Advertisement

ಸೈಬರ್ ಪೊಲೀಸರಿಂದ 11 ಪ್ರಕರಣ ಪತ್ತೆ: 24.45 ಲಕ್ಷ ರೂ. ಹಣ ವಶಕ್ಕೆ

09:13 PM Sep 14, 2022 | Team Udayavani |

ವಿಜಯಪುರ : ಜಿಲ್ಲೆಯ ಸೈಬರ್ ಪೊಲೀಸರು ಸೈಬರ್-ಆರ್ಥಿಕ ಅಪರಾಧ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಆನ್‍ಲೈನ್ ಮೂಲಕ ವಂಚನೆ ಮಾಡಿದ್ದ ಹಣವನ್ನೂ ಬಾಧಿತರಿಗೆ ಮರಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಅನ್‍ಲೈನ್ ಮೂಲಕ ನಡೆಯುವ ಸೈಬರ್ ಆರ್ಥಿಕ ವಂಚನೆ ಪ್ರಕರಣ ಪತ್ತೆ ಅಸಾಧ್ಯ ಎಂಬ ಸಾಮಾನ್ಯ ಮಾತನ್ನು ಜಿಲ್ಲೆಯ ಸೈಬರ್ ಕ್ರೈಂ ವಿಭಾಗದ ಪೊಲೀಸರು ಸುಳ್ಳಾಗಿಸಿದ್ದಾರೆ.

Advertisement

ವಿಜಯಪುರ ಜಿಲ್ಲೆಯ ಡಿಸಿಐಬಿ ವಿಭಾಗದ ಡಿಎಸ್ಪಿ ಜೆ.ಎಸ್.ನ್ಯಾಮಗೌಡ ಹಾಗೂ ಸೈಬರ್ ಆರ್ಥಿಕ ಹಾಗೂ ಮಾದಕ ದ್ರವ್ಯಗಳ ಅಪರಾಧ ವಿಭಾಗದ ಸಿಪಿಐ ರಮೇಶ ಅವಜಿ ನೇತೃತ್ವದ ಪಿಎಸ್‍ಐ ಪಿ.ವೈ.ಅಂಬಿಗೇರ, ಎ.ಎನ್.ಗುಡ್ಡೋಡಗಿ ಹಾಗೂ ಅವರ ತಂಡ ಸೈಬರ್ ಅಪರಾಧ ಬೇಧಿಸುವ ಜೊತೆಗೆ ವಂಚನೆಯಿಂದ ಸಂಪಾದಿಸಿದ್ದ ಹಣವನ್ನು ಮರಳಿ ತರುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.

ಜಿಲ್ಲೆಯಲ್ಲಿ ಬ್ಯಾಂಕುಗಳ ಕೆವೈಸಿ, ಎಟಿಎಂ ನವೀಕರಣದ ಹೆಸರಿನಲ್ಲಿ ಓಟಿಪಿ ಪಡೆಯುವುದು ಫಿಶಿಂಗ್ ಕೃತ್ಯದ ಮೂಲಕ ವಂಚಿಸುವುದು, ಉದ್ಯೋಗ, ಬಹುಮಾನ, ಉಡುಗೊರೆ ನೆಪದಲ್ಲಿ ಆನ್‍ಲೈನ್ ಮೂಲಕ ಸಂಪರ್ಕಿಸಿ ವಿಶಿಂಗ್ ಆರ್ಥಿಕ ವಂಚನೆ ಮಾಡುವುದು ಹಾಗೂ ಮೂಲ ಗ್ರಾಹಕ ಬಳಸದಿದ್ದರೂ ಅವರ ಎಟಿಎಂ ಕಾರ್ಡ್ ದತ್ತಾಂಶ ಕದ್ದು ನಕಲಿ ಕಾರ್ಡ್ ಸೃಷ್ಟಿಸಿಕೊಂಡು ಸ್ಕಿಮ್ಮಿಂಗ್ ಮೂಲಕ ಆರ್ಥಿಕ ವಂಚಿಸುವಂಥ ಪ್ರಮುಖ ಪ್ರಕರಣಗಳನ್ನು ಬೇಧಿಸಿದ್ದಾರೆ.

ಜಿಲ್ಲೆಯಲ್ಲಿ ಇಂಥ ವಿವಿಧ ಸ್ವರೂಪದ ಸೈಬರ್ ವಂಚನೆ ಕುರಿತು ದಾಖಲಾಗಿದ್ದ 31 ಪ್ರಕರಣಗಳಲ್ಲಿ 39.99 ಲಕ್ಷ ರೂ. ಆರ್ಥಿಕ ವಂಚನೆಯಾಗಿತ್ತು. ಇದರಲ್ಲಿ 11 ಪ್ರಕರಣಗಳನ್ನು ಬೇಧಿಸಿರುವ ಸೈಬರ್ ಕ್ರೈಂ ಪೊಲೀಸರು 24.45 ಲಕ್ಷ ರೂ. ಹಣವನ್ನು ಮರಳಿ ವಂಚಿತರಾಗಿದ್ದ ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿಸಿ, ಸಾಧನೆ ಮಾಡಿದ್ದಾರೆ.

ಸೈಬರ್ ವಂಚಕರಿಂದ ಹಣ ಕಳೆದುಕೊಂಡವರು ವಂಚನೆಯಾದ ತಕ್ಷಣ ದೂರುದಾರರು 1 ಗಂಟೆಯಲ್ಲಿ ಪ್ರಕರಣ ದಾಖಲಿಸಿದ್ದರಿಂದ ಎಂಎಚ್‍ಎ ನ್ಯಾಷನಲ್ ಸೈಬರ್ ಕ್ರೈಂ ಪೋರ್ಟಲ್-1930 ಸಹಾಯದಿಂದ ಪ್ರಕರಣವನ್ನು ಸುಲಭವಾಗಿ ಪತ್ತೆಹಚ್ಚಿ, ಅಮಾಯಕರ ಹಣ ವಂಚಕರ ಪಾಲಾಗುವುದನ್ನು ತಪ್ಪಿಸುವಲ್ಲಿ ಸಹಕಾರಿ ಆಗಿದೆ.

Advertisement

ಮತ್ತೊಂದೆಡೆ 2022 ರಲ್ಲಿ ದಾಖಲಾಗಿದ್ದ 10 ಪೆಟಿಶನ್‍ಗಳನ್ನು ಬೇಧಿಸಿರುವ ಸೈಬರ್ ಕ್ರೈಂ ಪೊಲೀಸರು, ವಂಚನೆಯಾಗಿದ್ದ 6.15 ಲಕ್ಷ ರೂ. ಹಣದಲ್ಲಿ 4.50 ಲಕ್ಷ ರೂ. ಹಣವನ್ನು ದೂರುದಾರರಿಗೆ ಮರಳಿಸುವ ಮೂಲಕ ಸೈಬರ್ ಕ್ರೈಂ ಕೃತ್ಯದಲ್ಲಿ ತೊಡಗಿದವರಿಗೆ ಎಚ್ಚರಿಕೆ ನೀಡಿದ್ದಾರೆ.

ಇತ್ತ ಎಂಎಚ್‍ಎ ನ್ಯಾಷನಲ್ ಸೈಬರ್ ಕ್ರೈಂ ಪೋರ್ಟಲ್-1930 ಸಹಾಯವಾಣಿಗೆ ಕರೆ ಮಾಡಿದ್ದ 10 ಪ್ರಕರಣಗಳಲ್ಲಿ 4.62 ಲಕ್ಷ ರೂ. ಹಣವನ್ನು ಬಾಧಿತರ ಬ್ಯಾಂಕ್ ಖಾತೆಗೆ ಜಮೆ ಮಾಡಿಸಿದ್ದಾರೆ.

ಬುಧವಾರ ಸೈಬರ್ ಕ್ರೈಂ ಪ್ರಕರಣ ಪತ್ತೆ ಮಾಡಿದ ತನಿಖಾ ತಂಡಕ್ಕೆ ನಗದು ಬಹುಮಾನ ಹಾಗೂ ಸೈಬರ್ ಆರ್ಥಿಕ ವಂಚನೆಗೊಳಗಾಗಿದ್ದ ಬಾಧಿತರಿಗೆ ಹಣ ಮರಳಿಸಿ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಆನಂದಕುಮಾರ, ಜಿಲ್ಲೆಯಲ್ಲಿ ಸೈಬರ್ ಅಪರಾಧ ಕೃತ್ಯಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುವ ನಮ್ಮ ಪೊಲೀಸರು ಜನಸ್ನೇಹಿ ಪೊಲೀಸ್ ಎಂಬುದನ್ನು ಸಾಬೀತು ಮಾಡಿದ್ದಾರೆ. ಇದಕ್ಕಾಗಿ ಇಡೀ ತನಿಖಾ ತಂಡವನ್ನು ಅಭಿನಂದಿಸುವುದಾಗಿ ಹೇಳಿದರು.

ವಿಶ್ವದ ಯಾವುದೋ ಮೂಲೆಯಲ್ಲಿ ಕುಳಿತು ಅನ್‍ಲೈನ್ ಮೂಲಕ ವಂಚಿಸುವ ಸೈಬರ್ ಕ್ರೈಂ ಅಪರಾಧಿಗಳನ್ನು ಪತ್ತೆ ಮಾಡುವುದು ಸುಲಭದ ಕೆಲಸವಲ್ಲ. ಅಲ್ಲದೇ ನಕಲಿ ಗುರುತು, ನಕಲಿ ದಾಖಲೆ, ನಕಲಿ ನೆಲೆಗಳ ಮೂಲಕ ವಂಚನೆ ಮಾಡುವುದು ಸೈಬರ್ ಅಪರಾಧ ವೈಶಿಷ್ಟ್ಯ ಎಂದರು.

ಸೈಬರ್ ಕ್ರೈಂ ವಂಚಿತರು ತುರ್ತಾಗಿ ದೂರು ದಾಖಲಿಸಿದಲ್ಲಿ ನೊಂದವರ ಹಣ ವಂಚಿತರ ಪಾಲಾಗುವುದನ್ನು ತಡೆಯಲು ಸಾಧ್ಯವಿದೆ. ಆದರೆ ಪ್ರಕರಣ ಪತ್ತೆಹೆಚ್ಚಿ ಹಣ ಮರಳಿ ಪಡೆಯುವಲ್ಲಿ ಯಶಸ್ವಿಯಾದರೂ ಕೃತ್ಯ ಎಸಗಿದವರನ್ನು, ಭಾಗಿಯಾದವರನ್ನು ಬಂಧಿಸುವುದು ಸಾಧ್ಯವಿಲ್ಲ. ಹೀಗಾಗಿ ಈ ಪ್ರಕರಣಗಳಲ್ಲಿ ಸೈಬರ್ ವಂಚಕರನ್ನು ಬಂಧಿಸಲು ಸಾಧ್ಯವಾಗಿಲ್ಲ ಎಂದರು.

ಜಿಲ್ಲೆಯ ಜನರು ವಿಡಿಯೋಕಾಲ್, ವಾಟ್ಸಾಪ್, ಫೆಸ್‍ಬುಕ್, ಟ್ವಿಟರ್ ಸೇರಿದಂತೆ ಇತರೆ ಸಾಮಾಜಿಕ ಜಾಲಗಳ ಮೂಲಕ ಸೈಬರ್ ವಂಚನೆ ನಡೆಯುತ್ತಿದ್ದು, ನಕಲಿಗಳೊಂದಿಗೆ ವ್ಯವಹರಿಸಿದೆ ಎಚ್ಚರಿಕೆ ವಹಿಸಬೇಕು ಎಂಉ ಮನವಿ ಮಾಡಿದರು.

ಎಎಸ್ಪಿ ರಾಮ ಅರಸಿದ್ಧಿ, ವಿಜಯಪುರ ಜಿಲ್ಲೆಯ ಡಿಸಿಐಬಿ ವಿಭಾಗದ ಡಿಎಸ್ಪಿ ಜೆ.ಎಸ್.ನ್ಯಾಮಗೌಡ ಹಾಗೂ ಸೈಬರ್ ಆರ್ಥಿಕ ಹಾಗೂ ಮಾದಕ ದ್ರವ್ಯಗಳ ಅಪರಾಧ ವಿಭಾಗದ ಸಿಪಿಐ ರಮೇಶ ಅವಜಿ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next