Advertisement

ಸಂಕಷ್ಟ ಕಾಲದಲ್ಲಿ ಸಮಾಜ ಬಾಂಧವರನ್ನು ಮಂಡಳಿ ಕೈಬಿಟಿಲ್ಟ : ಕೆ. ಎಲ್‌. ಬಂಗೇರ

05:22 PM Apr 03, 2021 | Team Udayavani |

ಮುಂಬಯಿ: ನಗರದ ಹಿರಿಯ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಹಿತ್ಯಕ ಸಂಘಟನೆ ಮೊಗವೀರ ವ್ಯವಸ್ಥಾಪಕ ಮಂಡಳಿಯ 118ನೇ ವಾರ್ಷಿಕ ಮಹಾಸಭೆ ಮಾ. 30ರಂದು ವೀಡಿಯೋ ಕಾನ್ಫರೆನ್ಸ್‌ ಮೂಲಕ ಅಂಧೇರಿಯ ಮೊಗವೀರ ಭವನದ ಎರಡನೇ ಮಹಡಿಯಲ್ಲಿರುವ ಶ್ರೀಮತಿ ಶಾಲಿನಿ ಜಿ. ಶಂಕರ್‌ ಸಭಾಗೃಹದಲ್ಲಿ ನಡೆಯಿತು.

Advertisement

ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಮಂಡಳಿಯ ಅಧ್ಯಕ್ಷ ಪಣಂಬೂರು ಕೃಷ್ಣ ಕುಮಾರ್‌ ಎಲ್‌. ಬಂಗೇರ ಮಾತನಾಡಿ, ಮಂಡಳಿಯು ಕಳೆದ 117 ವರ್ಷಗಳಿಂದ ಸಮಾಜ ಬಾಂಧವರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದು. ವರದಿ ವರ್ಷವೂ ಸಮಾಜ ಕಲ್ಯಾಣ ಯೋಜನೆಯ ಅಡಿಯಲ್ಲಿ ಪರಿಹಾರ ಯೋಜನೆಗಳಾದ ವೈದ್ಯಕೀಯ ನೆರವು, ವಿಧವಾ ವೇತನ, ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ಸಹಾಯ, ಮೀನುಗಾರಿಕೆಯ ಸಂದರ್ಭ ಮೃತರಾದವರ ಕುಟುಂಬಕ್ಕೆ ಆರ್ಥಿಕ ಸಹಾಯ, ಅತ್ಯಧಿಕ ಅಂಕ ಪಡೆದ ಎಸ್‌ಎಸ್‌ಸಿ ಮತ್ತು ಎಚ್‌ಎಸ್‌ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ, ಕ್ರೀಡಾಪಟುಗಳಿಗೆ ಆರ್ಥಿಕ ಸಹಾಯ ಇನ್ನಿತರ ಸಹಾಯಗಳನ್ನು ಮಾಡಲಾಗಿದೆ.

ಮಂಡಳಿಯ ಶಿಕ್ಷಣ ಸಂಸ್ಥೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶುಲ್ಕ ವಿನಾಯಿತಿ, ಸಭಾಗೃಹಗಳ ಬಾಡಿಗೆಯಲ್ಲಿ ರಿಯಾಯಿತಿಗಳು ಮೊದಲಾದ ಸಹಾಯವನ್ನು ಮಂಡಳಿಯು ನೀಡುತ್ತಾ ಬಂದಿದೆ. ಕೋವಿಡ್‌ ಮಹಾಮಾರಿಯಿಂದಾಗಿ ಮಂಡಳಿಯು ಆರ್ಥಿಕವಾಗಿ ಎಂದಿನಂತೆ ಆದಾಯ ಗಳಿಸದಿದ್ದರೂ ನಾವು ಎದೆಗುಂದಲಿಲ್ಲ. ಮಂಡಳಿಯು ಸಮಾಜಹಿತ ಕಾರ್ಯವನ್ನು ನಿರಂತರವಾಗಿ ನಡೆಸಿದೆ ಎನ್ನಲು ಸಂತೋಷವಾಗುತ್ತಿದೆ. ಮುಂಬಯಿ ಹಾಗೂ ಆಸುಪಾಸಿನ ಜಿಲ್ಲೆಗಳಲ್ಲಿ ವಾಸಿಸುವ ಸಮಾಜ ಬಾಂಧವರಿಗೆ ಕೊರೊನಾ ಲಾಕ್‌ಡೌನ್‌ ನಿಂದಾಗಿ ಸಂಕಷ್ಟದ ಕಾಲದಲ್ಲಿ ದಿನನಿತ್ಯ ಅಗತ್ಯದ ವಸ್ತುಗಳನ್ನು ಒದಗಿಸಿಕೊಟ್ಟಿದೆ. ಹಲವರಿಗೆ ಪ್ರಾದೇಶಿಕ ಸಮಿತಿಗಳ ಮೂಲಕ ಆರ್ಥಿಕ ನೆರವನ್ನು ನೀಡಲಾಗಿದೆ. ಸಂಕಷ್ಟದ ಸಂದರ್ಭ ಸಮಾಜ ಬಾಂಧವರನ್ನು ಮಂಡಳಿಯು ಕೈಬಿಡದೆ ಕೈಲಾದಷ್ಟು ಸಹಕರಿಸಿದೆ ಎಂದು ಹೇಳಿದರು.

ಪ್ರಾರಂಭದಲ್ಲಿ ಮಂಡಳಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್‌ ಎಲ್. ಸಾಲ್ಯಾನ್‌ ಸ್ವಾಗತಿಸಿ, ಸಭೆಯ ಆಯೋಜನೆಯ ಬಗ್ಗೆ ತಿಳಿಸಿದರು. ಈಗಾಗಲೇ ಈ ಸಭೆಯಲ್ಲಿ ವೀಡಿಯೋ ಕಾನ್ಪರೆನ್ಸ್‌ ಮೂಲಕ ಹಾಜರಿರುವ ಬಗ್ಗೆ ನೋಂದಣಿ ಮಾಡಿರುವ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ಉಪಾಧ್ಯಕ್ಷ ಒಡೆಯರಬೆಟ್ಟು ಅಶೋಕ್‌ ಸುವರ್ಣ ಅವರು ವರದಿ ವರ್ಷದಲ್ಲಿ ದೈವಾದೀನರಾದ ಮಂಡಳಿಯ ಸದಸ್ಯರ ಹೆಸರುಗಳನ್ನು ಓದಿ ಅಧ್ಯಕ್ಷರ ವಿನಂತಿಯ ಮೇರೆಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಜತೆ ಕಾರ್ಯದರ್ಶಿ ಪ್ರೀತಿ ಹರೀಶ್‌ ಶ್ರೀಯಾನ್‌ ಅವರು 117ನೇ ವಾರ್ಷಿಕ ಮಹಾಸಭೆಯ ಟಿಪ್ಪಣಿ ಓದಿದರು.

ಅದನ್ನು ಪುರುಷೋತ್ತಮ ಶ್ರೀಯಾನ್‌ ಅವರ ಸೂಚನೆ ಮತ್ತು ಚಂದ್ರಶೇಖರ ಎನ್‌. ಕರ್ಕೇರ ಅವರ ಅನುಮೋದನೆಯೊಂದಿಗೆ ಅಂಗೀಕರಿಸಲಾಯಿತು. ಜತೆ ಕೋಶಾಧಿಕಾರಿ ಹೇಮಾನಂದ ಕುಂದರ್‌ 2020ರ ಮಾ. 31ಕ್ಕೆ ಅಂತ್ಯಗೊಂಡ ಮಂಡಳಿಯ ಲೆಕ್ಕಪತ್ರ ಮಂಡಿಸಿ, ಮಂಡಳಿಯ ಆರ್ಥಿಕ ಪ್ರಗತಿ ಹಾಗೂ ಪ್ರಮುಖ ಯೋಜನೆಗಳಿಗೆ ವ್ಯಯ ವಿಷಯಗಳನ್ನು ಸವಿಸ್ತಾರವಾಗಿ ತಿಳಿಸಿದರು.

Advertisement

ಲೆಕ್ಕಪತ್ರವನ್ನು ವಸಂತ್‌ ಕುಂದರ್‌ ಅವರ ಸೂಚನೆ ಹಾಗೂ ತುಕಾರಾಮ ಸಾಲ್ಯಾನ್‌ ಅವರ ಅನುಮೋದನೆಯೊಂದಿಗೆ ಅಂಗೀಕರಿಸಲಾಯಿತು. ಸಭೆಯಲ್ಲಿ 2020-2021ರ ಅವಧಿಗೆ ರಾವ್‌ ಆ್ಯಂಡ್‌ ಅಶೋಕ್‌ ಚಾರ್ಟರ್ಡ್‌ ಕಂಪೆನಿಯನ್ನು ಲೆಕ್ಕಪರಿಶೋಧಕರನ್ನಾಗಿ ನೇಮಿಸುವ ಬಗ್ಗೆ ಮಂಡಿಸಲಾದ ಠರಾವನ್ನು ಹರೀಶ್‌ ಶ್ರೀಯಾನ್‌ ಅವರ ಸೂಚನೆ ಹಾಗೂ ಕುಮಾರ್‌ ಮೆಂಡನ್‌ ಅವರ ಅನುಮೋದನೆಯೊಂದಿಗೆ ಅಂಗೀಕರಿಸಲಾಯಿತು. 2021-2025ರ ಅವಧಿಯ ಮಂಡಳಿಯ ಪಾರುಪತ್ಯಗಾರರ ನೇಮಕದ ಬಗ್ಗೆ ಮಾಹಿತಿಯನ್ನು ದಿಲೀಪ್‌ ಕುಮಾರ್‌ ಮೂಲ್ಕಿ ನೀಡಿ, ಈ ಅವಧಿಗೆ ಬೆಂಗ್ರೆ ಅಜಿತ್‌ ಜಿ. ಸುವರ್ಣ, ಬೈಕಂಪಾಡಿ ವಿಕಾಸ್‌ ವಿ. ಪುತ್ರನ್‌, ಉದ್ಯಾವರ ದೇವರಾಜ್‌ ಜಿ. ಬಂಗೇರ, ಕಾಡಿಪಟ್ಣ ಹರೀಶ್‌ ವಿ. ಪುತ್ರನ್‌, ಬೋಳೂರು ಲಕ್ಷ್ಮಣ್‌ ಶ್ರೀಯಾನ್‌ ಅವರನ್ನು ಆಡಳಿತ ಮಂಡಳಿಯ ವಾಡಿಕೆಯ ಪದ್ಧತಿಯಂತೆ ನೇಮಿಸಲಾಗಿದೆ ಎಂದು ತಿಳಿಸಿ ಅವರನ್ನು ಅಭಿನಂದಿಸಿದರು.

ಸದಸ್ಯರಾದ ಪೊಲಿಪು ನೀಲಾದರ ಕುಂದರ್‌, ಚರಂತಿಪೇಟೆ ಸದಾನಂದ ಕೋಟ್ಯಾನ್‌, ಪೊಲಿಪು ದಿವಾಕರ ಪಿ. ಸಾಲ್ಯಾನ್‌, ನಾಡಿಪಟ್ಣ ಕೆ. ಎನ್‌. ಚಂದ್ರಶೇಖರ ಅವರು ಮಂಡಳಿಯ ಶ್ರೇಯೋಭಿವೃದ್ಧಿಗೆ ಸರ್ವರೂ ಸಹಕಾರ ನೀಡಬೇಕೆಂದು ವಿನಂತಿಸಿದರು. ಮಂಡಳಿಯ ಪಾರುಪತ್ಯಗಾರರಾದ ದೇವರಾಜ್‌ ಬಂಗೇರ, ಹರೀಶ್‌ ಪುತ್ರನ್‌, ಲಕ್ಷ್ಮೀ ಶ್ರೀಯಾನ್‌, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಸಂಜೀವ್‌ ಕೆ. ಸಾಲ್ಯಾನ್‌, ಮೊಗವೀರ ಪತ್ರಿಕೆಯ ಪ್ರಬಂಧಕ ದಯಾನಂದ ಬಂಗೇರ, ಮಂಡಳಿಯ ಜತೆ ಕಾರ್ಯದರ್ಶಿ ಗಣೇಶ್‌ ಕಾಂಚನ್‌, ಜತೆ ಕಾರ್ಯದರ್ಶಿ ಪ್ರೀತಿ ಶ್ರೀಯಾನ್‌, ಮಹಿಳಾ ವಿಭಾಗದ ಅಧ್ಯಕ್ಷೆ ಪ್ರೇಮಲತಾ ಪುತ್ರನ್‌, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಶೇಖರ ಕರ್ಕೇರ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಭಾಸ್ಕರ ಎಲ್.  ಸಾಲ್ಯಾನ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next