Advertisement

11 ವಿದ್ಯಾರ್ಥಿಗಳು ಉಕ್ರೇನ್‌ನಿಂದ ವಾಪಸ್‌; ಯುದ್ಧ ಪೀಡಿತ ದೇಶದಲ್ಲಿ ಅನ್ನ-ನೀರಿಗೂ ಪರದಾಟ

05:38 PM Mar 15, 2022 | Team Udayavani |

ದಾವಣಗೆರೆ: ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದ ದಾವಣಗೆರೆ ಜಿಲ್ಲೆಯ ಎಲ್ಲ 11 ವೈದ್ಯಕೀಯ ವಿದ್ಯಾರ್ಥಿಗಳು ಸುರಕ್ಷಿತವಾಗಿ ವಾಪಾಸಾಗಿದ್ದಾರೆ. ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಲ್ಲ ವಿದ್ಯಾರ್ಥಿಗಳು, ವೈದ್ಯಕೀಯ ವಿಧ್ಯಾಬ್ಯಾಸಕ್ಕೆಂದು ಉಕ್ರೇನ್‌ಗೆ ತೆರಳಿದ್ದು, ಯುದ್ಧದ ಕಾರಣ ವಾಪಸ್‌ ಆಗುವಾಗ ಅನುಭವಿಸಿದ ಕಷ್ಟಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ತಮ್ಮನ್ನು ತಾಯ್ನಾಡಿಗೆ ಸುರಕ್ಷಿತವಾಗಿ ಕರೆ ತಂದಿರುವ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ತೋರಿದ ಕಾಳಜಿಯನ್ನು ಮನದುಂಬಿ ಸ್ಮರಿಸಿದರು.

Advertisement

ಉಕ್ರೇನ್‌ ರಾಜಧಾನಿ ಕೀವ್‌, ಎರಡನೇ ದೊಡ್ಡ ನಗರ ಖಾರ್ಕಿವ್‌, ಪಿಸೋಚಿನ್‌, ಮರಿಯಪೋವ್‌ ಭಾಗಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ನಮಗೆ ಫೆ. 24ರಿಂದ ಆರಂಭವಾದ ಯುದ್ಧ ಭಯಭೀತರನ್ನಾಗಿ ಮಾಡಿತು. ಆಗ ದಿಕ್ಕೇ ತೋಚದಂತಾಯಿತು. ಅನ್ನ, ನೀರಿಗೂ ಪರಿತಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಗಡಿಯ ಗುರಿ ತಲುಪಬೇಕೆಂದರೆ ನೂರಾರು ಕಿಲೋಮೀಟರ್‌ ನಡೆದುಕೊಂಡು ಹೋಗಬೇಕಾದ ಸ್ಥಿತಿ ಇತ್ತು. ಎಲ್ಲಿ ನಮ್ಮ ಮೇಲೆ ಬಾಂಬುಗಳು ಬೀಳುತ್ತವೆಯೋ ಎಂಬ ದುಗುಡದ ಮಧ್ಯೆಯೂ ಸುರಕ್ಷಿತವಾಗಿ ಬಂದಿದ್ದೇವೆ ಎಂದು ತಿಳಿಸಿದರು.

ಕುಟುಂಬದವರು, ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಭಾರತೀಯ ಎಂಬೆಸಿ, ದಾವಣಗೆರೆ ಸಂಸದ ಡಾ| ಜಿ.ಎಂ. ಸಿದ್ದೇಶ್ವರ, ಶಾಸಕರು, ಜಿಲ್ಲಾಧಿಕಾರಿಗಳು, ಜಿಲ್ಲಾಡಳಿತ ಎಲ್ಲರೂ ನೀಡಿದ ನೆರವನ್ನು ಎಂದಿಗೂ ಮರೆಯಲಾಗದು. ದುರಾದೃಷ್ಟವಶಾತ್‌ ನವೀನ್‌ನನ್ನು ಕಳಕೊಂಡೆವು. ಅವನನ್ನು ಹೊರತುಪಡಿಸಿ ಎಲ್ಲ ಕನ್ನಡದ ಮಕ್ಕಳು ಸುರಕ್ಷಿತವಾಗಿ ವಾಪಸ್‌ ಬಂದಿದ್ದೇವೆ ಎಂದು ತಮಗಾದ ಅನುಭವಗಳನ್ನು ಹಂಚಿಕೊಂಡರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶದಂತೆ ಉಕ್ರೇನ್‌ನಲ್ಲಿ ತೊಂದರೆಗೆ ಸಿಲುಕಿದ್ದ ವಿದ್ಯಾರ್ಥಿಗಳ ಪೋಷಕರೊಂದಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಯಿತು. ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯದಿಂದ ಮಾಹಿತಿ ಪಡೆದು ನಿರಂತರವಾಗಿ ಪಾಲಕರಿಗೆ ಮಾಹಿತಿ ಒದಗಿಸುವ ಜೊತೆಗೆ ಧೈರ್ಯ ತುಂಬುವ ಕಾರ್ಯ ಮಾಡಲಾಯಿತು. ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಮರಳಿ ಕರೆತರಲಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳ ಪೋಷಕರು ಮಾತನಾಡಿ, ಅತ್ಯಂತ ಸುರಕ್ಷಿತವಾಗಿ ನಮ್ಮ ಮಕ್ಕಳನ್ನು ನಮ್ಮ ಮನೆಗೆ ತಲುಪಿಸಿದ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಋಣಿಯಾಗಿರುತ್ತೇವೆ. ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಸರ್ಕಾರ ನೆರವಿಗೆ ಧಾವಿಸಬೇಕೆಂದು ಮನವಿ ಮಾಡಿದರು. ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್‌ ಇತರರು ಇದ್ದರು.

Advertisement

ಮುಂದಿನ ಶಿಕ್ಷಣದ ಬಗ್ಗೆ ಸರ್ಕಾರದಿಂದ ನಿರ್ಧಾರ
ಇಡೀ ಜಿಲ್ಲಾಡಳಿತ ಒಟ್ಟಾಗಿ ಪ್ರವಾಹದ ಸಂದರ್ಭದಲ್ಲಿ ಕಾರ್ಯ ಚಟುವಟಿಕೆ ಮಾಡುವ ರೀತಿಯಲ್ಲಿ ಕೆಲಸ ಮಾಡಿ ಎಲ್ಲರನ್ನೂ ಅವರ ಮನೆಗೆ ತಲುಪಿಸಿದ್ದೇವೆ. ಮರಳಿ ಬಂದ ಎಲ್ಲ ವಿದ್ಯಾರ್ಥಿಗಳ ಮನೆಗೆ ತೆರಳಿ ಮಾತನಾಡಿಸಿ ಬಂದಿದ್ದೇವೆ. ಉಕ್ರೇನ್‌ ಹಾಗೂ ರಷ್ಯಾ ಬಿಕ್ಕಟ್ಟಿನಿಂದ ತೊಂದರೆಗೆ ಸಿಲುಕಿ ಮರಳಿದ ವಿದ್ಯಾರ್ಥಿಗಳ ಭವಿಷ್ಯದ ವಿದ್ಯಾಭ್ಯಾಸದ ಕುರಿತಂತೆ ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಫೆ. 24ರಂದು ಬೆಳಗಿನ ಜಾವ ಉಕ್ರೇನ್‌ನಲ್ಲಿ ಯುದ್ಧ ಶುರುವಾಗಿದೆ ಎಂಬ ಮಾಹಿತಿ ದೊರೆತ ನಂತರ ಭಯಪಟ್ಟ ನಾವು ನಮ್ಮ ಕಾಲೇಜಿನ ಅಧ್ಯಾಪಕರ ಜೊತೆ ಮಾತನಾಡಿ ಭಾರತದ ರಾಯಭಾರ ಕಚೇರಿಯನ್ನು ಸಂಪರ್ಕಿಸಿದೆವು. ನಾವಿದ್ದ ಪ್ರದೇಶದಿಂದ ಉಕ್ರೇನ್‌ ಗಡಿ ದಾಟಿ ಅಲ್ಲಿಂದ ರುಮೇನಿಯಾ ತಲುಪಿ ಭಾರತಕ್ಕೆ ಮರಳಿದೆವು.
ಸೈಯದ್‌ ಹಬೀಬಾ

ಯುದ್ಧ ಶುರುವಾದ ನಂತರ 22 ಗಂಟೆಗಳ ಕಾಲ ಊಟ ಸಿಗದೆ ಉಪವಾಸ ಇದ್ದೆವು. ಉಕ್ರೇನ್‌ ಗಡಿ ದಾಟಿದ ನಂತರ ಆಹಾರ ದೊರೆಯಿತು. ಉಕ್ರೇನ್‌ ಗಡಿ ದಾಟುವ ಸಂದರ್ಭದಲ್ಲಿ ಭಾರತದ ಧ್ವಜ ನಮಗೆ ರಕ್ಷಣೆ ನೀಡಿತು.
ಪ್ರವೀಣ್‌

ಮರಳಿ ಭಾರತ ಸೇರಿದ್ದು ಖುಷಿ ತಂದಿದೆ. ನಮ್ಮನ್ನು ಮರಳಿ ತರಲು ಶ್ರಮಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇವೆ.
ಮನೋಜ್‌

Advertisement

Udayavani is now on Telegram. Click here to join our channel and stay updated with the latest news.

Next