ಭೋಪಾಲ್: ಹೋಟೆಲ್ ಬಳಿ ಪಾರ್ಕಿಂಗ್ ವಿಚಾರಕ್ಕೆ ನಡೆದ ಗಲಾಟೆ ಹಾಗೂ ಅತ್ಯಾಚಾರಕ್ಕೆ ತಡೆಯೊಡ್ಡಿದ್ದಕ್ಕೆ ಮಹಿಳೆಯ ಮುಖವನ್ನು ಮೂವರು ಯುವಕರು ಪೇಪರ್ ಕಟರ್‌ನಿಂದ ಗಾಯಗೊಳಿಸಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ.
ಮಹಿಳೆಯ ಮುಖಕ್ಕೆ 118 ಹೊಲಿಗೆಗಳನ್ನು ಹಾಕಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಭೋಪಾಲ್‌ನ ಟಿಟಿ ನಗರದ ರೋಷನ್‌ಪುರದಲ್ಲಿರುವ ಹೋಟೆಲ್‌ಗೆ ಈ ಮಹಿಳೆ, ಪತಿಯೊಂದಿಗೆ ಬೈಕಿನಲ್ಲಿ ತೆರಳಿದ್ದರು. ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ನಿಲ್ಲಿಸುವ ಕುರಿತಾಗಿ ಬೇರೊಂದು ಬೈಕ್‌ನಲ್ಲಿದ್ದ ಮೂವರು ಯುವಕರು ಹಾಗೂ ಈ ದಂಪತಿ ನಡುವೆ ಮಾತಿನ ಚಕಮಕಿ ಶುರುವಾಗಿ ಜಗಳವಾಗಿದೆ. ಈ ಸಂದರ್ಭದಲ್ಲಿ ಆ ಯುವಕರು ಮಹಿಳೆಯನ್ನು ಅವಾಚ್ಯವಾಗಿ ನಿಂದಿಸಿದ್ದಾರೆ.
ಇದರಿಂದ ಸಿಟ್ಟಿಗೆದ್ದ ಮಹಿಳೆ, ಒಬ್ಬ ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾರೆ.
ನಂತರ, ದಂಪತಿ ಹೋಟೆಲ್‌ನೊಳಕ್ಕೆ ಹೋಗಿದ್ದಾರೆ. ಆದರೆ, ಅವರಿಬ್ಬರು ಊಟ ಮುಗಿಸಿ ಹೊರಬಂದ ಕೂಡಲೇ ಪೇಪರ್ ಕಟರ್‌ನಿಂದ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ:ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಆಸ್ಪತ್ರೆಗೆ ದಾಖಲು
ಮಹಿಳೆಯ ನಿವಾಸಕ್ಕೆ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
ಜತೆಗೆ ಮಹಿಳೆಗೆ 1 ಲಕ್ಷ ರೂ. ಬಹುಮಾನವನ್ನೂ ಘೋಷಣೆ ಮಾಡಿದ್ದಾರೆ. ಹೋಟೆಲ್ ಮುಂಭಾಗದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಮೂವರ ಪೈಕಿ ಇಬ್ಬರನ್ನು ಬಂಧಿಸಲಾಗಿದೆ.