Advertisement

ಕುಂಬಾರವಾಡಾ ಶಾಲೆಗೆ 111ವರ್ಷದ ಸಂಭ್ರಮ

11:00 AM Jan 03, 2019 | |

ಜೋಯಿಡಾ: ತಾಲೂಕಿನ ಕುಂಬಾರವಾಡಾ ಹಿರಿಯ ಪ್ರಾಥಮಿಕ ಶಾಲೆ 111 ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಎಸ್‌ಡಿಎಂಸಿ ಜ. 5ರಂದು ಶತಮಾನೋತ್ಸವ ಆಚರಿಸಲು ಮುಂದಾಗಿದ್ದು, ಹಳೆವಿದ್ಯಾರ್ಥಿಗಳು ಹಾಗೂ ಊರ ನಾಗರಿಕರಲ್ಲಿ ಸಂಭ್ರಮ ಮನೆಮಾಡಿದೆ.

Advertisement

1906ರಲ್ಲಿ ಮುಂಬೈ ಕರ್ನಾಟಕ ಪ್ರಾಂತದ ಅವಧಿಯಲ್ಲಿ ಮರಾಠಿ ಮಾಧ್ಯಮ ಶಾಲೆಯಾಗಿ ಆರಂಭಗೊಂಡ ಈ ಶಾಲೆ, ನಂತರ ಕನ್ನಡ ಮಾಧ್ಯಮವಾಗಿ ಪರಿವರ್ತನೆಗೊಂಡು, ಸುತ್ತಲ ನೂರಾರು ಗ್ರಾಮಗಳ ಬಡಮಕ್ಕಳಿಗೆ ವಿದ್ಯಾದಾನ ಮಾಡಿ ಅಕ್ಷರಜ್ಞಾನ ಬಿತ್ತಿದ ಕಾತೇಲಿ, ಅಣಶಿ ಗ್ರಾ.ಪಂ. ವ್ಯಾಪ್ತಿಯ ಪ್ರಪ್ರಥಮ ಶಾಲೆ ಎನ್ನುವ ಹೆಗ್ಗಳಿಕೆ ಹೊಂದಿದೆ. ತಾಲೂಕಿನ ಅತ್ಯಂತ ಹಿರಿಯ ಶಾಲೆಗಳಲ್ಲೊಂದಾದ ಈ ಶಾಲೆ ಗುಡಿಸಲಿನಲ್ಲಿ ಆರಂಭಗೊಂಡಿದ್ದು, ಗುರು-ಶಿಷ್ಯರ ಬಳಗವೊಂದು ಬಿಟ್ಟರೆ ಬೇರೆ ಅನುಕೂಲತೆಗಳೇ ಇರಲಿಲ್ಲ. ಆದರೀಗ ವ್ಯವಸ್ಥಿತ ಕಟ್ಟಡ ಜೊತೆಗೆ ಆಧುನಿಕ ಶೈಲಿಯ ಪಿಠೊಪಕರಣ, ಪಾಠೊಪಕರಣ, ವಿಶಾಲ ಮೈದಾನವಿದೆ. ಗಣಕಯಂತ್ರ, ವಿಶೇಷ ಪರಿಣಿತ ಶಿಕ್ಷಕರ ದಂಡಿದ್ದು, ಶಿಕ್ಷಣಕ್ಕೆ ಯಾವುದೇ ಸಾಟಿಯಿಲ್ಲದಂತೆ ಬೆಳೆದು ನಿಂತಿದೆ.

ಈ ಶಾಲೆಯಲ್ಲಿ ಈವರೆಗೆ 6000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದು, ಇದರಲ್ಲಿ ಅನೇಕರು ಮುಂಬೈ, ಪೂಣೆ, ಬೆಂಗಳೂರು, ಚೆನ್ನೈ ಮುಂತಾದ ಕಡೆಗಳಲ್ಲಿ ಉದ್ಯೋಗದಲ್ಲಿದ್ದರೆ, ಇನ್ನು ಕೆಲವರು ಸಿಂಗಾಪುರ, ರಷಿಯಾ, ಕೊಲೋಂಬಿಯಾ, ಅಮೆರಿಕಾ, ಅರಬ್‌ ರಾಷ್ಟ್ರಗಳಲ್ಲಿ ವಿವಿಧ ಉದ್ಯೋಗದಲ್ಲಿದ್ದಾರೆ. ಈ ಶಾಲೆ ಕಾರ್ಯಕ್ರಮಕ್ಕೆ ಈ ಎಲ್ಲ ದೂರದೂರದ ಹಳೆ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿರುವುದು ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ.

ಶಿಕ್ಷಣ, ಅಭಿವೃದ್ಧಿಗೆ ಪೂರಕ: ಶಾಲೆಯ ಸಮಸ್ತ ಬೇಡಿಕೆಗಳಿಗೆ ಸ್ಥಳೀಯ ಗ್ರಾಪಂ ಬೆಂಬಲವಾಗಿ ನಿಂತಿದೆ. ಅಗತ್ಯ ಕೊಠಡಿ, ಮೂಲ ಸೌಕರ್ಯ, ಕಂಪ್ಯೂಟರ್‌ ಶಿಕ್ಷಣ ನೀಡುವ ಈ ಶಾಲೆಯಲ್ಲಿ ಐದು ಕಾಯಂ ಶಿಕ್ಷಕರು, 2 ಗೌರವ ಶಿಕ್ಷಕರು ಹಾಗೂ ಇತ್ತೀಚೆಗೆ ಬಂದ 2 ಎರಡು ವಿಷಯ ಪರಿಣಿತ ಶಿಕ್ಷಕರಿಂದಾಗಿ ಉತ್ತಮ ಶೈಕ್ಷಣಿಕ ವಾತಾವರಣ ಮೇಳೈಸಿದ್ದು, ಗುಣಾತ್ಮಕ ಶಿಕ್ಷಣಕ್ಕೆ ಯಾವುದೇ ಕೊರತೆ ಇಲ್ಲದಂತಾಗಿದೆ. ಅಭಿವೃದ್ಧಿ ಕಾರ್ಯಕ್ಕೆ ಪಾಲಕರು, ಊರ ನಾಗರಿಕರು ಟೊಂಕಕಟ್ಟಿ ನಿಲ್ಲುತ್ತಿದ್ದು, ಶಾಲಾಭಿವೃದ್ಧಿಗೆ ಇಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ.

ಕುಂಬಾರವಾಡಾ ಹಬ್ಬ: ಶಾಲಾ ಶತಮಾನೋತ್ಸವ ನಿಮಿತ್ತ ಅಂದು ಸಂಜೆ ಕುಂಬಾರವಾಡಾ ಹಬ್ಬ ಆಚರಿಸಲಾಗುತ್ತಿದ್ದು, ಪ್ರಖ್ಯಾತ ಕಲಾ ತಂಡಗಳಿಂದ ಸಂಗೀತ, ನೃತ್ಯಗಳ ರಸಮಂಜರಿ ಹಾಗೂ ಜಾದು, ಮಿಮಿಕ್ರಿ, ಹಾಸ್ಯಭರಿತ ಕೊಂಕಣಿ ನಾಟಕ ಕೂಡಾ ಪ್ರದರ್ಶನಗೊಳ್ಳಿದೆ. ಶತಮಾನೋತ್ಸವ ಊರ ಹಬ್ಬವಾಗಿ ಸಂಭ್ರಮಿಸಲಿದೆ.

Advertisement

ನಮ್ಮ ಶಾಲೆಗೆ 111 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹಳೆ ವಿದ್ಯರ್ಥಿಗಳ ಒಕ್ಕೂಟ, ಎಸ್‌ಡಿಎಂಸಿ ಹಾಗೂ ಊರ ನಾಗರಿಕರ ಆಶಯದಂತೆ ಶತಮಾನೋತ್ಸವ ಸಂಭ್ರಮ ಆಚರಣೆಗೆ ಮುಂದಾಗಿದ್ದೇವೆ. ನಮ್ಮ ಶಾಲೆಯಲ್ಲಿ ಸೇವೆ ಮಾಡಿದ ಎಲ್ಲ ಗುರುಗಳಿಗೆ ಗೌರವಾರ್ಪಣೆ ಮಾಡುವ ಉದ್ದೇಶವಿದ್ದು, ಶತಮಾನೋತ್ಸವವನ್ನು ಊರಹಬ್ಬವನ್ನಾಗಿ ಆಚರಿಸುತ್ತಿದ್ದೇವೆ.
 ಪುರುಷೋತ್ತಮ ಕಾಮತ್‌
ಶತಮಾನೋತ್ಸವ ಸಮಿತಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next