Advertisement

ಕ್ಯಾಂಟೀನ್‌ನಲ್ಲಿ 120 ಕೋಟಿ ಅವ್ಯವಹಾರ

12:16 PM Jul 27, 2018 | Team Udayavani |

ಬೆಂಗಳೂರು: ನಗರದ ಬಡವರಿಗೆ ರಿಯಾಯಿತಿ ದರದಲ್ಲಿ ಆಹಾರ ಒದಗಿಸಲು ಆರಂಭಿಸಿರುವ ಇಂದಿರಾ ಕ್ಯಾಂಟೀನ್‌ ಯೋಜನೆಯಲ್ಲಿ ಕಳೆದ 10 ತಿಂಗಳಲ್ಲಿ 120 ಕೋಟಿ ರೂ. ಅವ್ಯವಹಾರ ನಡೆದಿದೆ. ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಒತ್ತಾಯಿಸಿದ್ದಾರೆ. 

Advertisement

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಕಳೆದ 10 ತಿಂಗಳಲ್ಲಿ ಕ್ಯಾಂಟೀನ್‌ಗಳಲ್ಲಿ ಊಟ ಮಾಡಿದವರ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ. ಪ್ರತಿ ದಿನ ಊಟ ಮಾಡಿದವರ ಲೆಕ್ಕ ಒಂದೇ ಮಾದರಿಯಲ್ಲಿದ್ದು, ನಿತ್ಯ 1,95,575 ಮಂದಿ ಊಟ ಮಾಡುತ್ತಿದ್ದಾರೆ ಎಂಬ ಅಂಕಿ-ಅಂಶಗಳು ಅನುಮಾನಕ್ಕೆ ಕಾರಣವಾಗಿವೆ ಎಂದರು.

ಇಂದಿರಾ ಕ್ಯಾಂಟೀನ್‌ಗಳಿಗೆ ಒಂದು ದಿನಕ್ಕೆ 85 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಆ ಪೈಕಿ 40 ಲಕ್ಷ ರೂ. ಅವ್ಯವಹಾರ ನಡೆಯುತ್ತಿದೆ. ಅದರಂತೆ ತಿಂಗಳಿಗೆ 12 ಕೋಟಿ ರೂ.ಗಳಂತೆ 10 ತಿಂಗಳಿಗೆ 120 ಕೋಟಿ ರೂ. ಅವ್ಯವಹಾರ ನಡೆದಿರುವ ಶಂಕೆಯಿದೆ. ಇದರೊಂದಿಗೆ ಗುತ್ತಿಗೆದಾರರಿಗೆ 40 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದು, ಕ್ಯಾಂಟೀನ್‌ಗಳ ನಿರ್ವಹಣೆಗೆ ಸರ್ಕಾರದಿಂದ ಅನುದಾನ ಲಭ್ಯವಾಗದ ಹಿನ್ನೆಲೆಯಲ್ಲಿ ಪಾಲಿಕೆಯ ಬೊಕ್ಕಸದಿಂದಲೇ ಅದನ್ನು ಭರಿಸಬೇಕಿದೆ ಎಂದು ಟೀಕಿಸಿದರು. 

ಜನವರಿ 25ರಂದು ಸರ್ಕಾರದ ಪರೋಕ್ಷ ಬೆಂಬಲದಿಂದ ನಡೆದ ಕರ್ನಾಟಕ ಬಂದ್‌ ದಿನ ನಗರದ ಇಂದಿರಾ ಕ್ಯಾಂಟೀನ್‌ಗಳ ಬಾಗಿಲು ತೆಗೆದಿರಲಿಲ್ಲ. ಆದರೂ, ಆ ದಿನ 1,97,575 ಜನ ಊಟ ಮಾಡಿದ್ದಾರೆ ಎಂದು 63,22,400 ರೂ. ಬಿಲ್‌ ಮಾಡಲಾಗಿದೆ. ಇದರಿಂದ ಬಡವರ ಊಟದ ಯೋಜನೆಯಲ್ಲೂ ಹಣ ಹೊಡೆಯುತ್ತಿರುವುದು ಬಯಲಾಗಿದೆ. ಉಪಮುಖ್ಯಮಂತ್ರಿಗಳು ಹಾಗೂ ಮೇಯರ್‌ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.

ಆರೋಪಗಳು ನಿರಾಧಾರ- ಎಂ.ಶಿವರಾಜು: ಇಂದಿರಾ ಕ್ಯಾಂಟೀನ್‌ಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ  ಅವರ ಆರೋಪಗಳು ನಿರಾಧಾರವಾಗಿದ್ದು, ಸುಳ್ಳು ದಾಖಲೆಗಳನ್ನಿಟ್ಟುಕೊಂಡು ಆರೋಪ ಮಾಡಿದ್ದಾರೆ ಎಂದು ಆಡಳಿತ ಪಕ್ಷ ನಾಯಕ ಎಂ.ಶಿವರಾಜು ತಿರುಗೇಟು ನೀಡಿದ್ದಾರೆ. 

Advertisement

ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಜನವರಿ 25ರಂದು ಸರ್ಕಾರಿ ಅಥವಾ ಸಾರ್ವತ್ರಿಕ ರಜೆಯಾಗಿರಲಿಲ್ಲ. ಹೀಗಾಗಿ ಆಹಾರ ಪೂರೈಸಬೇಡಿ ಎಂದು ಗುತ್ತಿಗೆದಾರರಿಗೆ ಮೊದಲೇ ನಿರ್ದೇಶನ ನೀಡಿರಲಿಲ್ಲ. ಆದ್ದರಿಂದ ಗುತ್ತಿಗೆದಾರರು ಎಂದಿನಂತೆ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆ ಮಾಡಿದ್ದಾರೆ.

ಕಾರಣ, ಅವರಿಗೆ ಬಿಲ್‌ ಪಾವತಿಸಲಾಗಿದೆ. ಮೇ 12ರಂದು ಚುನಾವಣೆ ಇದ್ದ ಕಾರಣ ಆಹಾರ ಪೂರೈಸದಂತೆ ಮೊದಲೇ ನಿರ್ದೇಶನ ನೀಡಿದ್ದರಿಂದ ಬಿಲ್‌ ಪಾವತಿಸಿಲ್ಲ ಎಂದು ಸ್ಪಷ್ಟನೆ ನೀಡಿದರು. ಜನವರಿ ತಿಂಗಳಲ್ಲಿ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸಿರುವ ಗುತ್ತಿಗೆದಾರಾದ ಚೆಫ್ಟಾಕ್‌ ಸಂಸ್ಥೆಯವರು 3,70,75,012 ರೂ. ಮೊತ್ತದ ಬಿಲ್‌ ಹಾಗೂ ರಿವಾಡ್ಸ್‌ ಸಂಸ್ಥೆ 2,95,81,376 ರೂ. ಬಿಲ್‌ ಪಾವತಿಸುವಂತೆ ಮನವಿ ನೀಡಿದ್ದಾರೆ.

ಅದರಂತೆ ಜನವರಿ ತಿಂಗಳ 31 ದಿನಗಳಿಗೆ ಒಟ್ಟು 6,66,56,388 ರೂ.ಗಳು ವೆಚ್ಚವಾಗಿದ್ದು, ಒಂದು ದಿನಕ್ಕೆ ವೆಚ್ಚ ಮಾಡಿದ ಮೊತ್ತ 21,50,206 ರೂ. ಮಾತ್ರ. ಆದರೆ, ಪದ್ಮನಾಭ ರೆಡ್ಡಿ ಅವರು ಪ್ರಚಾರಕ್ಕಾಗಿ ಒಂದು ದಿನಕ್ಕೆ 63,22,400 ರೂ. ವೆಚ್ಚ ಮಾಡಲಾಗಿದೆ ಎಂದು ಸುಳ್ಳು ಹೇಳಿಕೆ ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next