Advertisement

ಶ್ರವಣಬೆಳಗೊಳದಲ್ಲಿ ಭಕ್ತರ ವಸತಿಗೆ 12 ಉಪನಗರ ನಿರ್ಮಾಣ

08:35 AM Aug 22, 2017 | Harsha Rao |

ಬೆಂಗಳೂರು: ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ವಿಶ್ವ ವಿಖ್ಯಾತ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ 489 ಎಕರೆ ಪ್ರದೇಶದಲ್ಲಿ ತಾತ್ಕಾಲಿಕವಾಗಿ 12 ಉಪನಗರಗಳನ್ನು ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ವಿಧಾನಸೌಧದಲ್ಲಿ ಸೋಮವಾರ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಮಹಾಮಸ್ತಕಾಭಿಷೇಕ ಪೂರ್ವಭಾವಿ ಸಭೆಯಲ್ಲಿ, 2018ರ ಫೆಬ್ರವರಿ 7 ರಿಂದ 26 ರವರೆಗೆ ನಡೆಯಲಿರುವ ಕಾರ್ಯಕ್ರಮಕ್ಕೆ 35 ರಿಂದ 40 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆ ಇರುವುದರಿಂದ ವಸತಿ ಹಾಗೂ ಇತರೆ ಸೌಕರ್ಯ ಒದಗಿಸಲು 12 ಉಪನಗರಗಳನ್ನು ನಿರ್ಮಿಸಲು ನಿರ್ಧರಿಸಲಾಯಿತು.

Advertisement

ಸಭೆ ನಂತರ ಸುದ್ದಿಗಾರರ ಜತೆ ಮಾತನಾಡಿದ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು, ಉಪನಗರಗಳ
ನಿರ್ಮಾಣಕ್ಕೆ 75 ಕೋಟಿ ರೂ. ಮೀಸಲಿಡಲಾಗಿದೆ. 12 ಉಪನಗರಗಳ ನಿರ್ಮಾಣಕ್ಕೆ ಶ್ರವಣಬೆಳಗೊಳ ಸುತ್ತ
ರೈತರಿಂದ ಜಮೀನು ಪಡೆದು ಅವರಿಗೆ ಪರಿಹಾರ ನೀಡಲಾಗುವುದು ಎಂದು ಹೇಳಿದರು.

57 ಅಡಿ ಎತ್ತರವಿರುವ ಗೊಮ್ಮಟೇಶ್ವರ ಮೂರ್ತಿಗೆ ಅಭಿಷೇಕ ಮಾಡಲು 12 ಕೋಟಿ ರೂ. ವೆಚ್ಚದಲ್ಲಿ ಅಟ್ಟಣಿಗೆ ನಿರ್ಮಾಣ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಜರ್ಮನ್‌ ತಂತ್ರಜ್ಞಾನದಡಿ ಅಟ್ಟಣಿಗೆಯನ್ನು ಲೋಕೋಪಯೋಗಿ ಇಲಾಖೆಯೇ ನಿರ್ಮಾಣ ಮಾಡಲಿದೆ ಎಂದು ತಿಳಿಸಿದರು. ಮಹಾಮಸ್ತಕಾಭಿಷೇಕ ಅಂಗವಾಗಿ ಅಲ್ಲಿರುವ ಕಲ್ಯಾಣಿ ಶುದಿಟಛೀಕರಣ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಶ್ರವಣಬೆಳಗೊಳ ಸುತ್ತಮುತ್ತಲಿನ ರಸ್ತೆ ದುರಸ್ತಿ
ಸೇರಿ ಇತರೆ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಮಹಾಮಸ್ತಕಾಭಿಷೇಕ ಯಶಸ್ವಿಗೆ ಉಪ ಸಮಿತಿ ರಚಿಸಲಾಗಿದೆ ಎಂದು ಹೇಳಿದರು.

ನೆರವು ನೀಡಲು ಕೇಂದ್ರ ನಿರಾಕರಣೆ: 12 ವರ್ಷಕ್ಕೆ ಒಮ್ಮೆ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ವಿಶ್ವದೆಲ್ಲೆಡೆ ಇರುವ ಜೈನ ಸಮಾಜದವರು ಆಗಮಿಸುತ್ತಾರೆ 2006ರಲ್ಲಿ ಮಹಾಮಸ್ತಕಾಭಿಷೇಕ ನಡೆದಾಗ ಕೇಂದ್ರ ಸರ್ಕಾರ 90 ಕೋಟಿ ರೂ. ಅನುದಾನ ನೀಡಿತ್ತು. ಆದರೆ ಈಗಿನ ಕೇಂದ್ರ ಸರ್ಕಾರ ನೆರವು ಕೊಡುವುದಿಲ್ಲ ಎಂದು ಹೇಳಿದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಪ್ರಧಾನಿ ಮೋದಿಯವರನ್ನು ನೇರ ಭೇಟಿ ಮಾಡಿ ಮನವಿ ಮಾಡಿದರೂ ಅನುದಾನ ಕೊಟ್ಟಿಲ್ಲ.
ಕುಂಭಮೇಳಕ್ಕೆ ಅನುದಾನ ಕೊಡುವ ಕೇಂದ್ರ ಸರ್ಕಾರ ಮಹಾಮಸ್ತಕಾಭಿಷೇಕಕ್ಕೆ ಅನುದಾನ ಕೊಡದಿದ್ದರೆ ಹೇಗೆ ಎಂದು ಪ್ರಶ್ನಿಸಿದ ಸಚಿವ ಮಂಜು, ರಾಜ್ಯ ಸರ್ಕಾರ ಈಗಾಗಲೇ 175 ಕೋಟಿ ರೂ. ಬಿಡುಗಡೆ ಮಾಡಿದೆ. ಇನ್ನುಳಿದ ನೆರವನ್ನು ಇತರೆ ಮೂಲಗಳಿಂದ ಕ್ರೋಢೀಕರಿಸಲಾಗುವುದು ಎಂದರು.

ಮಹಾಮಸ್ತಕಾಭಿಷೇಕಕ್ಕೆ ರಾಷ್ಟ್ರಪತಿ, ಪ್ರಧಾನಿಯವರಿಗೆ ಆಹ್ವಾನ ನೀಡಲಾಗುವುದು. ಆಹ್ವಾನ ನೀಡಲು ಕೇಂದ್ರದ ಬಳಿ ಹೋದಾಗ ಮತ್ತೆ ಅನುದಾನಕ್ಕೆ ಮನವಿ ಮಾಡಲಾಗುವುದು ಎಂದು ಹೇಳಿದರು. ಶಾಸಕ ಸಿ.ಎನ್‌.ಬಾಲಕೃಷ್ಣ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next