Advertisement

ಬಿ-ಪ್ಯಾಕ್‌ ಗ್ರೇಡಿಂಗ್‌ನಲ್ಲಿ 11 ಶಾಸಕರು ಫ‌ಸ್ಟ್‌ ಕ್ಲಾಸ್‌

12:01 PM Apr 14, 2018 | |

ಬೆಂಗಳೂರು: ಶಾಂತಿನಗರದ ಎನ್‌.ಎ. ಹ್ಯಾರಿಸ್‌ ಸೇರಿ ಮೂವರು ಡಿಸ್ಟಿಂಕ್ಷನ್‌, 11 ಶಾಸಕರು ಫ‌ಸ್ಟ್‌ ಕ್ಲಾಸ್‌, ಐವರು ಸೆಕೆಂಡ್‌ ಕ್ಲಾಸ್‌, ಎಂಟು ಶಾಸಕರು ಜಸ್ಟ್‌ ಪಾಸ್‌. ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (ಬಿ-ಪ್ಯಾಕ್‌)ಯು ನಗರದ 27 ವಿಧಾನಸಭಾ ಕ್ಷೇತ್ರ (ಆನೇಕಲ್‌ ಹೊರತುಪಡಿಸಿ)ಗಳಲ್ಲಿ ನಡೆಸಿದ ಮೌಲ್ಯಮಾಪನದಲ್ಲಿ ಶಾಸಕರು ಪಡೆದ ಅಂಕಗಳಿವು.

Advertisement

ವಿಧಾನಸಭೆಯಲ್ಲಿ ಶಾಸಕರ ಹಾಜರಾತಿ, ಅಧಿವೇಶನಗಳಲ್ಲಿ ಕೇಳಿದ ಪ್ರಶ್ನೆಗಳು, ಅನುದಾನ ಬಳಕೆ, ವಿದ್ಯಾರ್ಹತೆ, ಅಪರಾಧ ದಾಖಲೆ ಸೇರಿದಂತೆ ಎಂಟು ಮಾನದಂಡಗಳನ್ನು ಆಧರಿಸಿ ಶಾಸಕರ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲಾಗಿದ್ದು, ಇದರಲ್ಲಿ ಶಾಸಕ ಎನ್‌.ಎ. ಹ್ಯಾರಿಸ್‌ 100ಕ್ಕೆ 84 ಅಂಕ ಪಡೆದು ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದರೆ, ಸಚಿವರಾದ ಕೃಷ್ಣ ಭೈರೇಗೌಡ ಮತ್ತು ಕೆ.ಜೆ. ಜಾರ್ಜ್‌ ಕ್ರಮವಾಗಿ ಶೇ. 84 ಮತ್ತು ಶೇ. 87ರಷ್ಟು ಅಂಕ ಗಳಿಸುವ ಮೂಲಕ ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಆದರೆ, ಸಚಿವರಿಗೆ ಇದ್ದ ಒಟ್ಟಾರೆ 55 ಅಂಕಗಳು ಮಾತ್ರ.

 ಕಳೆದ ಐದು ವರ್ಷಗಳಲ್ಲಿ 16 ಅಧಿವೇಶನಗಳು ನಡೆದಿದ್ದು, ಇದರಲ್ಲಿ ಶೇ. 90ಕ್ಕಿಂತ ಹೆಚ್ಚು ಹಾಜರಾತಿ ಹೊಂದಿರುವ ಏಕೈಕ ಶಾಸಕ ಮಲ್ಲೇಶ್ವರದ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ. ಇವರು ಶೇ. 96ರಷ್ಟು ಕಲಾಪಗಳಲ್ಲಿ ಭಾಗವಹಿಸಿದ್ದಾರೆ. 9 ಶಾಸಕರು ಶೇ. 75ರಷ್ಟು ಹಾಗೂ 10 ಶಾಸಕರು ಶೇ. 50ರಿಂದ 75 ಮತ್ತು 8 ಶಾಸಕರು ಕೇವಲ 50ರಷ್ಟು ಅಂಕ ಪಡೆದಿದ್ದಾರೆ. ಈ ಕಲಾಪಗಳಲ್ಲಿ 262 ಚುಕ್ಕೆ ಗುರುತಿನ ಮತ್ತು 3,356 ಚುಕ್ಕೆರಹಿತ ಪ್ರಶ್ನೆಗಳನ್ನು ಕೇಳಲಾಗಿದೆ. 18 ಶಾಸಕರು ಶೇ. 95ರಷ್ಟು “ಶಾಸಕರ ಅಭಿವೃದ್ಧಿ ನಿಧಿ’ಯನ್ನು ಖರ್ಚು ಮಾಡಿದ್ದಾರೆ ಎಂದು ಬಿ-ಪ್ಯಾಕ್‌ ಬಿಡುಗಡೆ ಮಾಡಿದ ಮೌಲ್ಯಮಾಪನ ವರದಿಯಲ್ಲಿ ತಿಳಿಸಿದೆ.

ಕಲಾಪಗಳಲ್ಲಿ ಶಾಸಕರ ಹಾಜರಾತಿ, ಕೇಳಲಾದ ಪ್ರಶ್ನೆಗಳು ಸೇರಿದಂತೆ ಅಧ್ಯಯನಕ್ಕೆ ಅಗತ್ಯವಿರುವ ಎಲ್ಲ ಮಾಹಿತಿಯನ್ನು “ಮಾಹಿತಿ ಹಕ್ಕು ಕಾಯ್ದೆ’ ಅಡಿ ಅಧಿಕಾರಿಗಳಿಂದಲೇ ಪಡೆಯಲಾಗಿದೆ. ಅವುಗಳನ್ನು ವಿಶ್ಲೇಷಣೆ ಮಾಡಿ, ಶಾಸಕರಿಗೆ ಅಂಕಗಳನ್ನು ನೀಡಲಾಗಿದೆ. ಇದು ಶಾಸಕರ ಸಾಧನೆಗೆ ಮಾನದಂಡವಲ್ಲ ಎಂದು ಬಿ-ಪ್ಯಾಕ್‌ ಉಪಾಧ್ಯಕ್ಷ ಟಿ.ವಿ. ಮೋಹನ್‌ದಾಸ್‌ ಪೈ ಸ್ಪಷ್ಟಪಡಿಸಿದರು.

ಅಪರಾಧ ಪ್ರಕರಣಗಳು: ನಗರದ 27 ಶಾಸಕರಲ್ಲಿ ಆರ್‌. ಅಶೋಕ್‌ ಮತ್ತು ಬೈರತಿ ಬಸವರಾಜು ಮತ್ತು ಆರ್‌. ಅಶೋಕ ಅವರು ನಾಲ್ಕು ಅಪರಾಧ ಪ್ರಕರಣಗಳನ್ನು ಹೊಂದಿದ್ದಾರೆ ಎಂದು ಬಿ-ಪ್ಯಾಕ್‌ ತನ್ನ ಮೌಲ್ಯಮಾಪನ ವರದಿಯಲ್ಲಿ ತಿಳಿಸಿದೆ. ಒಟ್ಟಾರೆ 27ರಲ್ಲಿ 19 ಶಾಸಕರು ಯಾವುದೇ ಅಪರಾಧ ಪ್ರಕರಣಗಳನ್ನು ಹೊಂದಿಲ್ಲ. ಉಳಿದವರ ವಿರುದ್ಧ ಪ್ರಕರಣಗಳಿದ್ದರೂ, ಗಂಭೀರವಾದವುಗಳಲ್ಲ. ಆದರೆ, ಈ ಇಬ್ಬರು ಶಾಸಕರ ಮೇಲಿರುವ ನಾಲ್ಕು ಪ್ರಕರಣಗಳನ್ನು ಎಡಿಆರ್‌-ದಕ್‌ ಸಂಸ್ಥೆ ಪ್ರಕಟಿಸಿದ ವರದಿಯನ್ನು ಆಧಾರದ ಮೇಲೆ ಪರಿಗಣಿಸಲಾಗಿದೆ ಎಂದು ರೇವತಿ ಅಶೋಕ್‌ ಸ್ಪಷ್ಟಪಡಿಸಿದರು.

Advertisement

ಸಾಮಾಜಿಕ ಜಾಲತಾಣ; ಫ‌ುಲ್‌ ಮಾರ್ಕ್ಸ್!: ಎಲ್ಲ 27 ಶಾಸಕರೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಹಾಗಾಗಿ, ಇದರಲ್ಲಿ ಬಹುತೇಕ ಎಲ್ಲರಿಗೂ ಫ‌ುಲ್‌ ಮಾರ್ಕ್ಸ್ ಸಿಕ್ಕಿವೆ! ಫೇಸ್‌ಬುಕ್‌, ಟ್ವಿಟರ್‌, ವಾಟ್ಸ್‌ಆ್ಯಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಜನರ ಕುಂದು-ಕೊರತೆಗಳಿಗೆ ಶಾಸಕರೆಲ್ಲರೂ ಸ್ಪಂದಿಸುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಚುನಾವಣಾ ಚರ್ಚೆಗಳಲ್ಲಿ ವಸ್ತುನಿಷ್ಠತೆ ತರಲು ಮತ್ತು ಮತದಾರರನ್ನು ತಮ್ಮ ಚುನಾಯಿತ ಪ್ರತಿನಿಧಿಗಳೊಂದಿಗೆ ತೊಡಗಿಸಿಕೊಳ್ಳುವುದಕ್ಕೆ ಪ್ರೋತ್ಸಾಹಿಸುವುದು ವರದಿಯ ಉದ್ದೇಶ.
-ರೇವತಿ ಅಶೋಕ್‌, ಬಿ-ಪ್ಯಾಕ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next