Advertisement

Medical ಉಪಕರಣ ಖರೀದಿಯಲ್ಲಿ 117ಕೋಟಿ ರೂ. ಅಕ್ರಮ: ಬಿಜೆಪಿ

08:54 PM Sep 22, 2024 | Team Udayavani |

ಬೆಂಗಳೂರು: ವಿವಿಧ 114 ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ 117 ಕೋಟಿ ರೂ. ಅವ್ಯವಹಾರ ನಡೆದಿದ್ದು, ಇದರ ನೈತಿಕ ಹೊಣೆ ಹೊತ್ತು ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ್‌ ಪಾಟೀಲ್‌ ರಾಜೀನಾಮೆ ಕೊಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎನ್‌. ರವಿಕುಮಾರ್‌ ಒತ್ತಾಯಿಸಿದ್ದಾರೆ.

Advertisement

ಈ ಅವ್ಯವಹಾರದ ತನಿಖೆಯನ್ನು ನಿವೃತ್ತ ನ್ಯಾಯಾಧೀಶರು ಅಥವಾ ಸ್ವತಂತ್ರ ತನಿಖಾ ಸಂಸ್ಥೆಯಿಂದ ನಡೆಸಬೇಕು. ಮುಖ್ಯಮಂತ್ರಿಗಳು ಕೂಡಲೇ ಸಚಿವ ಶರಣಪ್ರಕಾಶ್‌ ಪಾಟೀಲ್‌ ಅವರಿಂದ ರಾಜೀನಾಮೆ ಪಡೆಯಬೇಕು. ಸೆ. 24ರಂದು ಇದರ ಕುರಿತು ನಾವು ಲೋಕಾಯುಕ್ತರಿಗೆ ದೂರು ಕೊಡಲಿದ್ದೇವೆ.

ರಾಜ್ಯಾಧ್ಯಕ್ಷರ ಜತೆ ಚರ್ಚಿಸಿ ರಾಜ್ಯಪಾಲರಿಗೂ ಮನವಿ ಸಲ್ಲಿಸಲಾಗುವುದು ಎಂದು ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ದೊಡ್ಡ ಹಗರಣ ನಡೆದಿದೆ. ರೋಗಿಗಳಿಗೆ ಆರೋಗ್ಯ ಸೇವೆಗಾಗಿ ರಾಜ್ಯದ ಹಾವೇರಿ, ಕಲಬುರಗಿ, ಕೊಪ್ಪಳ, ಯಾದಗಿರಿ, ಬೆಂಗಳೂರು, ಮೈಸೂರು ಮೊದಲಾದ 18 ವೈದ್ಯಕೀಯ ಕಾಲೇಜುಗಳಿಗೆ 114 ಮಾಡ್ಯುಲರ್‌ ಆಪರೇಷನ್‌ ಥಿಯೇಟರ್‌ ಉಪಕರಣಗಳನ್ನು ಖರೀದಿಸಲು 176.70 ಕೋಟಿ ರೂ. ಖರ್ಚು ಮಾಡಿದ್ದಾರೆ.

ಟೆಂಡರ್‌ ಕರೆಯಲು ಕಂಪೆನಿ ಹೆಸರನ್ನು ಬದಲಾಯಿಸಿದ್ದು, ಕೋಟ್ಯಂತರ ರೂ. ಭ್ರಷ್ಟಾಚಾರ ನಡೆದಿದೆ. ವೈದ್ಯಕೀಯ ಶಿಕ್ಷಣ ಸಚಿವ, ವೈದ್ಯಕೀಯ ಶಿಕ್ಷಣ ಇಲಾಖೆ ಉನ್ನತಾಧಿಕಾರಿಗಳು ಈ ಹಗರಣದಲ್ಲಿ ಭಾಗವಹಿಸಿದ ಬಗ್ಗೆ ದಟ್ಟವಾದ ಸುದ್ದಿ ಇದೆ. ಈ ಅವ್ಯವಹಾರದಿಂದ ಸರಕಾರಕ್ಕೆ 117 ಕೋಟಿ ರೂ. ನಷ್ಟವಾಗಿದೆ.

Advertisement

ಸರಕಾರವು ಶೇ. 60 ಮತ್ತು ಸಂಬಂಧಿತ ಸಂಸ್ಥೆಯು ಆಂತರಿಕ ಸಂಪನ್ಮೂಲದಿಂದ ಶೇ. 40 ಹಣ ಭರಿಸುತ್ತಿವೆ. ಡಾ| ಶರಣಪ್ರಕಾಶ್‌ ಪಾಟೀಲ್ , ಅಧಿಕಾರಿಗಳು, ದಿನೇಶ್‌ ಗುಂಡೂರಾವ್‌, ಉಪಕರಣ ಸರಬರಾಜು ಮಾಡಿದ ಸಂಸ್ಥೆಗೆ ಇದರ ಲಾಭ ಆಗಿರುವ ಸಾಧ್ಯತೆ ಇದೆ ಎಂದು ಆರೋಪಿಸಿದರು.

ಬಿಜೆಪಿ ಆರೋಪವೇನು?
ಹಿಂದೆ 50 ಉಪಕರಣ ಪೂರೈಕೆ ಮಾಡಿದ ಕೇರಳ ವೈದ್ಯಕೀಯ ಸೇವಾ ನಿಗಮದ ಎಂ.ಎಸ್‌. ಕ್ರಿಯೇಟಿವ್‌ ಹೆಲ್ತ್‌ ಟೆಕ್‌ ಪ್ರೈ.ಲಿ. ಸಂಸ್ಥೆ ಇದೇ ಮಾಡ್ಯುಲರ್‌ ಥಿಯೇಟರ್‌ ಉಪಕರಣಕ್ಕೆ ಪ್ರತಿಯೊಂದಕ್ಕೆ 49.70 ಲಕ್ಷ ರೂ.ಗಳಿಗೆ ಟೆಂಡರ್‌ಗೆ ಹಾಕಿದ್ದರು. 3 ವರ್ಷ ವಾರಂಟಿ ಎಂದು ತಿಳಿಸಲಾಗಿತ್ತು. ಬೆಳಗಾವಿ ಸ್ಮಾರ್ಟ್‌ ಸಿಟಿ ಲಿ.ಯು ಕಿಮ್ಸ್‌ ಆಸ್ಪತ್ರೆಯ ಟ್ರೊಮಾ ಸೆಂಟರ್‌ಗಾಗಿ ಮಾಡ್ಯುಲರ್‌ ಥಿಯೇಟರ್‌ಗೆ 1.10 ಕೋಟಿಯಂತೆ ಶಿವೋನ್‌ ಇಂಡಿಯಾ ಕಂಪೆನಿಗೆ (50 ಲಕ್ಷ ರೂ.ಗಳ ಎಂ.ಎಸ್‌. ಕ್ರಿಯೇಟಿವ್‌ ಬಿಟ್ಟು) ಕಾರ್ಯಾದೇಶ ಮಾಡಿದೆ ಎಂದು ರವಿಕುಮಾರ್‌ ವಿವರ ನೀಡಿದರು.

ವೈದ್ಯಕೀಯ ಶಿಕ್ಷಣ ಇಲಾಖೆಯು ಒಂದು ವರ್ಷ ವಾರಂಟಿ ಕೊಡುವ ಎಂ.ಎಸ್‌. ಲಕ್ಷ್ಮಣ್ಯ ವೆಂಚರ್ಸ್‌ ಪ್ರೈ.ಲಿ.ಗೆ ಪ್ರತೀ ಮಾಡ್ಯುಲರ್‌ ಆಪರೇಷನ್‌ ಥಿಯೇಟರ್‌ಗೆ 1,29,69,000 ರೂ. ಹಾಗೂ ಜಿಎಸ್‌ಟಿ 23,33,800 ರೂ. ಸೇರಿ ಒಟ್ಟು 1.52 ಕೋಟಿ ರೂ.ಗೆ ನೀಡಲಾಗಿದೆ. ಕೇರಳದ ಕಂಪೆನಿಗೆ ಟೆಂಡರ್‌ ನೀಡಿದ್ದರೆ ಪ್ರತೀ ಉಪಕರಣಕ್ಕೆ ಸುಮಾರು 50 ಲಕ್ಷ ರೂ. ತಗಲುತ್ತಿತ್ತು. ಕೇರಳದ ಸಂಸ್ಥೆಗೆ ಹೋಲಿಸಿದರೆ ಸುಮಾರು 3 ಪಟ್ಟು ಹೆಚ್ಚು ದರಕ್ಕೆ ಕೊಟ್ಟು ಹಗರಣ ನಡೆಸಲಾಗಿದೆ. ಒಂದು ಉಪಕರಣಕ್ಕೆ 1 ಕೋ.ರೂ. ಉಳಿತಾಯ ಆಗುತ್ತಿತ್ತು. 114 ಉಪಕರಣಗಳಲ್ಲಿ 117 ಕೋ.ರೂ. ಅವ್ಯವಹಾರ ಆಗಿದೆ. ಟೆಂಡರ್‌ನಲ್ಲಿ ಹತ್ತಾರು ಕೋ.ರೂ. ಕಿಕ್‌ ಬ್ಯಾಕ್‌ ಸಂದಾಯವಾಗಿದೆ. ಟೆಂಡರ್‌ನಲ್ಲಿ 4 ಕಂಪೆನಿಗಳು ಬಿಡ್‌ ಸಲ್ಲಿಸಿದ್ದು 3 ಕಂಪೆನಿಗಳನ್ನು ತಿರಸ್ಕರಿಸಿದ್ದಾರೆ. ಯಾವ್ಯಾವ ಕಂಪೆನಿ ಎಷ್ಟು ದರದ ಬಿಡ್‌ ಸಲ್ಲಿಸಿದ್ದವು ಎಂದು ಕೇಳಿದರೂ ಮಾಹಿತಿ ಕೊಟ್ಟಿಲ್ಲ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next