ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಚನ್ನರಾಯಪಟ್ಟಣದ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ಉಡುಪಿ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಜರಗಿದ ಎರಡು ದಿನಗಳ “11ನೇ ರಾಷ್ಟ್ರೀಯ ಶಾಸ್ತ್ರೀಯ ನೃತ್ಯೋತ್ಸವ-2019′ ರವಿವಾರ ಸಂಪನ್ನಗೊಂಡಿತು.
ಶನಿವಾರದಂದು ಪರ್ಯಾಯ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ನೃತ್ಯೋತ್ಸವಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಚೆನ್ನೈನ ನೃತ್ಯ ಕಲಾವಿದೆ ಅನುಪಮಾ, ನೃತ್ಯಗುರುಗಳಾದ ಸಂಧ್ಯಾ ಅಶೋಕ್ ಮೂಲ್ಯ, ಕಾವ್ಯ, ಮಿನು ಶ್ಯಾಂ, ರಶ್ಮಿ, ಶಾರದಾ, ನೃತ್ಯೋತ್ಸವ ಆಯೋಜನಾ ಕಾರ್ಯದರ್ಶಿ ಡಾ| ಸ್ವಾತಿ ಪಿ.ಭಾರಧ್ವಾಜ್, ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಭಾರಧ್ವಾಜ್, ಅಕಾಡೆಮಿ ಅಧ್ಯಕ್ಷೆ ಕೆ.ಆರ್.ಅನಿತಾ ಮೊದಲಾದವರು ಪಾಲ್ಗೊಂಡಿದ್ದರು.
2 ದಿನಗಳ ಈ ನೃತ್ಯೋತ್ಸವದಲ್ಲಿ ವಿವಿಧ ರಾಜ್ಯಗಳ 265 ಮಂದಿ ನೃತ್ಯಪಟುಗಳು ಭರತನಾಟ್ಯ, ಕೂಚುಪುಡಿ, ಕಥಕ್ಕಳಿ, ಕಥಕ್, ಮೋಹನಿಯಾಟ್ಟಂ, ಒಡೆಸ್ಸಿ, ಯಕ್ಷಗಾನ ಮತ್ತು ಮಣಿಪುರಿ ನೃತ್ಯ ಪ್ರದರ್ಶನ ನೀಡಿದರು. “ಶ್ರೀಕೃಷ್ಣಾಮೃತ ರಾಷ್ಟ್ರೀಯ ಪುರಸ್ಕಾರ’ ನೀಡಿ ಗೌರವಿಸಲಾಯಿತು.
ಹಾಸನ, ಶಿರಡಿ, ಮಂತ್ರಾಲಯ, ತಿರುಪತಿ, ಊಟಿ, ಚೆನ್ನೈ, ಮುಂಬೈ, ಹೊರನಾಡು, ಮಲೇಶ್ಯಾ, ಮೈಸೂರಿನಲ್ಲಿ ರಾಷ್ಟ್ರೀಯ ನೃತ್ಯೋತ್ಸವ ನಡೆದಿದೆ. ಇದುವರೆಗೆ 4,200 ಮಂದಿ ನೃತ್ಯಪಟುಗಳು ಪ್ರದರ್ಶನ ನೀಡಿದ್ದಾರೆ. 12ನೇ ನೃತ್ಯೋತ್ಸವ ಹೈದರಾಬಾದ್‌ನಲ್ಲಿ, 13ನೇ ನೃತ್ಯೋತ್ಸವವನ್ನು ಅಂಡಮಾನ್‌ನಲ್ಲಿ ನಡೆಸಲಾಗುವುದು. ಕಾಶ್ಮೀರ, ಕನ್ಯಾಕುಮಾರಿ ಮಾತ್ರವಲ್ಲದೆ ಹಿಮಾಚಲ ಪ್ರದೇಶದಲ್ಲಿಯೂ ಇಂತಹ ನೃತ್ಯೋತ್ಸವ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಭಾರಧ್ವಾಜ್ ಈ ಸಂದರ್ಭದಲ್ಲಿ ತಿಳಿಸಿದರು.