ಬೆಂಗಳೂರು: ಸುಳ್ಳು ದಾಖಲೆ ಸೃಷ್ಟಿ, ಆ್ಯಂಬುಲೆನ್ಸ್‌ಗಳ ಅಸಮರ್ಪಕ ನಿರ್ವ ಹಣೆ, ಸರಕಾರಕ್ಕೆ ಮಾಹಿತಿ ನೀಡದೆ ಗೌಪ್ಯವಾಗಿ ಸಿಬಂದಿ ನೇಮಕ ಸಹಿತ ನಾನಾ ಲೋಪಗಳ ಹಿನ್ನೆಲೆಯಲ್ಲಿ ‘108-ಆರೋಗ್ಯ ಕವಚ’ ಸೇವೆ ನಿರ್ವಹಣೆ ಸಂಬಂಧ ಜಿವಿಕೆ- ಇಎಂಆರ್‌ಐ ಸಂಸ್ಥೆಯೊಂದಿಗಿನ ಒಡಂಬಡಿಕೆಯನ್ನು ಜು. 14ರಿಂದ ಜಾರಿಗೆ ಬರುವಂತೆ ರಾಜ್ಯ ಸರಕಾರ ರದ್ದುಪಡಿಸಿದೆ. ನಿಯಮಾನುಸಾರ ಒಡಂಬಡಿಕೆ ರದ್ದಾದ ಅನಂತರವೂ ಮೂರು ತಿಂಗಳು ಜಿವಿಕೆ- ಇಎಂಆರ್‌ಐ ಸಂಸ್ಥೆಯೇ ಯಥಾಸ್ಥಿತಿಯಲ್ಲಿ ನಿರ್ವಹಣೆ ಮಾಡಬೇಕಿದ್ದು, ಅದರಂತೆ ಮುಂದಿನ ಅಕ್ಟೋಬರ್ 13ರವರೆಗೆ ಸೇವೆ ಮುಂದುವರಿಯಲಿದೆ. ಈ ನಡುವೆ ಹೊಸ ಟೆಂಡರ್ ಪ್ರಕ್ರಿಯೆಗೆ ಸಿದ್ಧತೆ ನಡೆದಿದ್ದು, ಮೂರು ತಿಂಗಳಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆರೋಗ್ಯ ಇಲಾಖೆ ಸಜ್ಜಾಗಿದೆ.
ತುರ್ತು ಚಿಕಿತ್ಸೆಗೆಂದು ಉಚಿತವಾಗಿ ಆ್ಯಂಬುಲೆನ್ಸ್ ಸೇವೆ ಒದಗಿಸುವ ‘108- ಆರೋಗ್ಯ ಕವಚ’ ಯೋಜನೆಯನ್ನು ರಾಜ್ಯ ಸರಕಾರ 2008ರಲ್ಲಿ ಜಾರಿಗೊಳಿಸಿತು. ಅದರಂತೆ 10 ವರ್ಷ ಸೇವಾ ನಿರ್ವಹಣೆ ಸಂಬಂಧ ರಾಜ್ಯ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ಮತ್ತು ಸಿಕಂದರಾಬಾದ್‌ನ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್ ರಿಸರ್ಚ್ ಇನ್‌ಸ್ಟಿಟ್ಯೂಟ್ ನೊಂದಿಗೆ (ಇಎಂಆರ್‌ಐ) 2008ರ ಆ.14ರಂದು ಒಡಂಬಡಿಕೆ ಏರ್ಪಟ್ಟಿತ್ತು. ಆದರೆ 1 ವರ್ಷ ಬಾಕಿಯಿರುವಂತೆಯೇ ಒಡಂಬಡಿಕೆ ರದ್ದತಿಗೆ ಸರಕಾರ ನೋಟಿಸ್ ನೀಡಿದೆ.
ಗಂಭೀರ ಲೋಪ: ನಿಯಮಾನುಸಾರ ಆ್ಯಂಬುಲೆನ್ಸ್‌ಗಳನ್ನು ನಿರ್ವಹಣೆ ಮಾಡದಿರುವುದು, ತುರ್ತು ಚಿಕಿತ್ಸೆಗೆ ಸ್ಪಂದಿಸಿರುವುದಾಗಿ ಸುಳ್ಳು ದಾಖಲೆ ಸೃಷ್ಟಿಸಿರುವುದು, ಆ್ಯಂಬುಲೆನ್ಸ್ ಸಂಚರಿಸದಿದ್ದರೂ ಹೆಚ್ಚುವರಿ ದೂರ ಕ್ರಮಿಸಿರುವುದಾಗಿ ನಕಲಿ ದಾಖಲೆ ಸಲ್ಲಿಸಿರುವುದು, ಸಿಬಂದಿ ಮೇಲೆ ಒತ್ತಡ ಹೇರಿ ಹೆಚ್ಚಿನ ಅವಧಿ ದುಡಿಸಿಕೊಳ್ಳುವುದು, ಕ್ಷುಲ್ಲಕ ಕಾರಣಕ್ಕೆ ವರ್ಗಾವಣೆ/ ಸೇವೆಯಿಂದ ವಜಾಗೊಳಿಸುವುದು, ಸರಕಾರಕ್ಕೆ ಹುದ್ದೆ ಖಾಲಿ ಇಲ್ಲ ಎಂದು ಹೇಳಿ ಗುಟ್ಟಾಗಿ ಸಿಬಂದಿ ನೇಮಿಸಿಕೊಳ್ಳುವುದು ಸೇರಿದಂತೆ ಇನ್ನಿತರ ಲೋಪಗಳನ್ನು ಗಂಭೀರವಾಗಿ ಪರಿಗಣಿಸಿದೆ.
ಈ ಲೋಪಗಳ ಸಂಬಂಧ ಸರಕಾರ, ಇಲಾಖೆಯ ಹಿರಿಯ ಅಧಿಕಾರಿಗಳು ನೀಡಿರುವ ಹಲವು ಸೂಚನೆಗಳನ್ನು ಪಾಲಿಸದ ಸಂಸ್ಥೆಗೆ ಕಾರಣ ಕೇಳಿ ನೋಟಿಸ್ ನೀಡಿ ಹಲವು ಬಾರಿ ಕಾಲಾವಕಾಶ ನೀಡಿದರೂ ಸಮರ್ಪಕ ನಿರ್ವಹಣೆಗೆ ಗಮನ ನೀಡಿರಲಿಲ್ಲ. ಇದರಿಂದ ಆರೋಗ್ಯ ಕವಚ ಸೇವೆಯ ಮೂಲ ಉದ್ದೇಶ ಈಡೇರದೆ ಗುಣಮಟ್ಟದ ಸೇವೆ ಸಿಗುವ ನಿರೀಕ್ಷೆಯಿಲ್ಲದ ಕಾರಣ ಒಡಂಬಡಿಕೆ ರದ್ದುಪಡಿಸಿ ನೋಟಿಸ್ ನೀಡಿದೆ.
ಹೊಸ ಸಂಸ್ಥೆ ನೇಮಕಕ್ಕೆ ಸಿದ್ಧತೆ : 2008ರಲ್ಲಿ ‘108 – ಆರೋಗ್ಯ ಕವಚ’ ಯೋಜನೆ ಜಾರಿಯಾದಾಗ 150 ಆ್ಯಂಬುಲೆನ್ಸ್‌ಗಳಿತ್ತು. ವಾರ್ಷಿಕ 34 ಕೋಟಿ ರೂ. ವೆಚ್ಚವಾಗುತ್ತಿತ್ತು. ಸದ್ಯ 711 ಆ್ಯಂಬುಲೆನ್ಸ್ ಗಳಿದ್ದು, ವಾರ್ಷಿಕ 140 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ‘108- ಆರೋಗ್ಯ ಕವಚ’ ಯೋಜನೆಯಡಿಯ 711 ಆ್ಯಂಬುಲೆನ್ಸ್‌ಗಳು ಹಾಗೂ ರಾಜ್ಯ ಸರ್ಕಾರದ 827 ಆ್ಯಂಬುಲೆನ್ಸ್‌ಗಳನ್ನು ಒಟ್ಟುಗೂಡಿಸಿ ಆರೋಗ್ಯ ಕವಚ ಸೇವೆಯನ್ನು ಮುಂದಿನ ಐದು ವರ್ಷಗಳ ನಿರ್ವಹಣೆಗೆ ಹೊಸ ಸಂಸ್ಥೆಯ ನೇಮಕಕ್ಕೆ ಸಿದ್ಧತೆ ನಡೆದಿದೆ. 2008ರಲ್ಲಿ ಟೆಂಡರ್ ಕರೆಯದೇ ನೇರವಾಗಿ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದರಿಂದ ನೋಟಿಸ್ ಮೂಲಕವೇ ಒಪ್ಪಂದ ರದ್ದುಪಡಿಸಲಾಗಿದೆ.
ರದ್ದತಿಗೆ ಕಾರಣವಾದ ಅಂಶ
ಜಿವಿಕೆ- ಇಎಂಆರ್‌ಐ ಸಂಸ್ಥೆಯು ಆರೋಗ್ಯ ಕವಚ ಸೇವೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬುದು ಒಡಂಬಡಿಕೆ ರದ್ದತಿಗೆ ಪ್ರಮುಖವಾದ ಕಾರಣ. ಯೋಜನೆಯಡಿ ಕಾರ್ಯನಿರ್ವಹಿಸುವ ಸಿಬಂದಿಯ ಸಮಸ್ಯೆ ನಿವಾರಿಸದಿರುವುದು, ಸಿಬಂದಿ ಮೇಲೆ ಸಂಸ್ಥೆಗೆ ನಿಯಂತ್ರಣವಿಲ್ಲದಿರುವುದು, ಒಡಂಬಡಿಕೆಯಂತೆ ಸಿಬಂದಿಯನ್ನು ನೇಮಿಸಿಕೊಳ್ಳದಿರುವುದು ಸೇರಿದಂತೆ ಇತರ ಲೋಪಗಳನ್ನು ಸರಕಾರ ಪರಿಗಣನೆಗೆ ತೆಗೆದುಕೊಂಡಿದೆ.
108- ಆರೋಗ್ಯ ಕವಚ ಸೇವೆಯನ್ನು ಸಮರ್ಪಕವಾಗಿ ಒದಗಿಸದ ಹಿನ್ನೆಲೆಯಲ್ಲಿ ಜಿವಿಕೆ- ಇಎಂಆರ್‌ಐ ಸಂಸ್ಥೆಯೊಂದಿಗಿನ ಒಡಂಬಡಿಕೆಯನ್ನು ರದ್ದುಪಡಿಸಿ ಜು.14ರಂದು ನೋಟಿಸ್ ನೀಡಲಾಗಿದೆ.
– ಸುಬೋಧ್ ಯಾದವ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದ ಆಯುಕ್ತ
— ಎಂ.ಕೀರ್ತಿಪ್ರಸಾದ್