ಬೆಂಗಳೂರು: ಕಟ್ಟ ಕಡೆಯ ವ್ಯಕ್ತಿಗೂ ಸುಲಭವಾಗಿ ಲಭ್ಯವಿದ್ದ ಆರೋಗ್ಯ ಸೇವಾ ಸೌಲಭ್ಯ “104- ಸಹಾಯವಾಣಿ’ ಸ್ಥಗಿತಗೊಂಡು ವರ್ಷ ಕಳೆದರೂ ಮರುಜೀವ ಪಡೆದಿಲ್ಲ.
ಹೌದು, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ 104-ಸಹಾಯವಾಣಿ ಸೇವೆಯನ್ನು ಮತ್ತೆ ಪ್ರಾರಂಭಿಸಲು ಆರೋಗ್ಯ ಇಲಾಖೆ ಟೆಂಡರ್ ಪ್ರಕ್ರಿಯೆ ನಡೆಸಿ ಕೆಲ ತಿಂಗಳುಗಳಿಂದ ಸರ್ಕಾರದ ಅನುಮತಿಗಾಗಿ ಕಾದು ಕುಳಿತಿದೆ.
2022ನೇ ಸಾಲಿನಲ್ಲಿ ಆರೋಗ್ಯ ಇಲಾಖೆಯು ಆಹ್ವಾನಿಸಿದ್ದ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಕೆಲ ಕಂಪನಿಗಳ ಪೈಕಿ ಅಶೋಕ್ ಬಿಲ್ಡ್‌ಕಾನ್ ಸಂಸ್ಥೆಗೆ ಟೆಂಡರ್ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ. ಆದರೆ, ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಲು ಆಗುತ್ತಿಲ್ಲ. ಕೆಲ ತಾಂತ್ರಿಕ ಕಾರಣಗಳಿಂದ ಸೇವೆ ಆರಂಭಿಸಲು ಇನ್ನೂ ಗ್ರೀಲ್ ಸಿಗ್ನಲ್ ಕೊಟ್ಟಿಲ್ಲ. ಒಂದು ವೇಳೆ ಸರ್ಕಾರವು ಈಯೋಜನೆಗೆ ಅನುಮತಿ ನೀಡದಿದ್ದರೆ ಈ ಸೇವೆ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ.
ಸರ್ಕಾರದಿಂದ ಅನುಮತಿ ಸಿಕ್ಕಿದರೆ 100 ಸಿಬ್ಬಂದಿಯನ್ನೊಳಗೊಂಡ 104-ಸಹಾಯವಾಣಿ ಕಚೇರಿಯನ್ನು ಬೆಂಗಳೂರಿನಲ್ಲಿ ಆರಂಭಿಸಲಾಗುವುದು. ಜನರ ಸ್ಪಂದನೆ ನೋಡಿಕೊಂಡು ಮುಂದಿನ ದಿನಗಳಲ್ಲಿ 200 ಸಿಬ್ಬಂದಿ ನೇಮಿಸುವ ಬಗ್ಗೆ ಚರ್ಚಿಸಲಾಗಿದೆ. ಇಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಯನ್ನು ಹೊರ ಗುತ್ತಿದೆ ಆಧಾರದಲ್ಲಿ ನೇಮಿಸಿಕೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ.ರಂದೀಪ್ “ಉದಯವಾಣಿ’ಗೆ ತಿಳಿಸಿದ್ದಾರೆ.
Related Articles
104 ಸಹಾಯವಾಣಿ ಸ್ಥಗಿತಗೊಂಡಿದ್ದೇಕೆ?: 2021ರಲ್ಲಿ ಹೈದ್ರಾಬಾದ್ ಮೂಲದ ಪೆರುಮಾಳ್ ಸ್ವಾಸ್ಥ್ಯ ನಿರ್ವಹಣೆ ಮತ್ತು ಸಂಶೋಧನಾ ಸಂಸ್ಥೆಯು 104 ಸಹಾಯವಾಣಿ ಸೇವೆ ಒದಗಿಸಲು ಗುತ್ತಿಗೆ ಪಡೆದಿತ್ತು. ಹಂತ-ಹಂತವಾಗಿ ಸರ್ಕಾರವು ಹಣ ಬಿಡುಗಡೆ ಮಾಡಿದರೂ ಒಡಂಬಡಿಕೆಯಂತೆ ಸರ್ಕಾರ ಹಣ ನೀಡಿಲ್ಲ ಎಂದು ಆರೋಪಿಸಿ ಈ ಸಂಸ್ಥೆಯು ಆದರೆ 2022ರ ಫೆಬ್ರವರಿಯಲ್ಲಿ ಅರ್ಧಕ್ಕೆ ಸೇವೆ ಸ್ಥಗಿತಗೊಳಿಸಿತ್ತು.
ಹೀಗಾಗಿ ಹೊಸ ಕಂಪನಿಗೆ ಗುತ್ತಿಗೆ ನೀಡಲು ಟೆಂಡರ್ ಆಹ್ವಾನಿಸಲಾಗಿತ್ತು. ಖಾರ್ವಿ ಎಂಬ ಸಂಸ್ಥೆ ಬಿಡ್ ಮಾಡಿ ಟೆಂಡರ್ ಪಡೆಯಲು ಮುಂದಾಗಿತ್ತಾದರೂ ಅಂತಿಮ ಹಂತದಲ್ಲಿ ಈಸಂಸ್ಥೆಯು ಬ್ಲ್ಯಾಕ್ ಲೀಸ್ಟ್‌ನಲ್ಲಿದ್ದ ಹಿನ್ನೆಲೆಯಲ್ಲಿ ಇದು ಸಾಧ್ಯವಾಗಿರಲಿಲ್ಲ.
ಆರೋಗ್ಯ ಸೇವಾ ಮಾಹಿತಿ ಒದಗಿಸಲು 2013ರ ಜೂ.19ರಂದುದೇಶದಲ್ಲೇ ಮೊದಲ ಬಾರಿಗೆ “ಆರೋಗ್ಯವಾಣಿ 104′ ಆರಂಭಿಸಲಾಗಿತ್ತು. ದಿನದ 24 ಗಂಟೆಯೂ ಸೇವೆ ನೀಡುತ್ತಿದ್ದ 104 ಸಹಾಯವಾಣಿಯು ಬಡವರ ಸಂಜೀವಿನಿಯಾಗಿತ್ತು. ಆಸ್ಪತ್ರೆಗಳ ಸೌಲಭ್ಯಗಳಿಂದ ವಂಚಿತರಾಗಿರುವ ಕರ್ನಾಟಕದ ಗ್ರಾಮೀಣ ಭಾಗದ ಜನರಿಗೆ 104 ಆರೋಗ್ಯ ಸಹಾಯವಾಣಿಯ ಮೂಲಕ ತಜ್ಞ ವೈದ್ಯರ ಸಲಹೆ ಪಡೆಯಲು ನೆರವಾಗುತ್ತಿತ್ತು.
ಪ್ರತಿನಿತ್ಯ 20 ಸಾವಿರಕ್ಕೂ ಅಧಿಕ ಕರೆಗಳು ಬರುತ್ತಿದ್ದವು.
ಸಹಾಯವಾಣಿ ಸ್ಥಗಿತಗೊಂಡ ಬಳಿಕ ಕೆಲಸ ಕಳೆದುಕೊಂಡಿದ್ದ 350ಕ್ಕೂ ಹೆಚ್ಚಿನ ಸಿಬ್ಬಂದಿ.
40 ಲಕ್ಷ ರೂ. ಬಿಲ್ ಅನ್ನು ಬಿಎಸ್‌ಎನ್‌ಎಲ್ ಬಳಿ ಬಾಕಿ ಉಳಿಸಿಕೊಂಡಿದ್ದಕ್ಕೆ ಸಹಾಯವಾಣಿ ಸಂಪರ್ಕ ಕಡಿತ.
ಸಹಾಯವಾಣಿಯಿಂದ ವೈದ್ಯಕೀಯವಾಗಿ ಮೌಲ್ಯೀಕರಿಸಿದ ಸಲಹೆ, ಸರ್ಕಾರಗಳು ಪ್ರಾರಂಭಿಸಿರುವ ಆರೋಗ್ಯ ಸಂಬಂಧಿತ ಯೋಜನೆಗಳ ಮಾಹಿತಿ ಪಡೆಯಲೂ ಅವಕಾಶ.
104 ಸಹಾಯವಾಣಿ ಸೇವೆಯಿಂದ ಲಕ್ಷಾಂತರ ಮಂದಿ ಬಡ ಜನರಿಗೆ ಅನುಕೂಲವಾಗಿದೆ. ಟೆಂಡರ್ ಪ್ರಕ್ರಿಯೆ ಅಂತಿಮಗೊಳ್ಳದಿದ್ದ ಕಾರಣ ಕಳೆದ 1 ವರ್ಷಗಳಿಂದ ಈ ಸೇವೆಯು ಸ್ಥಗಿತಗೊಂಡಿತ್ತು. – ಡಿ.ರಂದೀಪ್, ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
-ಅವಿನಾಶ್ ಮೂಡಂಬಿಕಾನ