Advertisement

ಕೆಎಸ್‌ಆರ್‌ಪಿಗೆ 102 ಅತ್ಯಾಧುನಿಕ ವಾಹನ

03:45 AM Jan 28, 2017 | |

ಬೆಂಗಳೂರು :ಪೊಲೀಸ್‌ ಇಲಾಖೆಗೆ ಅಗತ್ಯ ವಾಹನ ಸಹಿತ ಅತ್ಯಾಧುನಿಕ ಸಲಕರಣೆ ಹಾಗೂ ಪೊಲೀಸ್‌ ಸಿಬ್ಬಂದಿಗೆ ನ್ಯಾಯಯುತ ವೇತನ, ಭತ್ಯೆ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Advertisement

ವಿಧಾನಸೌಧ ಮುಂಭಾಗ ಕೆಎಸ್‌ಆರ್‌ಪಿಗೆ ಹೊಸದಾಗಿ ಸೇರ್ಪಡೆಯಾದ 102 ಬಸ್‌ಗಳ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪೊಲೀಸ್‌ ಇಲಾಖೆಯ ಎಲ್ಲ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲಿದೆ. ಪೊಲೀಸರೂ ಸಹ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು ಎಂದು ಹೇಳಿದರು.

ಪೊಲೀಸರು ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ಸೌಲಭ್ಯ ಒದಗಿಸುವುದು ಸರ್ಕಾರದ ಜವಾಬ್ದಾರಿ. ಇಲಾಖೆಗೆ ಅಗತ್ಯವಾದ ವಾಹನ ವ್ಯವಸ್ಥೆ ಇದೀಗ ಮಾಡಲಾಗಿದೆ. ಗಸ್ತು ವಾಹನಗಳ ಸಂಖ್ಯೆ ಸಹ ಹೆಚ್ಚಿಸಲಾಗುವುದು ಎಂದು ತಿಳಿಸಿದರು.

ಕೆಎಸ್‌ಆರ್‌ಪಿ ಸಿಬ್ಬಂದಿ ದೂರದ ಊರುಗಳಿಗೆ ಸಂಚರಿಸುತ್ತಾರೆ.ಅವರಿಗೆ ಈಗ ಒದಗಿಸಿರುವ ವಾಹನಗಳಿಂದ ಅನುಕೂಲವಾಗುತ್ತದೆ. ಮಹಿಳಾ ಪೊಲೀಸರಿಗೆ ಶೌಚಾಲಯ ಸಹಿತ ವಾಹನ ವ್ಯವಸ್ಥೆ ಕಲ್ಪಿಸುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪೊಲೀಸರಿಗೆ ಸೌಲಭ್ಯ  ಒದಗಿಸುವ ವಿಚಾರದಲ್ಲಿ ಸರ್ಕಾರ ಮುಕ್ತ ಮನಸ್ಸು ಹೊಂದಿದೆ. ಆರೋಗ್ಯ ತಪಾಸಣೆಗೆ ಸಾವಿರ ರೂ.ನೀಡಲಾಗುತ್ತಿದೆ. ಸಿಬ್ಬಂದಿಗೆ ಪ್ರತಿ ತಿಂಗಳು ಎರಡು ಸಾವಿರ ರೂ.ಗಳ ಭತ್ಯೆ ನೀಡಲಾಗುತ್ತಿದೆ.ಬಡ್ತಿ ಅವಕಾಶ ಸಿಗುವಂತೆಯೂ ನೋಡಿಕೊಳ್ಳಲಾಗಿದೆ ಎಂದು ತಿಳಿಸಿದರು.ಪೊಲೀಸರ ಮಕ್ಕಳಿಗೆ ಸಿಬಿಎಎಸ್‌ಸಿ ಗುಣಮಟ್ಟದ ಶಾಲೆಗಳನ್ನು ಬೆಂಗಳೂರು ಹಾಗೂ ಮೈಸೂರು ವಲಯದಲ್ಲಿ ತೆರೆಯಲಾಗಿದೆ. ಇದನ್ನು ಎಲ್ಲ ವಲಯಗಳಿಗೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Advertisement

ಗೃಹ ಸಚಿವ ಡಾ.ಜಿ.ಪರಮೇಶ್ವರ್‌,ಪೊಲೀಸ್‌ ಮಹಾ ನಿರ್ದೇಶಕ ಓಂಪ್ರಕಾಶ್‌,ಗೃಹಸಚಿವರ ಸಲಹೆಗಾರ ಕೆಂಪಯ್ಯ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next