Advertisement

ಸೇಡಂ ರೈತರ ಖಾತೆಗೆ 100 ಕೋಟಿ ಜಮಾ

10:34 AM May 24, 2022 | Team Udayavani |

ಕಲಬುರಗಿ: ಸರ್ಕಾರದ ವಿವಿಧ ಯೋಜನೆಗಳಿಂದ ಸೇಡಂ ತಾಲೂಕಿನ ರೈತರಿಗೆ 100 ಕೋ.ರೂ ಅಧಿಕ ಪರಿಹಾರ ಹಾಗೂ ನೆರವು ನಿಟ್ಟಿನಲ್ಲಿ ಅವರ ಖಾತೆಗಳಿಗೆ ನೇರವಾಗಿ ಜಮಾ ಆಗಿದೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಾಜಕುಮಾರ ಪಾಟೀಲ್‌ ತೇಲ್ಕೂರ ತಿಳಿಸಿದರು.

Advertisement

ಸೇಡಂ ಪಟ್ಟಣದ ತಾಪಂ ಸಭಾಂಗಣದಲ್ಲಿ ಮಳೆಗಾಲ ಆರಂಭದ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಪೂರ್ವ ಸಿದ್ಧತಾ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, 2021-22ನೇ ಸಾಲಿನಲ್ಲಿ ವಿವಿಧ ಯೋಜನೆಗಳ ಮೂಲಕ ತಾಲೂಕಿನ ರೈತರಿಗೆ ಬರೋಬ್ಬರಿ 100 ಕೋಟಿ ಹಣ ನೇರವಾಗಿ ಅವರ ಖಾತೆಗೆ ಬಂದಿದೆ. ಬೆಳೆವಿಮೆ ಮಾಡಿಕೊಂಡ 4862 ಜನ ರೈತರಿಗೆ 5.23 ಕೋಟಿ ಪರಿಹಾದ ಹಣ ಬಂದಿದೆ. ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಲ್ಲಿ ಒಟ್ಟು 27,384 ರೈತರಿಗೆ 60 ಕೋಟಿ ಹಣ ಸಂದಾಯವಾಗಿದೆ. ಬೆಳೆ ಪರಿಹಾರ ಯೋಜನೆಯಲ್ಲಿ 19,940 ಜನ ರೈತರಿಗೆ 23 ಕೋಟಿ 22 ಲಕ್ಷ ರೂ. ಹಣ ನೀಡಲಾಗಿದೆ. ಇನ್ನೂ ಹೆಚ್ಚು ರೈತರು ಬೆಳೆವಿಮೆ ಮಾಡಿಸಿಕೊಳ್ಳಬೇಕೆಂದರು.

ಇನ್ನು ಮಳೆಗಾಲದಲ್ಲಿ ಯಾವ ಅಧಿಕಾರಿಯು ಕುಂಟು ನೆಪ ಹೇಳಿ ರಜೆ ಪಡೆಯುವಂತಿಲ್ಲ. ಕೇಂದ್ರ ಸ್ಥಾನದಲ್ಲಿಯೇ ಇದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು. ಗಂಜಿ ಕೇಂದ್ರಗಳನ್ನು ಗುರುತಿಸಿ ಬೇಕಾದ ಸಿದ್ಧತೆ ಮಾಡಿಕೊಳ್ಳಬೇಕು. ಬೆಳೆ ಸಮೀಕ್ಷೆ, ಮನೆಗಳಿಗೆ ನೀರು ನುಗ್ಗಿ ನಷ್ಟ ಸಂಭವಿಸಿದ್ದು, ಮನೆ ಗೋಡೆ ಬಿದ್ದದ್ದು ಸಮೀಕ್ಷೆ ಮಾಡುವಾಗ ಸ್ವಲ್ಪ ಮಾನವೀಯತೆ ಇಟ್ಟು ವರದಿ ಮಾಡಬೇಕು. ಬಡವರ, ರೈತರ ಪರವಾದ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದರು.

ತಹಶೀಲ್ದಾರ್‌ ಬಸವರಾಜ ಬೆಣ್ಣೆಶಿರೂರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ.ಕಾರ್ತಿಕ, ಕೃಷಿ ಅಧಿಕಾರಿಗಳು ಸಭೆಯಲ್ಲಿದ್ದರು.2022-23ನೇ ಸಾಲಿನ ಬೆಳೆ ವಿಮೆಗೆ ಜುಲೈ 31ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ಉದ್ದು, ಹೆಸರು, ತೊಗರಿ ಸೇರಿದಂತೆ ಇನ್ನಿತರ ಬೆಳೆಗಳಿಗೆ ವಿಮೆ ಮಾಡಿಸಬಹುದು. ರೈತರು ವಿಮೆಯ ಲಾಭ ಪಡೆದುಕೊಳ್ಳಬೇಕು. ಬಿತ್ತನೆ ಬೀಜದ ಯಾವುದೇ ಕೊರತೆ ಇಲ್ಲ. ಸಕಾಲಕ್ಕೆ ಬೀಜ ಮತ್ತು ಗೊಬ್ಬರ ನೀಡಲಾಗುವುದು. -ಎ.ವೈ. ಹಂಪಣ್ಣ, ಸಹಾಯಕ ಕೃಷಿ ನಿರ್ದೇಶಕ

ಪಿಎಂ ಕಿಸಾನ್‌ ಸಮ್ಮಾನ ಯೋಜನೆಯಲ್ಲಿ ಹಿಂದೆಂದು ಬಾರದಷ್ಟು ಹಣ ಬರುತ್ತಿದೆ. ಕಂದಾಯ ಮತ್ತು ಕೃಷಿ ಅಧಿಕಾರಿಗಳ ಸತತ ಪರಿಶ್ರಮದಿಂದ ಸೇಡಂ ತಾಲೂಕಿನ ರೈತರಿಗೆ 60 ಕೋಟಿ ಹಣ ನೇರವಾಗಿ ಅವರ ಖಾತೆಗೆ ಬರುತ್ತಿದೆ. ಸರ್ಕಾರದ ಎಲ್ಲ ಯೋಜನೆಗಳನ್ನು ಅವರ ಮನೆ ಬಾಗಿಲಿಗೆ ಹೋಗಿ ತಲುಪಿಸಿ, ಜನ ಸಾಮಾನ್ಯರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವಲ್ಲಿ ಶ್ರಮ ವಹಿಸುವಂತೆ ಸೂಚನೆ ನೀಡಿದ್ದೇನೆ. -ರಾಜಕುಮಾರ ಪಾಟೀಲ ತೆಲ್ಕೂರ, ಶಾಸಕ

Advertisement
Advertisement

Udayavani is now on Telegram. Click here to join our channel and stay updated with the latest news.

Next