ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮತ್ತೆ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರಿದಿದ್ದು, ಸೋಮವಾರ 11 ಐಪಿಎಸ್ ಹಿರಿಯ ಅಧಿಕಾರಿಗಳನ್ನು ವಿವಿಧ ವಿಭಾಗಗಳಿಗೆ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶಿಸಿದೆ.
ಡಿಜಿಪಿ ಕೇಂದ್ರ ಕಚೇರಿಯಲ್ಲಿ ಆಡಳಿತ ವಿಭಾಗದಲ್ಲಿ ಎಡಿಜಿಪಿಯಾಗಿದ್ದ ಡಾ| ಅಬ್ದುಲ್ ಸಲೀಂ ಅವರನ್ನು ಬೆಂಗಳೂರು ಸಂಚಾರ ವಿಭಾಗದ ವಿಶೇಷ ಸಂಚಾರ ಆಯುಕ್ತರರಾಗಿ, ಸಿಐಡಿ ಎಡಿಜಿಪಿಯಾಗಿದ್ದ ಉಮೇಶ್ ಕುಮಾರ್ ಅವರನ್ನು ಆಡಳಿತ ವಿಭಾಗದ ಎಡಿಜಿಪಿಯಾಗಿ ವರ್ಗಾಯಿಸಲಾಗಿದೆ.
ಮಂಗಳೂರು ಪಶ್ಚಿಮ ವಲಯದ ಐಜಿಪಿಯಾಗಿದ್ದ ದಿವ್ಯಜ್ಯೋತಿ ರಾಯ್ ಅವರನ್ನು ಕುಂದುಕೊರತೆಗಳು ಮತ್ತು ಮಾನವ ಹಕ್ಕುಗಳ ಇಲಾಖೆಗೆ, ಬೆಂಗಳೂರು ಸಂಚಾರ ವಿಭಾಗದ ಜಂಟಿ ಆಯುಕ್ತರಾಗಿದ್ದ ಡಾ| ಬಿ.ಆರ್. ರವಿಕಾಂತೇ ಗೌಡ ಅವರನ್ನು ಸಿಐಡಿ ಜಂಟಿ ಪೊಲೀಸ್ ಆಯುಕ್ತರ ಹುದ್ದೆಗೆ ಹಾಗೂ ಸಿಐಡಿ ಎಸ್.ಪಿ.ಯಾಗಿದ್ದ ರವಿ ಡಿ.ಚನ್ನಣ್ಣನವರ್ ಅವರನ್ನು ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ವರ್ಗಾಯಿಸಲಾಗಿದೆ. ಸಿಐಡಿ ಎಸ್.ಪಿ. ಆಗಿದ್ದ ಬಿ.ರಮೇಶ್ ಅವರು ಮೈಸೂರು ಪೊಲೀಸ್ ಆಯುಕ್ತರಾಗಿ ವರ್ಗಾಯಿಸಲಾಗಿದೆ.
ರಮಣ ಗುಪ್ತ (ಡಿಐಜಿ ಮತ್ತು ಜಂಟಿ ಆಯುಕ್ತರು, ಗುಪ್ತಚರ, ಬೆಂಗಳೂರು), ಬಿ.ಎಸ್. ಲೋಕೇಶ್ ಕುಮಾರ್ (ಡಿಐಜಿ, ಬಳ್ಳಾರಿ ವಿಭಾಗ ), ಡಾ| ಚಂದ್ರಗುಪ್ತ-(ಡಿಐಜಿ, ಪಶ್ಚಿಮ ವಿಭಾಗ, ಮಂಗಳೂರು), ಡಾ| ಶರಣಪ್ಪ-(ಜಂಟಿ ಪೊಲೀಸ್ ಆಯುಕ್ತ, ಅಪರಾಧ ವಿಭಾಗ, ಬೆಂಗಳೂರು), ಎಂ.ಎನ್.ಅನುಚೇತ್-(ಜಂಟಿ ಪೊಲೀಸ್ ಆಯುಕ್ತ, ಸಂಚಾರ) ವಿಭಾಗಗಗಳಿಗೆ ವರ್ಗಾವಣೆ ಮಾಡಲಾಗಿದೆ.