Advertisement

ರೇಷನ್‌ ಕಾರ್ಡ್‌ಗಾಗಿ ಕಾಯುತ್ತಿದ್ದಾರೆ ಕರಾವಳಿಯ 12 ಸಾವಿರ ಮಂದಿ!

12:40 AM Nov 03, 2022 | Team Udayavani |

ಮಂಗಳೂರು: ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ತಿಂಗಳು ಕೆಲವಾದರೂ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸುಮಾರು 12 ಸಾವಿರಕ್ಕೂ ಹೆಚ್ಚು ಮಂದಿಗೆ ಹೊಸ ರೇಷನ್‌ ಕಾರ್ಡ್‌ ಲಭ್ಯವಾಗಿಲ್ಲ!

Advertisement

ದ.ಕ.ದಲ್ಲಿ ಅರ್ಜಿ ಸಲ್ಲಿಸಿ ದವರ ಪೈಕಿ 5,978 ಮಂದಿ ಹಾಗೂ ಉಡುಪಿ ಯಲ್ಲಿ 6,612 ಮಂದಿ ಸಹಿತ ಒಟ್ಟು 12,590 ಮಂದಿ ರೇಷನ್‌ ಕಾರ್ಡ್‌ಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆಲವರ ಅರ್ಜಿಗಳನ್ನು ಕಳೆದ ಡಿಸೆಂಬರ್‌ನಲ್ಲಿ ಸರಕಾರ ಅಂಗೀಕರಿಸಿ ಬಳಿಕ ಒಂದೆರಡು ತಿಂಗಳಲ್ಲಿ ಅವರಿಗೆ ಕಾರ್ಡ್‌ ವಿತರಿಸುವ ಕಾರ್ಯವನ್ನು ಆಹಾರ ಇಲಾಖೆ ನಡೆಸಿದೆ.

ಆ ಬಳಿಕ ಹೊಸ ಕಾರ್ಡ್‌ಗಾಗಿ ಅರ್ಜಿ ಪಡೆಯಲಾಗುತ್ತಿದೆಯೇ ಹೊರತು ಸರಬರಾಜು ಮಾತ್ರ ಆಗಿಲ್ಲ. ಯಾವಾಗ ಎಂಬುದಕ್ಕೆ ಉತ್ತರವೂ ಇಲ್ಲ!

ಆಸ್ಪತ್ರೆಯಿಂದ ಸರಕಾರಿ ಸೌಲಭ್ಯ ಪಡೆಯಲು, ಆಧಾರ್‌/ಆರೋಗ್ಯ ಭಾರತ್‌ ಕಾರ್ಡ್‌ ಮಾಡಿಸಲು, ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಪಡೆಯಲು ಪಡಿತರ ಚೀಟಿ ಮುಖ್ಯ. ಆದರೆ ಸಕಾಲದಲ್ಲಿ ಸಿಗದ ಕಾರಣ ಹಲವು ಸರಕಾರಿ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಅಕ್ರಮ ಬಿಪಿಎಲ್‌ ಪತ್ತೆ ಹಚ್ಚಲು ಆಹಾರ ಇಲಾಖೆ ಮುಂದಾಗಿರುವ ಕಾರಣ ಹೊಸ ಕಾರ್ಡ್‌ ನೀಡುವಲ್ಲಿ ವಿಳಂಬ ಮಾಡಲಾಗುತ್ತಿದೆ ಎಂಬ ಮಾಹಿತಿಯಿದೆ.

Advertisement

ಈ ಮಧ್ಯೆ ತುರ್ತು ಆರೋಗ್ಯ ಸಮಸ್ಯೆ ಇರುವವರಿಗೆ ತುರ್ತಾಗಿ ಕಾರ್ಡ್‌ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಉಳಿದಂತೆ ಅರ್ಜಿ ಹಾಕಿ ದವರು ಕಾರ್ಡ್‌ಗಾಗಿ ಕಾಯುತ್ತಲೇ ಇದ್ದಾರೆ!

ಸರ್ವರ್‌ ಕಾಟ!
ಆಹಾರ ಇಲಾಖೆಯ ವೆಬ್‌ಸೈಟ್‌ಗೆ “ಸರ್ವರ್‌’ ಸಮಸ್ಯೆ ಇನ್ನೂ ಪರಿಹಾರ ಕಾಣುವ ಹಂತಕ್ಕೆ ಬಂದಿಲ್ಲ. ಇದು ರಾಜ್ಯ ಮಟ್ಟದ ಸಮಸ್ಯೆಯಾದರೂ ವಿವಿಧ ಜಿಲ್ಲೆಯ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಆಹಾರ ಇಲಾಖೆಯ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬೇಕು ಎಂಬ ಸೂಚನೆಯಿದ್ದರೂ ಕೆಲವೊಮ್ಮೆ ಈ ವೆಬ್‌ಸೈಟ್‌ ಹಠಾತ್‌ ಸ್ಥಗಿತಗೊಳ್ಳುತ್ತದೆ. ಇದರಿಂದ ಹೊಸ ಪಡಿತರ ಚೀಟಿಗೆ ಅರ್ಜಿ ಹಾಕಲು, ತಿದ್ದುಪಡಿ ಮಾಡಲು, ಅಳಿಸಿ ಹಾಕಲು ಜನಸಾಮಾನ್ಯರಿಗೆ ಕಷ್ಟವಾಗುತ್ತಿದೆ ಎಂಬ ದೂರು ಕೇಳಿಬಂದಿದೆ.

ಎಲ್ಲೆಲ್ಲಿ ಬಾಕಿ?
ಬೆಳ್ತಂಗಡಿ 940
ಬಂಟ್ವಾಳ 1,333
ಮಂಗಳೂರು 2,763
ಪುತ್ತೂರು 763
ಸುಳ್ಯ 179
ಒಟ್ಟು 5,978
ಕಾರ್ಕಳ 1,028
ಕುಂದಾಪುರ 1,073
ಉಡುಪಿ 1,411
ಕಾಪು 789
ಬ್ರಹ್ಮಾವರ 1,001
ಬೈಂದೂರು 1,041
ಹೆಬ್ರಿ 269
ಒಟ್ಟು 6,612

ಹೊಸ ಅರ್ಜಿಗೆ ಅವಕಾಶ
ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಹಾಕಲು ಅವಕಾಶವಿದೆ. ತುರ್ತು ಆರೋಗ್ಯ ಸೇವೆಗೆ ಅಗತ್ಯವಿದ್ದರೆ ಕೇಂದ್ರ ಕಚೇರಿಯ ಅನುಮತಿ ಪಡೆದು ಕಾರ್ಡ್‌ ಸರಬರಾಜು ಮಾಡಲು ಕ್ರಮ ಕೈಗೊಳ್ಳ ಲಾಗು ತ್ತಿದೆ. ಉಳಿದಂತೆ ಬಾಕಿ ಇರುವ ಅರ್ಜಿ ಗಳ ಪರಿಶೀಲನೆ ನಡೆಯುತ್ತಿದೆ. ಸರಕಾರದ ಅನುಮತಿ ದೊರೆತ ಬಳಿಕ ಕಾರ್ಡ್‌ ವಿತರಿಸಲಾಗುವುದು.
– ಮಾಣಿಕ್ಯ ಹಾಗೂ ಮೊಹಮ್ಮದ್‌ ಇಸಾಕ್‌
ಉಪ ನಿರ್ದೇಶಕರು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ದ.ಕ. ಹಾಗೂ ಉಡುಪಿ


-ದಿನೇಶ್‌ ಇರಾ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next