ಹೈದರಾಬಾದ್ : 9 ನೇ – 10 ನೇ ಶತಮಾನದ ಅವಧಿಯ ಜೈನ ಮಠದ ಅಸ್ತಿತ್ವವನ್ನು ತೋರಿಸುವ ತೀರ್ಥಂಕರರ ಶಿಲ್ಪಗಳು ಮತ್ತು ಶಾಸನಗಳನ್ನು ಹೊಂದಿರುವ ಎರಡು ಚದರ ಸ್ತಂಭಗಳು ಇತ್ತೀಚೆಗೆ ಹೈದರಾಬಾದ್‌ನ ಹೊರವಲಯದಲ್ಲಿರುವ ಹಳ್ಳಿಯಲ್ಲಿ ಕಂಡುಬಂದಿವೆ.
ನಿವೃತ್ತ ಸರಕಾರಿ ಅಧಿಕಾರಿ ಖ್ಯಾತ ಪುರಾತತ್ವಶಾಸ್ತ್ರಜ್ಞ ಇ.ಶಿವನಾಗಿ ರೆಡ್ಡಿ ಮತ್ತು ಯುವ ಪುರಾತತ್ವಶಾಸ್ತ್ರಜ್ಞ ಪರಂಪರೆಯ ಕಾರ್ಯಕರ್ತ ಪಿ. ಶ್ರೀನಾಥ್ ರೆಡ್ಡಿ ಅವರು ರಂಗಾ ರೆಡ್ಡಿ ಜಿಲ್ಲೆಯ ಮೊಯಿನಾಬಾದ್ ಮಂಡಲದ ಎನಿಕೆಪಲ್ಲಿ ಗ್ರಾಮದಲ್ಲಿ ಸ್ಥಳವನ್ನು ಪರಿಶೀಲಿಸಿ, ಎರಡು ಸ್ತಂಭಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
”ಎರಡು ಸ್ತಂಭಗಳಲ್ಲಿ ನಾಲ್ಕು ಜೈನ ತೀರ್ಥಂಕರರ ಕೆತ್ತನೆಗಳನ್ನು ಹೊಂದಿದ್ದು, ಆದಿನಾಥ, ನೇಮಿನಾಥ, ಪಾರ್ಶ್ವನಾಥ ಮತ್ತು ವರ್ಧಮಾನ ಮಹಾವೀರರು ನಾಲ್ಕು ಬದಿಗಳಲ್ಲಿ ಧ್ಯಾನದಲ್ಲಿ ಕುಳಿತಿದ್ದಾರೆ ಮತ್ತು ಮೇಲ್ಭಾಗದಲ್ಲಿ ‘ಕೀರ್ತಿಮುಖ’ಗಳಿಂದ ಅಲಂಕರಿಸಲಾಗಿದೆ” ಎಂದು ಶಿವನಾಗಿ ರೆಡ್ಡಿ ಹೇಳಿದರು.
ಎರಡೂ ಚಪ್ಪಡಿಗಳಲ್ಲಿ ತೆಲುಗು-ಕನ್ನಡ ಲಿಪಿಯಲ್ಲಿ ಶಾಸನಗಳಿದ್ದು, ಅವುಗಳನ್ನು ಗ್ರಾಮದ ತೊಟ್ಟಿಯ ಗೋಡೆಗಳಲ್ಲಿ ಅಳವಡಿಸಿರುವುದರಿಂದ ಅರ್ಥೈಸಲು ಸಾಧ್ಯವಾಗುತ್ತಿಲ್ಲ ಎಂದರು.
ಶಾಸನವೊಂದರ ಗೋಚರ ಭಾಗವು ರಾಷ್ಟ್ರಕೂಟ ಮತ್ತು ವೇಮುಲವಾಡ ಚಾಲುಕ್ಯರ ಕಾಲದಲ್ಲಿ (9ನೇ-10ನೇ ಶತಮಾನ CE) ಪ್ರಮುಖ ಜೈನ ಕೇಂದ್ರವಾಗಿದ್ದ ಮಂಡಲದ ಚಿಲುಕೂರು ಗ್ರಾಮಕ್ಕೆ ಸಮೀಪದಲ್ಲಿರುವ ‘ಜೈನ ಬಸದಿ’ (ಮಠ)ವಯ ಉಲ್ಲೇಖಿಸುತ್ತದೆ.
“ಚಿಲುಕೂರಿನ ಬಳಿ ಸುಮಾರು 1,000 ವರ್ಷಗಳ ಹಿಂದೆ ಜೈನ ಮಠ ಅಸ್ತಿತ್ವದಲ್ಲಿತ್ತು ಎಂದು ನಾವು ಹೇಳಬಹುದು ”ಎಂದು ಶಿವನಾಗಿ ರೆಡ್ಡಿ ಪಿಟಿಐಗೆ ತಿಳಿಸಿದರು. ಚಿಲ್ಕೂರ್ ಗ್ರಾಮವು ಈಗ ಪ್ರಸಿದ್ಧವಾದ ಭಗವಾನ್ ಬಾಲಾಜಿ ದೇವಸ್ಥಾನವನ್ನು ಹೊಂದಿದೆ.