ಕಲಬುರಗಿ: ದೇಶದಲ್ಲೇ ಮೊದಲು ಕೋವಿಡ್ 19 ಸೋಂಕಿಗೆ ಬಲಿಯಾದ ಬಿಸಿಲೂರು ಕಲಬುರಗಿ ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ ನೂರು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ದಿಢೀರನೆ ಒಟ್ಟು ಸೋಂಕಿತರ ಸಂಖ್ಯೆ 405ಕ್ಕೆ ಏರಿಕೆಯಾಗಿದೆ.
ಎಲ್ಲ ನೂರು ಕೋವಿಡ್ ಸೋಂಕಿತರು ಮಹಾರಾಷ್ಟ್ರದಿಂದ ಮರಳಿ ಬಂದವರೇ ಆಗಿದ್ದಾರೆ. ಇವರೆಲ್ಲರೂ 14 ದಿನಕ್ಕೂ ಹೆಚ್ಚು ದಿನ ಕ್ವಾರಂಟೈನ್ ಕೇಂದ್ರದಲ್ಲಿ ಇದ್ದರು. ಆದರೆ, ಪ್ರಯೋಗಾಲಯದ ವರದಿ ವಿಳಂಬ ಹಾಗೂ ಕ್ವಾರಂಟೈನ್ ಅವಧಿಯನ್ನು 14 ದಿನದಿಂದ 7 ದಿನಕ್ಕೆ ಇಳಿಸಿದ ನಂತರ ಹೋಂ ಕ್ವಾರಂಟೈನ್ ಗೆ ಕಳುಹಿಸಲಾಗಿದೆ.
ಕ್ವಾರಂಟೈನ್ ಕೇಂದ್ರದಿಂದ ಮನೆಗೆ ತೆರಳಿದ ನಂತರ ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟಿದ್ದು, ಸೋಂಕಿತರೆಲ್ಲರನ್ನೂ ಮತ್ತೆ ಐಸೋಲೇಷನ್ ವಾರ್ಡ್ ಗೆ ರವಾಸಿಸುವ ಸವಾಲು ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಎದುರಾಗಿದೆ.
ಮಹಾರಾಷ್ಟ್ರ ಸೇರಿ ಒಟ್ಟು 35 ಸಾವಿರಕ್ಕೂ ಅಧಿಕ ಜನರನ್ನು ಕ್ವಾರಂಟೈನ್ ಮಾಡಲಾಗಿತ್ತು. ಸರ್ಕಾರದ ನಿಯಮ ಬದಲಾವಣೆ ನಂತರ ಕಳೆದ ನಾಲ್ಕು ದಿನಗಳಲ್ಲಿ 29 ಸಾವಿರ ಕ್ವಾರಂಟೈನಿಗಳನ್ನು ಮನೆಗೆ ಕಳುಹಿಸಲಾಗಿದೆ. ಇದರಲ್ಲಿ ಅನೇಕರಿಗೆ ಥರ್ಮಲ್ ಸ್ಕ್ಯಾನಿಂಗ್ ಮಾತ್ರ ಮಾಡಲಾಗಿದ್ದು, ಕೆಲವರಿಗೆ ಗಂಟಲು ದ್ರಾವಣ ಮಾದರಿಯನ್ನು ಸಂಗ್ರಹಿಸಲಾಗಿದೆ.
ಮಾದರಿ ಸಂಗ್ರಹಿಸಿದವರನ್ನೂ ಮನೆಗೆ ರವಾನಿಸಲಾಗಿದ್ದು, ಈಗ ಅವರಲ್ಲಿ ಕೋವಿಡ್ ಪಾಸಿಟಿವ್ ಎಂದು ವರದಿ ಬರುತ್ತಿರುವುದಿಂದ ಗ್ರಾಮೀಣ ಭಾಗದಲ್ಲಿ ಹಚ್ಚಿನ ಆತಂಕ ಮನೆ ಮಾಡುವಂತೆ ಆಗಿದೆ. ಈಗ ಕ್ವಾರಂಟೈನ್ ಮುಗಿಸಿ ಮನೆಗೆ ತೆರಳಿದವರ ಗಂಟಲು ಮಾದರಿಯನ್ನೂ ಸಂಗ್ರಹಿಸಲು ಜಿಲ್ಲಾಡಳಿತ ಮುಂದಾಗಿದೆ. ಇದರಿಂದ ಮತ್ತಷ್ಟು ಕೋವಿಡ್ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆ ಇದೆ.