Advertisement

12 ಮರಳು ದಿಣ್ಣೆಗಳಿಂದ ಮರಳುಗಾರಿಕೆ

11:30 AM Nov 08, 2018 | Harsha Rao |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸಿಆರ್‌ಝಡ್‌ ವ್ಯಾಪ್ತಿಯ 16 ಮರಳು ದಿಣ್ಣೆಗಳ ಪೈಕಿ 12ರಿಂದ ಮರಳು ತೆಗೆಯಲು ಒಟ್ಟು 76 ಮಂದಿಗೆ ಅನುಮೋದನೆ ನೀಡಲಾಗಿದೆ. ಈ ಪೈಕಿ ಮರಳು ದಕ್ಕೆಗಳ ಪರಿಶೀಲನೆ ಕೂಡ ನಡೆಸಲಾಗಿದ್ದು, ಕೆಲವೇ ದಿನಗಳಲ್ಲಿ ಮರಳು ತೆಗೆಯಲು ಪೂರ್ಣ ಅನುಮೋದನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ತಿಳಿಸಿದ್ದಾರೆ.

Advertisement

ತನ್ನ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನ್‌ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಒತ್ತು ನೀಡಲಾಗಿದೆ. 22 ಬ್ಲಾಕ್‌ಗಳನ್ನು ಗುರುತಿಸಲಾಗಿದ್ದು, ಇದರಲ್ಲಿ ಇಬ್ಬರಿಗೆ ಟೆಂಡರ್‌ ಆಗಿದೆ. ಉಳಿದವರು ಟೆಂಡರ್‌ನಲ್ಲಿ ಪಾಲ್ಗೊಳ್ಳಬಹುದು. ಇದಕ್ಕಾಗಿ ನಿಯಮಾವಳಿ ಯಲ್ಲಿಯೂ ಸ್ವಲ್ಪ ಸಡಿಲಿಕೆ ಮಾಡಲಾಗಿದೆ ಎಂದರು.

ನಿಯಮ ಸಡಿಲಿಕೆ
ಒಂದು ವರ್ಷ ಇದ್ದ ಲೀಸ್‌ ಅನ್ನು 5 ವರ್ಷಕ್ಕೆ ವಿಸ್ತರಿಸಲಾಗಿದೆ. ವಾರ್ಷಿಕ 25 ಲಕ್ಷ ರೂ. ವಹಿವಾಟು ನಡೆಸಿದವರಿಗೆ ಅನುಮತಿ ಎನ್ನುವ ಬದಲು 5 ಲಕ್ಷ ರೂ. ವಾರ್ಷಿಕ ವಹಿವಾಟು ನಡೆಸುವವರಿಗೆ ಅನು ಮತಿ ಕಲ್ಪಿಸಲಾಗುತ್ತದೆ. ಅದೇ ಗ್ರಾಮದವರೇ ಆಗ ಬೇಕು ಎನ್ನುವುದನ್ನು ತಾಲೂಕಿಗೆ ವಿಸ್ತರಣೆ ಮಾಡಲಾಗಿದೆ. ಹಾಗಾಗಿ ಮುಂದಿನ ಟೆಂಡರ್‌ನಲ್ಲಿ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ನಾನ್‌ ಸಿಆರ್‌ಝಡ್‌ ಮರಳು ಹೆಚ್ಚಾಗಿ ಬಳಕೆಯಾಗಬೇಕಿದೆ ಎಂದರು. ಮರಳು ದರ ನಿಗದಿಗೆ ಈಗಾಗಲೇ ನಿರ್ಧರಿಸಲಾಗಿದ್ದು, 3,000 ರೂ. ಮಾಡಬೇಕು ಎಂಬ ಬಗ್ಗೆ ಜಿಲ್ಲಾಡಳಿತ ಯೋಚಿಸಿದೆ. ಈ ಬಗ್ಗೆ ಅಂತಿಮ ತೀರ್ಮಾನವನ್ನು ಮುಂದಿನ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗುವುದು. ಇದಕ್ಕಾಗಿ ಪ್ರತ್ಯೇಕವಾಗಿ ಕಂಟ್ರೋಲ್‌ ರೂಂ ತೆರೆಯಲಾಗುವುದು ಎಂದವರು ಹೇಳಿದರು.

ಗುಂಡ್ಯ ಹೆದ್ದಾರಿ ಸಮಸ್ಯೆ ಶೀಘ್ರ ಪರಿಹಾರ
ಗುಂಡ್ಯ-ಬಿ.ಸಿ.ರೋಡ್‌ ಕಾಂಕ್ರೀಟ್‌ ಕಾಮಗಾರಿ ಮಳೆಯ ಬಳಿಕ ಸ್ವಲ್ಪ ನಿಧಾನವಾಗಿದೆ. ಈ ಬಗ್ಗೆ ಎನ್‌ಎಚ್‌ಎಐ ಅವರಲ್ಲಿ ಮಾಹಿತಿ ಪಡೆಯಲಾಗಿದೆ. ಗುತ್ತಿಗೆದಾರರು  - ಪ್ರಾಧಿಕಾರದ ಮಧ್ಯೆ ಅಭಿಪ್ರಾಯ ಭೇದ ಸೇರಿದಂತೆ ಎಲ್ಲ ವಿಚಾರಗಳನ್ನು ವಾರದೊಳಗೆ ಸರಿಪಡಿಸುವಂತೆ ಸೂಚಿಸಲಾಗಿದೆ ಎಂದರು.

ಕೂಳೂರು ಹಳೆಯ ಸೇತುವೆ ಬಂದ್‌ ಮಾಡುವ ಕುರಿತು ಪೂರ್ಣ ಸಾಧ್ಯತಾ ವರದಿ ನೀಡುವಂತೆ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಟ್ರಾಫಿಕ್‌ ಎಸಿಪಿ ಉಪಸ್ಥಿತಿಯ ಸಮಿತಿ ರಚಿಸಲಾಗಿದೆ. ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅವಕಾಶ ನೀಡಬಹುದೇ? ಪೂರ್ಣ ಮುಚ್ಚಬೇಕೇ? ಪರ್ಯಾಯ ಮಾರ್ಗಗಳು ಯಾವುದು ಸಹಿತ ಹಲವು ವಿಚಾರಗಳ ಬಗ್ಗೆ ಪೂರ್ಣ ವರದಿಯನ್ನು ಅವರು ನೀಡಲಿದ್ದಾರೆ. ಆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ಕುಮಾರ್‌ ಉಪಸ್ಥಿತರಿದ್ದರು.

Advertisement

ಶಿರಾಡಿ: ದೀಪಾವಳಿ ಬಳಿಕ ಘನ ವಾಹನ ಸಂಚಾರ
ಶಿರಾಡಿ ಘಾಟಿಯಲ್ಲಿ ದಕ್ಷಿಣ ಕನ್ನಡ ಭಾಗ ಘನ ವಾಹನಗಳ ಓಡಾಟಕ್ಕೆ ಸೂಕ್ತವಾಗಿದ್ದು, ನಮ್ಮ ಅನುಮತಿ ಇದೆ. ಆದರೆ ಹಾಸನ ಜಿಲ್ಲಾಡಳಿತದಿಂದ ಇನ್ನೂ ಅನುಮತಿ ದೊರೆತಿಲ್ಲ. ದೀಪಾವಳಿ ಬಳಿಕ ಹಾಸನ ಜಿಲ್ಲಾಡಳಿತದ ಮಾಹಿತಿ ಪಡೆದುಕೊಂಡು ಘನ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು. ಹೆದ್ದಾರಿ ಪ್ರಾಧಿಕಾರದವರು ಈಗಾಗಲೇ ಶಿರಾಡಿ ಘಾಟಿ ಹೆದ್ದಾರಿಯಲ್ಲಿ ಕುಸಿತ ಸಂಭವಿಸಿದ ಕಡೆಗಳಲ್ಲಿ ದುರಸ್ತಿ ಕೆಲಸ ಆರಂಭಿಸಿದ್ದಾರೆ. ಶಿರಾಡಿಯಲ್ಲಿ ಘನ ವಾಹನ ಸಂಚಾರ ಪ್ರಾರಂಭಗೊಂಡ ಬಳಿಕ ಹದಗೆಟ್ಟ ಚಾರ್ಮಾಡಿ ಘಾಟಿ ರಸ್ತೆ ದುರಸ್ತಿ ಕೆಲಸ ಕೈಗೆತ್ತಿಕೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next