Advertisement

ಪಿಯು ಅರ್ಧಕ್ಕೆ ಮೊಟಕುಗೊಳಿಸಿದ 104 ಬಾಲಕಿಯರು

01:03 PM Oct 04, 2022 | Team Udayavani |

ಉಡುಪಿ: ರಾಜ್ಯದಲ್ಲಿ ಹಿಜಾಬ್‌ ಕಾರಣವೂ ಸೇರಿದಂತೆ ವಿವಿಧ ಕಾರಣಗಳಿಂದಾಗಿ 2021-22ನೇ ಸಾಲಿನಲ್ಲಿ 1,010 ವಿದ್ಯಾರ್ಥಿನಿಯರು ಪಿಯುಸಿ ಶಿಕ್ಷಣವನ್ನು ಮೊಟಕುಗೊಳಿಸಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೂರು ವಿದ್ಯಾರ್ಥಿನಿಯರು ಪ್ರಥಮ ಪಿಯುಸಿ ಹಾಗೂ 4 ವಿದ್ಯಾರ್ಥಿನಿಯರು ದ್ವಿತೀಯ ಪಿಯುಸಿಯನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ.

Advertisement

ಇದರಲ್ಲಿ ಉಡುಪಿ ಜಿಲ್ಲೆಯ 15 ಹಾಗೂ ದ.ಕ.ದ 89 ವಿದ್ಯಾರ್ಥಿನಿಯರು ಸೇರಿದ್ದಾರೆ. ಉಡುಪಿ ನಗರದ ಸರಕಾರಿ ಪ.ಪೂ. ಕಾಲೇಜಿನಿಂದ ಆರಂಭವಾದ ಹಿಜಾಬ್‌ ಪ್ರಕರಣ ದೇಶಾದ್ಯಂತ ಸುದ್ದಿಯಾಗಿತ್ತು. ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮಂಗಳೂರು ತಾಲೂಕಿನ 48, ಬೆಳ್ತಂಗಡಿಯ 6, ಬಂಟ್ವಾಳದ 17, ಪುತ್ತೂರಿನ 14, ಉಡುಪಿಯ 5, ಕಾರ್ಕಳದ 1 ಹಾಗೂ ಕುಂದಾಪುರ ತಾಲೂಕಿನ 9 ವಿದ್ಯಾರ್ಥಿನಿಯರು ಮತ್ತು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಮಂಗಳೂರಿನ 3 ಮತ್ತು ಬೆಳ್ತಂಗಡಿಯ ಓರ್ವ ವಿದ್ಯಾರ್ಥಿನಿ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಕಾಲೇಜು ಶಿಕ್ಷಣ ಮೊಟಕುಗೊಳಿಸಿದ್ದಾರೆ.  2022-23ನೇ ಸಾಲಿನಲ್ಲಿ ಪುನರ್‌ ದಾಖಲಾತಿ ಪಡೆದಿದ್ದಾರೆಯೇ ಅಥವಾ ಖಾಸಗಿ ವ್ಯವಸ್ಥೆಯ ಮೂಲಕ ನೇರವಾಗಿ ಪರೀಕ್ಷೆ ಬರೆಯಲಿದ್ದಾರೆಯೇ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

ಹಿಜಾಬ್‌ ಕಾರಣದಿಂದಲೇ ಎಲ್ಲ ವಿದ್ಯಾರ್ಥಿನಿಯರು ಶಿಕ್ಷಣ ಮೊಟಕುಗೊಳಿಸಿದ್ದಾರೆ ಎಂದು ಹೇಳಲಾಗದು. ಇದರ ಹೊರತಾಗಿ ಬೇರೆ ಕಾರಣವೂ ಇರಬಹುದು ಎಂದು ಪಿಯು ಇಲಾಖೆಯ ಮೂಲಗಳು ತಿಳಿಸಿವೆ.

ಪಿಯು ಅರ್ಧಕ್ಕೆ ಮೊಟಕುಗೊಳಿಸಿದ 104 ಬಾಲಕಿಯರು ಹೊರಗುಳಿದ ಶಾಲಾ ವಿದ್ಯಾರ್ಥಿಗಳು ನ್ಯಾಯಾಲಯದ ನಿರ್ದೇಶನದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ಯ ಇಲಾಖೆ, ನಗರಾಭಿವೃದ್ಧಿ ಇಲಾಖೆಯ ಮೂಲಕ ಶಾಲಾ ಶಿಕ್ಷಣ ವಂಚಿತ ಮಕ್ಕಳ ಸರ್ವೇ ಪ್ರಕ್ರಿಯೆ ನಡೆಸಲಾಗಿದೆ.

ಕೊರೊನಾ ಅನಂತರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ 652 ಮಕ್ಕಳು ಶಾಲೆಯನ್ನು ತೊರೆದಿದ್ದು, ಅದರಲ್ಲಿ 348 ಮಕ್ಕಳನ್ನು ಪುನಃ ಶಾಲೆಗೆ ದಾಖಲಿಸಲಾಗಿದೆ. 6 ರಿಂದ 14 ವರ್ಷದ ಮಕ್ಕಳಿಗಿಂತ 15-16ನೇ ವರ್ಷದ ಮಕ್ಕಳಲ್ಲಿ ಶಾಲೆ ಬಿಟ್ಟವರು ಹೆಚ್ಚಿದ್ದಾರೆ. 6ರಿಂದ 14 ವರ್ಷ ಮಕ್ಕಳಲ್ಲಿ 260 ಮಂದಿ ಶಾಲಾ ಶಿಕ್ಷಣದಿಂದ ಹೊರಗಿರುವುದು ಕಂಡುಬಂದಿದ್ದು, ಅವರಲ್ಲಿ 246 ಮಕ್ಕಳನ್ನು ಪುನಃ ಶಾಲೆಗೆ ದಾಖಲಿಸಲಾಗಿದೆ. 15-16ನೇ ವರ್ಷದ ಮಕ್ಕಳಲ್ಲಿ 392 ಮಂದಿ ಶಾಲೆಯಿಂದ ಹೊರಗಿದ್ದು, 102 ಮಕ್ಕಳನ್ನು ಮಾತ್ರ ಪುನಃ ಶಾಲೆಗೆ ದಾಖಲಿಸಲು ಸಾಧ್ಯವಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

ವಲಸೆ ಸಮಸ್ಯೆ ಉಭಯ ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳಲ್ಲಿ ವಲಸೆ ಕಾರ್ಮಿಕರ ಮಕ್ಕಳೇ ಹೆಚ್ಚಿದ್ದಾರೆ. ಇಲ್ಲಿನ ಮೂಲ ನಿವಾಸಿಗಳಲ್ಲಿ ಯಾರು ಕೂಡ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೆ ಇರಲು ಸಾಧ್ಯವಿಲ್ಲ. ಹಾಗಿದ್ದಲ್ಲಿ ಶಾಲಾ ಹಂತದಲ್ಲೇ ಸುಲಭವಾಗಿ ಪತ್ತೆ ಹಚ್ಚಲಾಗುತ್ತದೆ. ಆದರೆ, ವಲಸೆ ಕಾರ್ಮಿಕರ ಮಕ್ಕಳು ಒಂದು ಶಾಲೆಯಲ್ಲಿ ದಾಖಲಾತಿ ಪಡೆದು, ವಲಸೆಯ ಸಂದರ್ಭದಲ್ಲಿ ಯಾವುದೇ ಸೂಚನೆ ಇಲ್ಲದೇ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಇನ್ನೊಂದೆಡೆಗೆ ಹೋಗುತ್ತಾರೆ.

ಇಂತಹ ಸಂದರ್ಭದಲ್ಲಿ ಮಕ್ಕಳನ್ನು ಪತ್ತೆ ಮಾಡುವುದು ಕಷ್ಟವಾಗುತ್ತದೆ. ಕೆಲವೊಮ್ಮೆ ಕಾರ್ಮಿಕ ಇಲಾಖೆಯ ಸಹಾಯವನ್ನು ಪಡೆದು ಮಕ್ಕಳು ಶಿಕ್ಷಣ ಮುಂದುವರಿಸಲು ಬೇಕಾದ ಕ್ರಮ ತೆಗೆದುಕೊಳ್ಳುತ್ತೇವೆ. ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್‌ ವ್ಯವಸ್ಥೆ (ಎಸ್‌ಎಟಿಎಸ್‌) ಮೂಲಕ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆಯನ್ನು ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ ವರ್ಗಾಯಿಸಲಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next