್ಲಿ ಪ್ರಸ್ತಾವನೆಗೆ ಅನುಮೋದನೆ ನೀಡಲಾಯಿತು ಎಂದರು. 

ಮೇಯರ್‌ ಮಾತನಾಡಿ, 8 ಮೀಟರ್‌ ನೀರು ನಿಲ್ಲಿಸಿದರೆ ಮಂಗಳೂರಿನ ಕುಡಿಯುವ ನೀರಿಗೆ ಸಂಬಂಧಿಸಿದ ಬಹುದೊಡ್ಡ ಸಮಸ್ಯೆ ಶಾಶ್ವತವಾಗಿ ಪರಿಹಾರವಾದಂತಾಗುತ್ತದೆ. ಮುಳುಗಡೆಯಾಗುವ ಸುಮಾರು 500 ಎಕರೆ ಪ್ರದೇಶದವರಿಗೆ ಸೂಕ್ತ ಪರಿಹಾರ ದೊರಕಿದರೆ ಎಲ್ಲವೂ ಸುಸೂತ್ರವಾಗಲಿದೆ ಎಂದರು. 

ಉಚಿತ ಉಪಾಹಾರ
ಸರಕಾರದ ಸೂಚನೆ ಪ್ರಕಾರ ಮಂಗಳೂರು ಪಾಲಿಕೆಯ 219 ಖಾಯಂ ಪೌರ ಕಾರ್ಮಿಕರಿಗೆ ಹಾಗೂ 42 ಬದಲಿ ಪೌರ ಕಾರ್ಮಿಕರಿಗೆ ದಿನನಿತ್ಯ 20 ರೂ. ದರದ ಬೆಳಗಿನ ಉಪಾಹಾರ ನೀಡಲು ಪಾಲಿಕೆ ನಿರ್ಧರಿಸಿದೆ.

ಫಲ್ಗುಣಿ ಕಲುಷಿತ; ಸದನ ಸಮಿತಿ ರಚನೆ
ಮರವೂರು ಸಮೀಪದ ಕೈಗಾರಿಕೆಗಳ ತ್ಯಾಜ್ಯ ಹಾಗೂ ರಾಸಾಯನಿಕದಿಂದ ಫಲ್ಗುಣಿ ನದಿ ಕಲುಷಿತಗೊಂಡಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಪೂರ್ಣ ಪರಿಶೀಲಿಸಲು ಪಾಲಿಕೆಯ ಸದನ ಸಮಿತಿ ರಚಿಸಲು ನಿರ್ಧರಿಸಲಾಯಿತು. ಸದನ ಸಮಿತಿ ವರದಿ ಪರಿಶೀಲಿಸಿ ಈ ಕ್ರಮ ಕೈಗೊಳ್ಳುವುದಾಗಿ ಮೇಯರ್‌ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next