ಕುಂದಾಪುರ: ಗುಡ್ಡ ಮ್ಮಾಡಿಯಲ್ಲಿ ಬಾವಿ ಕೆಲಸ ಮಾಡುತ್ತಿದ್ದಾಗ ಆಯ ತಪ್ಪಿ ಬಾವಿಗೆ ಬಿದ್ದ ವ್ಯಕ್ತಿ ಹಾಗೂ ಅವರನ್ನು ರಕ್ಷಿಸಲು ಇಳಿದವರು ಆಮ್ಲಜನಕ ಕೊರತೆಯಿಂದ ಅಸ್ವಸ್ಥಗೊಂಡಿದ್ದು, ಈ ವೇಳೆ ಅಲ್ಲಿಗೆ ಬಂದ ಕಿರಿಮಂಜೇಶ್ವರ 108 ಆ್ಯಂಬುಲೆನ್ಸ್‌ನ ಚಾಲಕ ಶ್ರೀಧರ್ ಅವರು ಜೀವದ ಹಂಗು ತೊರೆದು ಬಾವಿ ಗಿಳಿದು ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದರು.
ಆ್ಯಂಬುಲೆನ್ಸ್ ಚಾಲಕ ಶ್ರೀಧರ್ ಅವರ ಸಮಯ ಪ್ರಜ್ಞೆಯು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.
11 ಗಂಟೆ ಸುಮಾರಿಗೆ ಕಿರಿಮಂಜೇಶ್ವರ 108 ಆ್ಯಂಬುಲೆನ್ಸ್ ವಾಹನಕ್ಕೆ ಸೇನಾಪುರ ಗ್ರಾಮದ ಗುಡ್ಡಮ್ಮಾಡಿಯಲ್ಲಿ ಬಾವಿಗೆ ಬಿದ್ದ ಪ್ರಕರಣದ ಕುರಿತಂತೆ ಕರೆ ಬರುತ್ತದೆ. ಕೂಡಲೇ ಅಲ್ಲಿಗೆ ಆಗಮಿಸಿದ 108 ಚಾಲಕ ಶ್ರೀಧರ್ ಹಾಗೂ ಸಿಬಂದಿ ನೋಡುವಾಗ ಇಬ್ಬರು ಕೂಡ ಬಾವಿಯಲ್ಲಿ ಅಸ್ವಸ್ಥರಾಗಿದ್ದರು. ಈ ವೇಳೆ ಅಗ್ನಿಶಾಮಕ ದಳದವರು ಬರುವವರೆಗೆ ಕಾಯುವಷ್ಟು ಸಮಯವಿಲ್ಲವಾದ್ದರಿಂದ ಹಿಂದೆ ಮುಂದೆ ನೋಡದ ಚಾಲಕ ಶ್ರೀಧರ್ ಬಾವಿಗೆ ಇಳಿದಿದ್ದಾರೆ. ಮೊದಲಿಗೆ ವಾಲ್ಟರ್ ಡಿ’ಅಲ್ಮೇಡಾ ಅವರನ್ನು ನಾಜೂಕಾಗಿ ಮೇಲಕ್ಕೆತ್ತುವ ಕೆಲಸ ಮಾಡಿದ್ದಾರೆ. ಬಳಿಕ ಇನ್ನೊಬ್ಬರನ್ನು ಸ್ಥಳೀಯರೊಂದಿಗೆ ಸೇರಿ ಮೇಲಕ್ಕೆತ್ತಿದ್ದಾರೆ. ಇಬ್ಬರನ್ನು ಮೇಲಕ್ಕೆತ್ತಿದ ಬಳಿಕ ಸ್ಥಳದಲ್ಲಿ ಕಿರಿಮಂಜೇಶ್ವರದ ಸ್ಟಾಫ್ ನರ್ಸ್ (ಇಎಂಟಿ) ಸಹನಾ ಅವರು ಪ್ರಾಥಮಿಕ ಚಿಕಿತ್ಸೆ ವ್ಯವಸ್ಥೆ ಮಾಡಿ ತತ್‌ಕ್ಷಣ ಆಸ್ಪತ್ರೆಗೆ ಸಾಗಿಸಲು ಮುಂದಾದರೂ ಕೂಡ ಅಷ್ಟರಲ್ಲಾಗಲೇ ವಾಲ್ಟರ್ ಮೃತಪಟ್ಟಿದ್ದರು.
ಆ್ಯಂಬುಲೆನ್ಸ್ ಚಾಲಕ ಶ್ರೀಧರ್ ಹಾಗೂ ಸ್ಟಾಪ್ ನರ್ಸ್ ಸಹನಾ ಅವರ ಸಮಯೋಚಿತ ಕಾರ್ಯದಿಂದಾಗಿ ಬಾವಿಯೊಳಗೆ ಅಸ್ವಸ್ಥಗೊಂಡಿದ್ದ ಅಲ್ಬನ್ ಅಲ್ಮೇಡ ಅವರನ್ನು ಬದುಕಿಸಲು ಸಾಧ್ಯವಾಗಿದ್ದು, ಇವರ ಈ ಕೆಲಸಕ್ಕೆ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.