ಹೊಸದಿಲ್ಲಿ: ಮಹಾರಾಷ್ಟ್ರ ವಿಧಾನಸಭೆಯಿಂದ 12 ಮಂದಿ ಬಿಜೆಪಿ ಶಾಸಕರನ್ನು ಒಂದು ವರ್ಷ ಅಮಾನತು ಮಾಡಿದ ನಿರ್ಣಯವನ್ನು ಸುಪ್ರೀಂ ಕೋರ್ಟ್ ಅಸಂವಿಧಾನಿಕ ಎಂದು ಕರೆದಿದೆ. ಅಲ್ಲದೆ 12 ಮಂದಿ ಶಾಸಕರ ಅಮಾನತನ್ನು ರದ್ದು ಮಾಡಿದೆ.
‘ಶಾಸಕರನ್ನು ವಿಧಾನಸಭೆಯಿಂದ ಅಮಾನತು ಮಾಡುವುದು ಅಸಂವಿಧಾನಿಕ ಮತ್ತು ಕಾನೂನು ಬಾಹಿರ” ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ.
ವಿಧಾನಸಭೆ ಸ್ಪೀಕರ್ ಕಚೇರಿಯ ಅಧಿಕಾರಿಯೊಂದಿಗೆ ಅನುಚಿತ ವರ್ತನೆ ತೋರಿದ ಆರೋಪದಡಿಯಲ್ಲಿ ಕಳೆದ ವರ್ಷದ ಜುಲೈ 5ರಂದು ಮಹಾರಾಷ್ಟ್ರ ರಾಜ್ಯ ಸರ್ಕಾರ 12 ಮಂದಿ ಬಿಜೆಪಿ ಶಾಸಕರನ್ನು ಒಂದು ವರ್ಷದ ಅವಧಿಗೆ ಅಮಾನತು ಮಾಡಿತ್ತು.
ಇದನ್ನೂ ಓದಿ:ಕೆನಡಾ/ಅಮೆರಿಕ ಗಡಿ: ಹಿಮಪಾತಕ್ಕೆ ಸಿಲುಕಿ ಸಾವನ್ನಪ್ಪಿದ್ದ ಭಾರತೀಯ ಕುಟುಂಬದ ಗುರುತು ಪತ್ತೆ
ಶಾಸಕರಾದ ಸಂಜಯ್ ಕುಟೆ, ಆಶಿಶ್ ಶೆಲಾರ್, ಅಭಿಮನ್ಯು ಪವಾರ್, ಗಿರೀಶ್ ಮಹಾಜನ್, ಅತುಲ್ ಭಟ್ಖಾಲ್ಕರ್, ಪರಾಗ್ ಅಲವಾನಿ, ಹರೀಶ್ ಪಿಂಪಾಲೆ, ಯೋಗೇಶ್ ಸಾಗರ್, ಜಯ್ ಕುಮಾರ್ ರಾವತ್, ನಾರಾಯಣ ಕುಚೆ, ರಾಮ್ ಸತ್ಪುಟೆ ಮತ್ತು ಬಂಟಿ ಭಂಗ್ಡಿಯಾ ರನ್ನು ಅಮಾನತುಗೊಳಿಸುವ ಪ್ರಸ್ತಾವನೆಯನ್ನು ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ಅನಿಲ್ ಪರಬ್ ಮಂಡಿಸಿದ್ದರು ಮತ್ತು ಧ್ವನಿ ಮತದಿಂದ ಅಂಗೀಕರಿಸಲಾಗಿತ್ತು.
ಪ್ರತಿಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಅವರು ಆರೋಪವನ್ನು ಸುಳ್ಳು ಎಂದು ಬಣ್ಣಿಸಿದ್ದರು.